Advertisement

ಬೆಳೆಹಾನಿ ಸಮೀಕ್ಷೆ ಜವಾಬ್ದಾರಿಯಿಂದ ನಡೆಸಿ

03:50 PM Jul 26, 2022 | Team Udayavani |

ಔರಾದ: ಅತಿವೃಷ್ಠಿಯಿಂದಾಗಿ ಔರಾದ ಮತ್ತು ಕಮಲನಗರ ತಾಲೂಕುಗಳಲ್ಲಿ ಉಂಟಾಗಿರುವ ರಸ್ತೆ, ಸೇತುವೆ, ಶಾಲೆ-ಕಾಲೇಜುಗಳು, ಅಂಗನವಾಡಿ ಕಟ್ಟಡ ಸೇರಿ ಇತರೆ ಹಾನಿಯ ಬಗ್ಗೆ ಇಲಾಖಾವಾರು ಸಮೀಕ್ಷೆ ನಡೆಸಿ ವರದಿ ಸಲ್ಲಿಸಬೇಕೆಂದು ಪಶು ಸಂಗೋಪನೆ ಸಚಿವ ಪ್ರಭು ಚವ್ಹಾಣ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

Advertisement

ಇಲ್ಲಿನ ಪಪಂ ಸಭಾಂಗಣದಲ್ಲಿ ಸೋಮವಾರ ನಡೆದ ತಾಲೂಕು ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಸಚಿವರು, ಔರಾದ ಹಾಗೂ ಕಮಲನಗರ ತಾಲೂಕಿನ ಹಲವು ಗ್ರಾಮಗಳಲ್ಲಿ ತಾವು ಸಂಚರಿಸಿ ಹಾನಿಯ ಬಗ್ಗೆ ಕಣ್ಣಾರೆ ವೀಕ್ಷಿಸಿದ್ದೇನೆ. ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಔರಾದ ಕ್ಷೇತ್ರದಲ್ಲಿ ಅತಿವೃಷ್ಟಿಯಿಂದ ಉಂಟಾಗಿರುವ ಹಾನಿಯ ಬಗ್ಗೆ ಮನವರಿಕೆ ಮಾಡಿಕೊಟ್ಟಿದ್ದೇನೆ. ಇದಕ್ಕೆ ಸಿಎಂ ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಅಧಿಕಾರಿಗಳು ಸಲ್ಲಿಸುವ ವರದಿಯನ್ನು ಆಧರಿಸಿ ಅತಿವೃಷ್ಟಿ ಪ್ರದೇಶವೆಂದು ಘೋಷಿಸಲಿದ್ದಾರೆ. ಹಾಗಾಗಿ ಅಧಿಕಾರಿಗಳು ಅಚ್ಚುಕಟ್ಟಾಗಿ ಹಾನಿಯ ಸಮೀಕ್ಷೆ ನಡೆಸಬೇಕು ಎಂದರು.

ಅನೇಕ ಕಡೆಗಳಲ್ಲಿ ಬೆಳೆಗಳು ಹಳದಿ ಬಣ್ಣಕ್ಕೆ ತಿರುಗಿರುವುದು ಕಂಡುಬಂದಿದ್ದು, ಇದು ಒಳ್ಳೆಯ ಸಂಕೇತವಲ್ಲ. ಅಧಿಕಾರಿಗಳು ಈ ಬಗ್ಗೆ ಹೆಚ್ಚಿನ ಗಮನ ಹರಿಸಬೇಕು. ಬೆಳೆ ಹೆಚ್ಚು ಹಾನಿಯಾಗದ ರೀತಿಯಲ್ಲಿ ರೈತರಿಗೆ ತರಬೇತಿ ಮತ್ತು ಜಾಗೃತಿ ಕಾರ್ಯಕ್ರಮ ನಡೆಸಬೇಕು ಎಂದು ಕೃಷಿ ಮತ್ತು ತೋಟಗಾರಿಕೆ ಇಲಾಖೆಯ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಎರಡು ತಾಲೂಕುಗಳಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗಿದ್ದು, ನದಿ ಮತ್ತು ಹಳ್ಳದ ಪ್ರದೇಶಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಬೆಳೆ ಹಾನಿಯಾಗಿದೆ. ಸೋಯಾ ಅವರೆಗಿಂತ ಹೆಸರು, ಉದ್ದು, ತೊಗರಿ ಹೆಚ್ಚಿನ ಹಾನಿಯಾಗಿದೆ. ಕ್ಷೇತ್ರದಲ್ಲಿ 605 ಹೆಕ್ಟೇರ್‌ ಪ್ರದೇಶ ಹಾನಿಯಾಗಿರುವುದು ವರದಿಯಾಗಿದ್ದು, ಮಳೆನಿಂತ ನಂತರ ಸಮೀಕ್ಷೆ ಕಾರ್ಯ ಪೂರ್ಣಗೊಳಿಸಿ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು ಎಂದು ಕೃಷಿ ಸಹಾಯಕ ನಿರ್ದೇಶಕ ಎಂ.ಎ.ಕೆ ಅನ್ಸಾರಿ ಸಭೆಗೆ ಮಾಹಿತಿ ನೀಡಿದರು.

ಅಧಿಕಾರಿಗಳಿಂದ ಮನೆ ಹಾನಿಯ ಬಗ್ಗೆ ವಿವರಣೆ ಪಡೆದ ಸಚಿವರು, ಕ್ಷೇತ್ರದಲ್ಲಿ ಬಹುತೇಕ ಎಲ್ಲ ಸಂತ್ರಸ್ತರಿಗೆ ಪರಿಹಾರಧನ ನೀಡಲಾಗಿದೆ. ಇನ್ನೂ ಬಾಕಿ ಇರುವ ಎಲ್ಲ ಸಂತ್ರಸ್ತರಿಗೆ ಮೊದಲ ಹಂತದಲ್ಲಿ ಕೊಡಲಾಗುತ್ತಿರುವ ಪರಿಹಾರದ ಮೊತ್ತವನ್ನು ತುರ್ತಾಗಿ ಕೊಡುವ ಕೆಲಸ ಮಾಡಬೇಕೆಂದು ತಹಶೀಲ್ದಾರರಿಗೆ ಸೂಚಿಸಿದರು. ಅತಿವೃಷ್ಟಿಯಿಂದ ಹಾನಿಯಾದ ಶಾಲೆ ಮತ್ತು ಅಂಗನವಾಡಿ ಕಟ್ಟಡಗಳ ಬಗ್ಗೆ ಇದೇ ವೇಳೆ ವಿವರಣೆ ಪಡೆದರು.

Advertisement

ಎಲ್ಲ ಶಾಲೆಗಳಿಗೆ ಆಟದ ಮೈದಾನ ಮತ್ತು ಸುತ್ತುಗೋಡೆಗಳನ್ನು ನರೇಗಾದಡಿ ನಿರ್ಮಿಸಿಕೊಡುವ ಉದ್ದೇಶವಿದ್ದು, ಅವಶ್ಯಕತೆಯಿರುವ ಶಾಲೆ ಮತ್ತು ಅಂಗನವಾಡಿಗಳ ಪಟ್ಟಿ ನೀಡುವಂತೆ ತಾಕೀತು ಮಾಡಿದರು. ಸಭೆಯಲ್ಲಿ ತಹಶೀಲ್ದಾರ್‌ ರಮೇಶ್‌ ಪೆದ್ದೆ, ಔರಾದ ತಾಪಂ ಇಒ ಬಿರೇಂದ್ರಸಿಂಗ್‌ ಠಾಕೂರ್‌, ಕಮಲನಗರ ಇಒ ಸೈಯದ್‌ ಫಜಲ್‌ ಮಹಮೂದ್‌, ಮಾಶೆಟ್ಟಿ ಚಿದ್ರಿ ಇನ್ನಿತರ ಅಧಿಕಾರಿಗಳಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next