ರಬಕವಿ-ಬನಹಟ್ಟಿ: ಇದೇ 30 ರಂದು ನಡೆಯುವ ಗೃಹಲಕ್ಷ್ಮೀ ಯೋಜನೆಯ ಕಾರ್ಯಕ್ರಮವನ್ನು ತಾಲ್ಲೂಕು ಅಧಿಕಾರಿಗಳು ಸರ್ಕಾರದ ಶಿಷ್ಟಾಚಾರದಂತೆ ನಡೆಸಬೇಕು ಎಂದು ಶಾಸಕ ಸಿದ್ದು ಸವದಿ ಅಧಿಕಾರಿಗಳಿಗೆ ತಿಳಿಸಿದರು.
ಸೋಮವಾರ ಇಲ್ಲಿನ ನಗರಸಭೆಯ ಕಾರ್ಯಾಲಯದಲ್ಲಿ ನಡೆದ ತಾಲ್ಲೂಕು ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದರು.
ಕಾರ್ಯಕ್ರಮ ನಡೆಯುವ ಕೇಂದ್ರಗಳ ಸುತ್ತ ಮುತ್ತ ಇರುವ ನಗರಸಭೆ, ಪುರಸಭೆ, ಗ್ರಾಮ ಪಂಚಾಯ್ತಿ ಸದಸ್ಯರುಗಳನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಬೇಕು. ಇದೊಂದು ಉತ್ತಮ ಕಾರ್ಯಕ್ರಮ. ಯಾವುದೇ ರೀತಿಯಲ್ಲಿ ತೊಂದರೆಯಾಗದಂತೆ ಶಾಂತಿಯುತವಾಗಿ ಕಾರ್ಯಕ್ರಮ ನಡೆಸಲು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಶಾಸಕ ಸಿದ್ದು ಸವದಿ ತಿಳಿಸಿದರು.
ರಬಕವಿ ಬನಹಟ್ಟಿ ನಗರಸಭೆಯ ಪೌರಾಯುಕ್ತ ಜಗದೀಶ ಈಟಿ ಮಾತನಾಡಿ, ರಬಕವಿ ಬನಹಟ್ಟಿ ನಗರಸಭೆಯ ವ್ಯಾಪ್ತಿಯ ಬನಹಟ್ಟಿಯ ಈಶ್ವರಲಿಂಗ ಮೈದಾನದಲ್ಲಿ ಮುಖ್ಯ ಕಾರ್ಯಕ್ರಮ, ಬನಹಟ್ಟಿಯ ಸದಾಶಿವ ದೇವಸ್ಥಾನ, ರಾಮಪುರದ ದಾನೇಶ್ವರಿ ಸಮುದಾಯ ಭವನ, ರಬಕವಿಯ ಮಲ್ಲಿಕಾರ್ಜುನ ಸಮುದಾಯ ಭವನ ಮತ್ತು ಹೊಸೂರಿನ ಬನಶಂಕರಿ ಸಮುದಾಯ ಭವನದಲ್ಲಿ ಕಾರ್ಯಕ್ರಮ ನಡೆಯಲಿದೆ.
ತೇರದಾಳ ಪುರಸಭೆಯ ಮುಖ್ಯಾಧಿಕಾರಿ ಆನಂದ ಕೆಸರಗೊಪ್ಪ ಮಾತನಾಡಿ, ತೇರದಾಳದ ಡಾ.ಬಾಬು ಜಗಜೀವನ ರಾಂ ಸಭಾ ಭವನ, ಬ್ರಹ್ಮಾನಂದ ಸಮುದಾಯ ಭವನ, ಪುರಸಭೆಯ ಕಾರ್ಯಾಲಯದಲ್ಲಿ ಕಾರ್ಯಕ್ರಮದ ವ್ಯವಸ್ಥೆ ಮಾಡಲಾಗಿದೆ. ಮಹಾಲಿಂಗಪುರದ ಪುರಸಭೆಯ ಮುಖ್ಯಾಧಿಕಾರಿ ಈರಣ್ಣ ದಡ್ಡಿ ಮಾತನಾಡಿ, ಮಹಾಲಿಂಗಪುರದ ಶಿವಶರಣ ಹರಳಯ್ಯ ಸಮುದಾಯ ಭವನ, ಬನಶಂಕರಿ ಸಮುದಾಯ ಭವನ ಮತ್ತು ಸಾಯಿ ಬಾಬಾ ಮಂದಿರದ ಸಮುದಾಯ ಭವನದಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ರಬಕವಿ ಬನಹಟ್ಟಿ ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಾಹಕ ಅಧಿಕಾರಿ ಸಿದ್ದಪ್ಪ ಬಟ್ಟಿಹಾಳ, ನೋಡಲ್ ಅಧಿಕಾರಿ ಅನಿಲ ಬಗತಿ, ಮುಧೋಳ ಸಿಡಿಪಿಓ ಕೆ.ಜಿ.ಕೊರೆಗೋಳ, ಬಿ.ಜಿ.ಹಿರೇಮಠ ಮಾತನಾಡಿದರು.
ಪ್ರಭಾರ ತಹಶೀಲ್ದಾರ್ ಎಸ್.ಬಿ.ಕಾಂಬಳೆ, ಪಿಎಸ್‌ಐ ರಾಘವೇಂದ್ರ ಖೋತ, ಸೇರಿದಂತೆ ಅನೇಕರು ಇದ್ದರು.