ಉಳ್ಳಾಲ: ಅಂತಾರಾಷ್ಟ್ರೀಯ ಮಟ್ಟದಲ್ಲಿ ಪರಸ್ಪರ ಜ್ಞಾನ ವಿನಿಮಯ ಹಾಗೂ ಕೌಶಲಗಳನ್ನು ಅರಿಯಲು ಕೋರ್ಸ್ ಸಹಕಾರಿ. ಎರಡನೇ ವರ್ಷ ನಿಟ್ಟೆ ವಿ.ವಿ.ಯಲ್ಲಿ ನಡೆಸುತ್ತಿರುವ ಕೋರ್ಸಿಗೆ ಆಡಳಿತ ಸಂಸ್ಥೆಯ ಉತ್ತಮವಾದ ಸಹಕಾರದಿಂದ ಸಾಧ್ಯವಾಗಿದೆ.
ಸರ್ಜನ್‌ಗಳು ಕೋರ್ಸಿನ ಸದುಪಯೋಗವನ್ನು ಪಡೆಯಬಹುದು ಎಂದು ಇಂಗ್ಲೆಂಡ್‌ನ ಸಿಸಿಆರ್‌ಐಎಸ್‌ಪಿ, ಆರ್‌ಸಿಎಸ್‌ನ ಕೋರ್ಸ್ ನಿರ್ದೇಶಕ ಡಾ| ಇಯಾನ್ ಮಹೇಶ್ವರನ್ ಅಭಿಪ್ರಾಯಪಟ್ಟರು.
ದೇರಳಕಟ್ಟೆಯ ನಿಟ್ಟೆ ಪರಿಗಣಿತ ವಿ.ವಿ.ಯ ಕೆ.ಎಸ್. ಹೆಗ್ಡೆ ವೈದ್ಯಕೀಯ ಅಕಾಡೆಮಿಯ ಬೆಳ್ಳಿಹಬ್ಬದ ಪ್ರಯುಕ್ತ ಇಂಗ್ಲೆಂಡ್‌ನ ರಾಯಲ್ ಕಾಲೇಜ್ ಆಫ್ ಸರ್ಜನ್ಸ್ ಆಶ್ರಯದಲ್ಲಿ (ಸಿಸಿಆರ್‌ಐಎಸ್‌ಪಿ, ಕೋರ್ಸ್) ತೀವ್ರ ನಿಗಾದಲ್ಲಿರುವ ಶಸ್ತ್ರಚಿಕಿತ್ಸಾ ರೋಗಿಯ ಆರೈಕೆ ಕುರಿತು ಕೆ.ಎಸ್. ಹೆಗ್ಡೆ ಆಸ್ಪತ್ರೆಯ ಚಿಂತನ ಸಭಾಂಗಣದಲ್ಲಿ ಸೋಮವಾರ ಆಯೋಜಿಸಲಾದ 6 ದಿನಗಳ ತರಬೇತಿ ಕಾರ್ಯಾಗಾರದ ಉದ್ಘಾಟನೆ ಸಮಾರಂಭದಲ್ಲಿ ಅವರು ಮಾತನಾಡಿದರು.
ನಿಟ್ಟೆ ಪರಿಗಣಿತ ವಿ.ವಿ.ಯ ಕುಲಾಧಿಪತಿ ಎನ್. ವಿನಯ ಹೆಗ್ಡೆ ಕಾರ್ಯ ಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅತಿಥಿಯಾಗಿದ್ದ ನಿಟ್ಟೆ ವಿ.ವಿ.ಯ ಉಪಕುಲಾಧಿಪತಿ ಎನ್. ಶಾಂತಾರಾಮ ಶೆಟ್ಟಿ ಮಾತನಾಡಿ, ಇಂಗ್ಲೆಂಡ್‌ನ ರಾಯಲ್ ಕಾಲೇಜಿನ ಸರ್ಜನ್‌ಗಳು ನೀಡುತ್ತಿರುವ ಕೋರ್ಸ್ ನಿಟ್ಟೆ ಪರಿಗಣಿತ ವಿಶ್ವವಿದ್ಯಾನಿಲಯಕ್ಕೆ ಹೆಮ್ಮೆಯ ವಿಚಾರವಾಗಿದೆ. ವಿಶ್ವ ಆರೋಗ್ಯ ಸಂಸ್ಥೆ ಅಂತರಾಷ್ಟ್ರೀಯ ರೋಗಿಗಳ ಸುರಕ್ಷತೆಗೆ ಆರು ಗುರಿಗಳನ್ನು ಮುಂದಿರಿಸಿದ್ದರೂ ಅಮೆರಿಕದಂತಹ ಅಭಿವೃದ್ಧಿ ಹೊಂದಿದ ರಾಷ್ಟ್ರದಲ್ಲೇ ರೋಗಪತ್ತೆ ಹಚ್ಚೆ ಹಚ್ಚುವಿಕೆ ಸಾಧ್ಯವಾಗದೆ ವಾರ್ಷಿಕ 2.14 ಲಕ್ಷ ಜನ ಸಾವನ್ನಪ್ಪುತ್ತಿದ್ದಾರೆ. ಸೂಕ್ತ ಸಮಯದಲ್ಲಿ ಸೂಕ್ತ ಚಿಕಿತ್ಸೆ ದೊರಕಿಸುವ ಗುರಿಯನ್ನು ಕೋರ್ಸ್ ಹೊಂದಿದೆ. ಹಾಸಿಗೆಯಿಂದ ಮರುಜೀವನ ಕೊಡುವಂತಹ ಕಾರ್ಯಕ್ಕೆ ವೈದ್ಯಕೀಯ ಲೋಕ ಇನ್ನಷ್ಟು ಪರಿಣಾಮಕಾರಿಯಾಗಿ ಕಾರ್ಯಾಚರಿಸಬೇಕಿದೆ ಎಂದರು. ಈ ಸಂದರ್ಭ ನಿಟ್ಟೆ ವಿ.ವಿ. ಕುಲಪತಿ ಡಾ| ಎಂ.ಎಸ್ ಮೂಡಿತ್ತಾಯ, ಕ್ಷೇಮ ಡೀನ್ ಡಾ| ಪಿ ಎಸ್. ಪ್ರಕಾಶ್ ಉಪಸ್ಥಿತರಿದ್ದರು.
ಕೋರ್ಸ್ ಸಂಘಟಕ ಹಾಗೂ ಕ್ಷೇಮ ಸಿಟಿವಿಎಸ್ ವಿಭಾಗದ ಮುಖ್ಯಸ್ಥ ಡಾ| ಜಯಕೃಷ್ಣನ್ ಸ್ವಾಗತಿಸಿದರು. ಕ್ಷೇಮ ಜನರಲ್ ಸರ್ಜರಿ ವಿಭಾಗ ಮುಖ್ಯಸ್ಥ ಡಾ| ಕೆ.ಆರ್. ಭಗವಾನ್ ವಂದಿಸಿದರು.ಡಾ| ಐಶ್ವರ್ಯ ರಂಜಲ್ಕರ್ ಮತ್ತು ಡಾ| ಮೀರಾ ಕಾರ್ಯಕ್ರಮ ನಿರ್ವಹಿಸಿದರು.