ಕಾಪು: ಕನ್ನಡ ನಾಡು, ನುಡಿ, ನೆಲ, ಜಲ, ಭಾಷೆ ಮತ್ತು ಸಂಸ್ಕೃತಿಯ ರಕ್ಷಣೆಯಲ್ಲಿ ವರನಟ ಡಾ. ರಾಜ್ ಕುಮಾರ್ ಕುಟುಂಬದ ಕೊಡುಗೆ ಅಪಾರವಾಗಿದೆ. ಅವರ ಕುಟುಂಬದ ಕೊಂಡಿ ಪುನೀತ್ ರಾಜ್ ಕುಮಾರ್ ಅವರ ಅಕಾಲಿಕ ಅಗಲುವಿಕೆ ಕನ್ನಡ ನಾಡಿಗೆ ತುಂಬಲಾರದ ನಷ್ಟವನ್ನುಂಟು ಮಾಡಿದೆ ಎಂದು ಮಾಜಿ ಸಚಿವ ವಿನಯಕುಮಾರ್ ಸೊರಕೆ ಹೇಳಿದರು.
ರವಿವಾರ ಟೀಂ ಮೋದಿ ಕಾಪು ವಲಯ ಮತ್ತು ಪುನೀತ್ ರಾಜ್ ಕುಮಾರ್ ಅಭಿಮಾನಿ ಬಳಗದ ವತಿಯಿಂದ ಕಾಪು ಪೇಟೆಯಲ್ಲಿ ಆಯೋಜಿಸಲಾಗಿದ್ದ ಸಾರ್ವಜನಿಕ ಶ್ರದ್ಧಾಂಜಲಿ ಸಮರ್ಪಣಾ ಕಾರ್ಯಕ್ರಮದಲ್ಲಿ ಭಾಗವಹಿಸಿ, ಅವರು ಮಾತನಾಡಿದರು.
ಪವರ್ ಸ್ಟಾರ್ ಖ್ಯಾತಿಯ ಪುನೀತ್ ರಾಜ್ ಕುಮಾರ್ ಅವರು ತನ್ನ ಅದ್ಭುತ ಮತ್ತು ಅಪ್ರತಿಮ ನಟನಾ ಪ್ರತಿಭೆಯ ಜೊತೆಗೆ ಸೇವಾ ಮನೋಭಾವ ಮತ್ತು ಸಮಾಜಮುಖೀ ಚಿಂತನೆಯ ಮೂಲಕ ಎಲ್ಲರ ಮನಗೆದ್ದಿದ್ದಾರೆ. ಸಹಸ್ರಾರು ವಿದ್ಯಾರ್ಥಿಗಳ, ವೃದ್ಧರ, ಅನಾಥರ ಪಾಲಿಗೆ ದಾರಿದೀಪವಾಗಿ, ಅತೀ ಕಿರಿಯ ವಯಸ್ಸಿನಲ್ಲಿಯೇ ಅಪಾರ ಜನಪ್ರಿಯತೆಯನ್ನು ಗಳಿಸಿದ್ದ ಒಬ್ಬ ಮೃದುಭಾಷಿ, ವಿಶಾಲ ಹೃದಯಿ, ಜನಸ್ನೇಹಿ ವ್ಯಕ್ತಿಯನ್ನು ಕಳೆದು ಕೊಂಡಿರುವುದು ಚಿತ್ರರಂಗ ಮಾತ್ರವಲ್ಲದೇ ಸಂಪೂರ್ಣ ಕನ್ನಡ ನಾಡಿನ ಜನತೆಯ ದೌರ್ಭಾಗ್ಯವಾಗಿದೆ ಎಂದರು.
ತಾನು ಶಾಸಕನಾಗಿದ್ದಾಗಿನಿಂದಲೂ ಡಾ. ರಾಜ್ ಕುಮಾರ್ ಮತ್ತು ಪಾರ್ವತಮ್ಮ ರಾಜ್ ಕುಮಾರ್ ಕುಟುಂಬದೊಂದಿಗೆ ಆತ್ಮೀಯ ಸಂಬಂಧವನ್ನು ಇಟ್ಟುಕೊಂಡು ಬಂದಿದ್ದು ಈಗಲೂ ಅದು ಮುಂದುವರಿದಿದೆ. ಕೆಲ ದಿನಗಳ ಹಿಂದೆ ಪುನೀತ್ ರಾಜ್ ಕುಮಾರ್ ಅವರೊಂದಿಗೆ ದೂರವಾಣಿಯ ಮೂಲಕ ಮಾತನಾಡಿದ್ದು, ಅವರ ಮಾತುಗಳು ಈಗಲೂ ಮರುಕಳಿಸದಂತೆ ಭಾಸವಾಗುತ್ತಿದೆ. ಅವರು ಬಾಕಿಯುಳಿಸಿ ಹೋದ ಕಾರ್ಯಗಳನ್ನು ಅವರ ಕುಟುಂಬ ಮತ್ತು ಅಭಿಮಾನಿಗಳು ಜೊತೆ ಸೇರಿ ಪೂರ್ಣಗೊಳಿಸಬೇಕಾದ ಅನಿವಾರ್ಯತೆಯಿದೆ ಎಂದು ಹೇಳಿದರು.
ಟೀಂ ಮೋದಿ ಕಾಪು ವಲಯದ ಅಧ್ಯಕ್ಷ ಯೋಗೀಶ್ ಪೂಜಾರಿ ಕೈಪುಂಜಾಲು ಅವರು ದೀಪ ಬೆಳಗಿಸಿ, ಪುನೀತ್ ರಾಜ್ ಕುಮಾರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ, ನುಡಿ ನಮನ ಸಲ್ಲಿಸಿದರು.
ಸಂಘಟಕರಾದ ಅಶ್ವಿನ್ ಪುತ್ರನ್ˌ ಜಿತೇಂದ್ರ ಕೋಟ್ಯಾನ್ ಸತೀಶ್ ಕುಮಾರ್ˌ ನಿತೇಶ್ ಕಾಂಚನ್ˌ ರಾಹುಲ್ ರಾವ್ˌ ಕೃಷ್ಣˌ ಹಾಗೂ ಸಂಘಟನೆಯ ಕಾರ್ಯಕರ್ತರು, ಸಾರ್ವಜನಿಕರು ಮತ್ತು ಅಭಿಮಾನಿಗಳು ಭಾಗವಹಿಸಿದ್ದರು.