Advertisement

16ರಿಂದ ವಾಣಿಜ್ಯ-ಕೈಗಾರಿಕಾ ಸಂಸ್ಥೆಗಳ ಸಮ್ಮೇಳನ

02:49 PM Jul 10, 2022 | |

ಹುಬ್ಬಳ್ಳಿ: ರಾಜ್ಯಮಟ್ಟದ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಗಳ ಸಮ್ಮೇಳನವನ್ನು ಜು.16-17ರಂದು ಗೋಕುಲ ರಸ್ತೆಯ ಹೋಟೆಲ್‌ ಡೆನಿಸನ್ಸ್‌ನಲ್ಲಿ ಹಮ್ಮಿಕೊಳ್ಳಲಾಗಿದೆ. ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ(ಎಫ್‌ಕೆಸಿಸಿಐ) ಮತ್ತು ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ(ಕೆಸಿಸಿಐ)ಗಳು ಜಂಟಿಯಾಗಿ ಇದೇ ಮೊದಲ ಬಾರಿಗೆ ರಾಜ್ಯಮಟ್ಟದ ಸಮ್ಮೇಳನ ಆಯೋಜಿಸಿವೆ.

Advertisement

ಶನಿವಾರ ಜಂಟಿ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಎಫ್‌ಕೆಸಿಸಿಐ ಅಧ್ಯಕ್ಷ ಡಾ| ಐ.ಎಸ್‌. ಪ್ರಸಾದ, ಕಳೆದ 90 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಎರಡು ಸಂಸ್ಥೆಗಳು ಸೇರಿಕೊಂಡು ರಾಜ್ಯಮಟ್ಟದ ಸಮ್ಮೇಳನ ಹಮ್ಮಿಕೊಳ್ಳಲಾಗಿದೆ. ಉದ್ಯಮ ಹಾಗೂ ಹೂಡಿಕೆಗೆ ಕರ್ನಾಟಕದಲ್ಲಿ ಅಪರಿಮಿತ ಅವಕಾಶಗಳು ಎಂಬ ಧ್ಯೇಯದೊಂದಿಗೆ ಸಮ್ಮೇಳನ ಆಯೋಜಿಸಲಾಗಿದೆ ಎಂದರು.

16ರಂದು ಬೆಳಗ್ಗೆ 10:30 ಗಂಟೆಗೆ ಸಮ್ಮೇಳನದ ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಬೃಹತ್‌ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ ನಿರಾಣಿ, ಇಂಧನ ಸಚಿವ ವಿ.ಸುನಿಲ್‌ ಕುಮಾರ, ಅಮೆಜಾನ್‌ ಇ-ವಾಣಿಜ್ಯ ಸಾರ್ವಜನಿಕ ನೀತಿ ಮುಖ್ಯಸ್ಥ ಉದೈ ಮೆಹ್ತಾ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.

17ರಂದು ಬೆಳಗ್ಗೆ 9 ಗಂಟೆಗೆ ಗದುಗಿನ ಶಿವಾನಂದ ಮಠದ ಜಗದ್ಗುರು ಸದಾಶಿವಾನಂದ ಸ್ವಾಮೀಜಿ ಅಧ್ಯಾತ್ಮಿಕ ಉಪನ್ಯಾಸ ನೀಡಲಿದ್ದಾರೆ. 10 ಗಂಟೆಗೆ ನಡೆಯುವ ವಿಶೇಷ ಕಾರ್ಯಕ್ರಮದಲ್ಲಿ ಜವಳಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ, ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ಪಾಲ್ಗೊಳ್ಳಲಿದ್ದಾರೆ. ಎರಡು ದಿನವೂ ವಿವಿಧ ತಾಂತ್ರಿಕ ಗೋಷ್ಠಿಗಳು ನಡೆಯಲಿವೆ. ಸಮ್ಮೆಳನದಲ್ಲಿ ರಾಜ್ಯದ ಎಲ್ಲ ಜಿಲ್ಲೆ ವಾಣಿಜ್ಯೋದ್ಯಮ ಸಂಸ್ಥೆ ಪದಾಧಿಕಾರಿಗಳು, ಉದ್ಯಮಿಗಳು ಸೇರಿದಂತೆ 600ಕ್ಕೂ ಹೆಚ್ಚು ಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ ಎಂದರು.

ರಾಜ್ಯದಲ್ಲಿ ಉದ್ಯಮಕ್ಕೆ ಸಾಕಷ್ಟು ಅವಕಾಶಗಳು ಇವೆ. ಕಳೆದ 70 ವರ್ಷಗಳಲ್ಲಿ ಆಗಿರುವ ಉದ್ಯಮ ಸುಧಾರಣೆ ಕಳೆದ ಎರಡು ವರ್ಷಗಳಲ್ಲಿ ಜಾರಿಗೊಂಡಿವೆ. ಹೂಡಿಕೆಗೆ ರಾಜ್ಯದಲ್ಲಿ ವಿಫುಲ ಅವಕಾಶಗಳಿವೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಉದ್ಯಮಕ್ಕೆ ಪೂರಕವಾದ ಹಲವು ಕ್ರಮಗಳನ್ನು ಕೈಗೊಂಡಿದ್ದಾರೆ. ಉದ್ಯಮ ವಲಯಕ್ಕೆ ಸೌಲಭ್ಯ ಕಲ್ಪಿಸುವುದು, ಸುಧಾರಣೆ ನೀತಿಗಳ ನಿಟ್ಟಿನಲ್ಲಿ ಸರಕಾರ ಕ್ರಮಗಳ ಬಗ್ಗೆ ನಮಗೆ ತೃಪ್ತಿ ಇದೆ. ಬಾಕಿ ಇರುವ ಸುಮಾರು 60 ಬೇಡಿಕೆಗಳ ಈಡೇರಿಕೆಗೂ ಸರಕಾರಕ್ಕೆ ಮನವಿ ಮಾಡಿದ್ದೇವೆ ಎಂದು ಹೇಳಿದರು.

Advertisement

ಆಹಾರ ಉತ್ಪನ್ನಗಳ ಸಂಸ್ಕರಣೆ ಸೇರಿದಂತೆ ಹಲವು ರೀತಿಯ ಉದ್ಯಮಕ್ಕೆ ರಾಜ್ಯದಲ್ಲಿ ಉತ್ತಮ ಅವಕಾಶವಿದೆ. ಕೃಷಿ ಉತ್ಪನ್ನಗಳಲ್ಲಿ ಸಂಸ್ಕರಣೆ ಇಲ್ಲದೆ ಶೇ.33 ಉತ್ಪನ್ನ ಹಾಳಾಗುತ್ತಿದೆ. ದೇಶದ ಒಟ್ಟು ಜಿಡಿಪಿಗೆ ಕೃಷಿಯ ಪಾಲು ಶೇ.3.56 ಇದ್ದು, ಇದು ಹೆಚ್ಚಬೇಕಿದೆ. ಪುನರ್‌ಬಳಕೆ ಇಂಧನ ಮೂಲಗಳಿಂದ ಶೇ.46ರಷ್ಟನ್ನು ರಾಜ್ಯದಲ್ಲಿ ಬಳಕೆ ಮಾಡಲಾಗುತ್ತಿದೆ. ಎಫ್‌ಕೆಸಿಸಿಐ ಹಾಗೂ ಕೆಸಿಸಿಐ ಇದೇ ಮೊದಲ ಬಾರಿಗೆ ರಾಜ್ಯಮಟ್ಟದ ಸಮ್ಮೇಳನಕ್ಕೆ ಮುಂದಾಗಿರುವುದು ಉತ್ತಮ ನಡೆಯಾಗಿದ್ದು, ರಾಜ್ಯದಲ್ಲಿನ ಉದ್ಯಮ ಅಭಿವೃದ್ಧಿ ದೃಷ್ಟಿಯಿಂದ ಇದು ಮಹತ್ವದ ಸಹಕಾರಿ ಆಗಲಿದೆ. ರಾಜ್ಯಕ್ಕೆ ಹೂಡಿಕೆದಾರರ ಬರಲಿ, ಮುಖ್ಯವಾಗಿ ನಮ್ಮವರ ಹೂಡಿಕೆಗೆ ಹೆಚ್ಚಿನ ಅವಕಾಶ ದೊರೆಯುವಂತಾಗಬೇಕು. ಎಫ್‌ಕೆಸಿಸಿಐಗೆ ರಾಜ್ಯದ ಎಲ್ಲ ಭಾಗದವರೂ ಅಧ್ಯಕ್ಷರಾಗಬೇಕು ಎಂಬುದಕ್ಕೆ ತಮ್ಮ ಸಹಮತ ಇದೆ. ಅದರ ಬಗ್ಗೆ ಈಗ ಹೆಚ್ಚಿನ ಪ್ರತಿಕ್ರಿಯೆಗೆ ಬಯಸುವುದಿಲ್ಲ ಎಂದು ತಿಳಿಸಿದರು.

ಕೆಸಿಸಿಐ ಅಧ್ಯಕ್ಷ ವಿನಯ ಜವಳಿ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿಯವರ ಆಶಯ ದೇಶ 5 ಟ್ರಿಲಿಯನ್‌ ಡಾಲರ್‌ ಆರ್ಥಿಕ ರಾಷ್ಟ್ರವಾಗಿ ಬೆಳೆಯಬೇಕೆಂಬುದಾಗಿದ್ದರೆ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ರಾಜ್ಯದ ಆರ್ಥಿಕತೆ 1.5 ಟ್ರಲಿಯನ್‌ ಡಾಲರ್‌ ಆಗಬೇಕೆಂಬ ಬಯಕೆ ಹೊಂದಿದ್ದಾರೆ. ಅದಕ್ಕೆ ಪೂರಕವಾಗಿ ಉದ್ಯಮ ವಲಯ ಬೆಳೆಯಬೇಕು ಎಂಬ ಉದ್ದೇಶದಿಂದ ಸಮ್ಮೇಳನ ಹಮ್ಮಿಕೊಳ್ಳಲಾಗಿದೆ ಎಂದರು.

ಕೆಸಿಸಿಐ ಮಾಜಿ ಅಧ್ಯಕ್ಷ ರಮೇಶ ಪಾಟೀಲ ಮಾತನಾಡಿದರು. ಕೆಸಿಸಿಐ-ಎಫ್‌ಕೆಸಿಸಿಐ ಪದಾಧಿಕಾರಿಗಳಾದ ರಮೇಶಚಂದ್ರ ಲಹೋತಿ, ಪ್ರವೀಣ ಅಗಡಿ, ಸಂದೀಪ ಬಿಡಾಸಾರಿಯಾ, ಸುಗ್ಣನ ಹಿರೇಮಠ, ಎಸ್‌.ಪಿ. ಸಂಶಿಮಠ, ಶಂಕರ ಕೋಳಿವಾಡ, ಬಿ.ಎಸ್‌. ಸತೀಶ, ಅಶ್ವಿ‌ನ ಕೋತಂಬ್ರಿ, ವಿಶ್ವನಾಥ ಹಿರೇಗೌಡರ, ರವೀಂದ್ರ ಕೋರೆ, ಅರವಿಂದ ಬುರಾಜಿ ಇನ್ನಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next