Advertisement

ಪ್ರಾಂತೀಯ ಲೇಖಕರ, ಓದುಗರ ಸಮಾವೇಶ

06:20 PM Mar 03, 2020 | Suhan S |

ಮುಂಬಯಿ, ಮಾ. 2: ಎಲ್ಲರಿಗೂ ಪ್ರೇರಣೆಯಾಗಿ ಕಳೆದ 80 ವರ್ಷಗಳಿಂದ ಒಂದು ಪತ್ರಿಕೆಯನ್ನು ನಡೆಸುವ ಸಾಹಸ ಸಾಮಾನ್ಯ ಕೆಲಸವಲ್ಲ. ಸಂಘ ಸಂಸ್ಥೆಗಳಿಗೆ ಇದೊಂದು ಅತ್ಯಂತ ದೊಡ್ಡ ಸವಾಲು. ಹತ್ತು ಜನರು ಸೇರಿ ಹಲವಾರು ವಿಚಾರ ವಿನಿಮಯದೊಂದಿಗೆ ಹೊರಬಂದ ಮೊಗವೀರ ಮಾಸ ಪತ್ರಿಕೆ ಸಮಸ್ತ ಮುಂಬಯಿ ತುಳು ಕನ್ನಡಿಗರ ಕೈಗನ್ನಡಿ. ಮುಂಬಯಿ ಸಾರಸ್ವತ ಲೋಕಕ್ಕೆ ಮೊಗವೀರ ಜನಾಂಗದ ಕೊಡುಗೆ ಅಪಾರ. ಹೊರನಾಡಿನಲ್ಲಿ ನಾಡುನುಡಿಯ ಸಂಸ್ಕೃತಿಯನ್ನು ಗಟ್ಟಿಗೊಳಿಸುವಲ್ಲಿ ಮೊಗವೀರ ಪತ್ರಿಕೆ ಮಹಾನಗರದ ಇತಿಹಾಸ ಪತ್ರಿಕೆ ಎಂದು ಮುಂಬಯಿಯ ಹಿರಿಯ ಸಾಹಿತಿ ಡಾ| ಸುನೀತಾ ಶೆಟ್ಟಿ ಅಭಿಪ್ರಾಯ ವ್ಯಕ್ತಪಡಿಸಿದರು.

Advertisement

ಮಾ. 1ರಂದು ಮೀರಾ-ಭಾಯಂದರ್‌ನ ಸಾಯಿಬಾಬಾ ನಗರದ ಸೈಂಟ್‌ಥೋಮಸ್‌ ಚರ್ಚ್‌ ಹಾಲ್‌ನಲ್ಲಿ ಮೊಗವೀರ ವ್ಯವಸ್ಥಾಪಕ ಮಂಡಳಿ, ಮೀರಾ ಭಾಯಂದರ್‌ ಶಾಖೆಯು ಕನ್ನಡ ವಿಭಾಗ ಮುಂಬಯಿ ವಿಶ್ವವಿದ್ಯಾಲಯ ಸಹಕಾರದೊಂದಿಗೆ ಆಯೋಜಿಸಿದ ಮೊಗವೀರ ಕನ್ನಡ ಮಾಸ ಪತ್ರಿಕೆಯ 80ರ ಸಂಭ್ರಮದ ಪ್ರಾಂತೀಯ ಲೇಖಕರ, ಓದುಗರ ಸಮಾವೇಶದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.

ಪತ್ರಿಕೆಯಲ್ಲಿ ಒಂದು ಲಾಭಾಂಶವೆಂದರೆ ಒಂಟಿ ತನವನ್ನು ಕಳೆಯುವುದು. ಓದುಗರ ಜವಾಬ್ದಾರಿ ಹೆಚ್ಚಿಸುವ ಪ್ರಜ್ಞೆ ಇರುವುದು ಪತ್ರಿಕೆಗೆ. ಹೊರನಾಡ ಕನ್ನಡಿಗರಿಂದ ಇನ್ನಷ್ಟು ಕನ್ನಡಾಭಿಮಾನ ಬೆಳೆಯಲಿ, ಮೊಗವೀರ ಪತ್ರಿಕೆಯು ಮಹಾ ನಗರದಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಲಿ ಎಂದು ಹಾರೈಸಿದರು.

ಕಾರ್ಯಕ್ರಮವನ್ನು ದೀಪ ಪ್ರಜ್ವಲಿಸಿ ಉದ್ಘಾಟಿಸಿದ ಮೊಗವೀರ ವ್ಯವಸ್ಥಾಪಕ ಮಂಡಳಿಯ ಅಧ್ಯಕ್ಷ ಕೃಷ್ಣ ಕುಮಾರ್‌ ಎಲ್‌ ಬಂಗೇರ ಅವರು ಮಾತನಾಡಿ, ಮಹಾನಗರದಲ್ಲಿ ಮಾಸಿಕ ಪತ್ರಿಕೆಯೊಂದು ಸುದೀರ್ಘ‌ ಸವಾಲುಗಳೊಂದಿಗೆ 80 ವರ್ಷಗಳಿಂದ ಓದುಗರ ವೈವಿಧ್ಯ ಪತ್ರಿಕೆಯಾಗಿ ಬಂದಿದೆ. ನೇಪಥ್ಯದಲ್ಲಿ ಪತ್ರಿಕೆಯನ್ನು ಈ ಹಂತದವರೆಗೆ ತಲುಪುವಲ್ಲಿ ಹಲವಾರು ಹಿರಿಯ ಲೇಖಕರು, ಹಿರಿಯ ಸಂಪಾದಕರುಗಳ ಕೊಡುಗೆ ಅನನ್ಯ. ಮೊಗವೀರ ವ್ಯವಸ್ಥಾಪಕ ಮಂಡಳಿ ಪ್ರಾರಂಭದ ಪತ್ರಿಕಾ ದಿನದಿಂದಲೂ ಮಹಾನಗರದಲ್ಲಿ ಸಾಹಿತ್ಯ, ಶಿಕ್ಷಣಕ್ಕೆ ಮಹತ್ವ ನೀಡಿದ್ದು, ಮುಂದೆ ಯುವ ಸಂಚಯ ಈ ಜವಾಬ್ದಾರಿಯನ್ನು ಹೊತ್ತು ಬೆಳೆಸಬೇಕು ಎಂದು ಹೇಳಿದರು. ಕಾರ್ಯಕ್ರಮದ ಪ್ರಾರಂಭದಲ್ಲಿ ಸ್ಥಳೀಯ ಶಾಖೆಯ ಮಹಿಳೆಯರು ಪ್ರಾರ್ಥನೆ ಹಾಡಿದರು. ಪತ್ರಿಕೆಯ ಸಂಪಾದಕ ಅಶೋಕ್‌ ಸುವರ್ಣ ಕಳೆದ 80 ದಶಕಗಳ ಮೆಲುಕನ್ನು ನೆನಪಿಸುತ್ತಾ ಮಹಾನಗರದ ಕರ್ಮಭೂಮಿಯಲ್ಲಿ ಕನ್ನಡ ಪತ್ರಿಕೆಯೊಂದನ್ನು ಪ್ರಾರಂಭಿಸುವುದು ಮಹತ್ತರ ಸಾಧನೆ. ಈ ಪತ್ರಿಕೆಯ ಉನ್ನತಿಗೆ ಹಲವಾರು ಲೇಖಕರ, ಸಾಹಿತಿಗಳ ಕೊಡುಗೆ ಇದೆ. ಮರಾಠಿ ನೆಲದಲ್ಲಿ ಕನ್ನಡದ ಸೊಗಡನ್ನು ಉಳಿಸುವಲ್ಲಿ ಮೊಗವೀರ ಪತ್ರಿಕೆ ಯಶಸ್ಸನ್ನು ಕಂಡಿದೆ ಎಂದರು.

ಈ ಸಂದರ್ಭದಲ್ಲಿ ಉಮೇಶ್‌ ಎಚ್‌. ಕರ್ಕೇರ ಅವರ ದೇಶ ವಿದೇಶ ಪ್ರವಾಸ ಲೇಖನಗಳು ಯೋಗೇಶ್‌ ಕಾಂಚನ್‌ ಅವರ ಕವನ ಸಂಕಲನ ನಗ್ನ ಸತ್ಯ ಮತ್ತು ಸಂಪಾದಕ ಅಶೋಕ್‌ ಸುವರ್ಣ ಪರಿಕ್ರಮಣ ಲೇಖನಗಳನ್ನು ಮಂಡಳಿಯ ಟ್ರಸ್ಟಿ ಜಿ.ಕೆ. ರಮೇಶ್‌ ಮುಂಬಯಿ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕಿಯಾದ ಡಾ| ಪೂರ್ಣಿಮಾ ಎಸ್‌. ಶೆಟ್ಟಿ ಮತ್ತು ಡಾ| ಸುನೀತಾ ಶೆಟ್ಟಿ ಅವರು ಬಿಡುಗಡೆ ಮಾಡಿದರು.

Advertisement

ಇದೇ ಸಂದರ್ಭದಲ್ಲಿ ಮೊಗವೀರ ಮಾಸಿಕ ಪತ್ರಿಕೆಯ 80ರ ಮಾಸಿಕ ಸಂಚಿಕೆಯನ್ನು ಬಿಡುಗಡೆಗೊಳಿಸಲಾಯಿತು. ಕೃತಿಯನ್ನು ಬಿಡುಗಡೆಗೊಳಿಸಿದ ಡಾ| ಪೂರ್ಣಿಮಾ ಎಸ್‌. ಶೆಟ್ಟಿ ಅವರು ಮಾತನಾಡಿ, ಸಾಹಿತ್ಯ ಬದುಕಿನ ಛಾಯೆಗೆ ಮುಂಬಯಿ ಪತ್ರಿಕೆಗಳು ಬಹುದೊಡ್ಡ ಕೊಡುಗೆಯಾಗಿವೆ. ಸ್ವಾತಂತ್ರ್ಯ ಪೂರ್ವದಲ್ಲಿ ನಗರದಲ್ಲಿ ಸಾಹಿತ್ಯವನ್ನು ಬೆಳೆಸುವ ಕೆಲಸ ಮೊಗವೀರ ಪತ್ರಿಕೆಯಿಂದ ನಡೆದಿದೆ. 80 ವರ್ಷದಲ್ಲಿ ಹೊಸ ಸಾಹಿತ್ಯ ಪ್ರತಿಭೆ ಸಾಹಿತ್ಯ ಲೋಕವನ್ನು ಮೆಚ್ಚಿಸಿದೆ ಎಂದರು. ಕೃತಿಕಾರರು ತಮ್ಮ ಕೃತಿಗಳ ಬಗ್ಗೆ ವೈಯಕ್ತಿಕ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಸ್ಥಳೀಯ ಶಾಖೆಯ ಕಾರ್ಯದರ್ಶಿ ಗಂಗಾಧರ ಎಸ್‌. ಬಂಗೇರ , ಮೀರಾ-ಭಾಯಂದರ್‌ ಪರಿಸರದಲ್ಲಿ ಮೊಗ ವೀರ ಪತ್ರಿಕೆಯ 80ರ ಸಂಭ್ರಮ ಹಾಗೂ ಮಾಸಿಕ ಸಂಚಿಕೆಯ ಬಿಡುಗಡೆ ನಮ್ಮೆಲ್ಲರಿಗೂ ಸುದೈವ ಅವಕಾಶ ಎಂದು ನುಡಿಯುತ್ತ ಪತ್ರಿಕೆಯ ಸುದೀರ್ಘ‌ ಕಾಲದ ಪ್ರಯಾಣದಲ್ಲಿ ಸಹಕಾರವನ್ನು ನೀಡಿದ ಎಲ್ಲರನ್ನೂ ಸ್ಮರಿಸಿ, ಕಾರ್ಯಕ್ರಮವನ್ನು ನಿರೂಪಿಸಿ ಧನ್ಯವಾದಗೈದರು.

ವೇದಿಕೆಯಲ್ಲಿ ವ್ಯವಸ್ಥಾಪಕ ಮಂಡಳಿಯ ಗೌರವ ಪ್ರಧಾನ ಕಾರ್ಯದರ್ಶಿ ಭಾಸ್ಕರ ಎಲ್‌. ಸಾಲ್ಯಾನ್‌, ಗೌರವ ಕೋಶಾಧಿಕಾರಿ ನೀತಾ ಮೆಂಡನ್‌, ಮೊಗವೀರ ಪತ್ರಿಕೆಯ ಪ್ರಬಂಧಕ ದಯಾನಂದ ಎಲ್‌. ಬಂಗೇರ, ಗೋಪಾಲ ಕಲ್ಕುಟಿ, ಪ್ರಿನ್ಸಿಪಾಲ್‌, ಸೀನಿಯರ್‌ ಕಾಲೇಜ್‌, ಎಂವಿಎಂ, ಸ್ಥಳೀಯ ಶಾಖೆಯ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಸೂರ್ಯಕಲಾ ಎಸ್‌. ಸುವರ್ಣ, ಯುವ ವಿಭಾಗದ ಕಾರ್ಯಾಧ್ಯಕ್ಷ ಸಂಪತ್‌ ಬಿ. ಶ್ರೀಯಾನ್‌ ಉಪಸ್ಥಿತರಿದ್ದರು. ಸ್ಥಳೀಯ ಶಾಖೆಯ ಕಾರ್ಯಾಧ್ಯಕ್ಷ ಸುರೇಶ್‌ ಎಸ್‌. ಕುಂದರ್‌, ಕೋಶಾಧಿಕಾರಿ ತಿಲಕ್‌ ಎನ್‌. ಸುವರ್ಣ, ಮಹಿಳಾ ವಿಭಾಗದ ಕಾರ್ಯದರ್ಶಿ ಅಮಿತಾ ಎಸ್‌. ಶ್ರೀಯಾನ್‌, ಯುವ ವಿಭಾಗದ ಕಾರ್ಯದರ್ಶಿ ಪ್ರಮೋದ್‌ ಆರ್‌. ಪುತ್ರನ್‌, ಮೊಗವೀರ ಕೋ ಆಪರೇಟಿವ್‌ ಬ್ಯಾಂಕಿನ ನಿರ್ದೇಶಕ ಜಯಶೀಲ ತಿಂಗಳಾಯ ಸಾಹಿತ್ಯ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.

ಅನಂತರ ವಿಚಾರಗೋಷ್ಠಿ, ಕವಿಗೋಷ್ಠಿ ಜರಗಿತು. ಮನೋರಂಜನಾ ಕಾರ್ಯಕ್ರಮದ ಅಂಗವಾಗಿ ಮೊಗವೀರ ವ್ಯವಸ್ಥಾಪಕ ಮಂಡಳಿ ಮೀರಾ- ಭಾಯಂದರ್‌ ಶಾಖೆಯ ವತಿಯಿಂದ ವೈವಿಧ್ಯ ಮಯ ಕಾರ್ಯಕ್ರಮಗಳು ಹಾಗೂ ಮುಂಬಯಿಯ ಖ್ಯಾತ ಜಾದೂಗರ ಸೂರಪ್ಪ ಕುಂದರ್‌ ಅವರಿಂದ ಜಾದೂ ಪ್ರದರ್ಶನ ನಡೆಯಿತು.

 

ಚಿತ್ರ- ವರದಿ: ರಮೇಶ್‌ ಉದ್ಯಾವರ

Advertisement

Udayavani is now on Telegram. Click here to join our channel and stay updated with the latest news.

Next