Advertisement

ಜಾರ್ಜ್‌ ಫ‌ರ್ನಾಂಡಿಸ್‌ ನಿಧನಕ್ಕೆ ಸಂತಾಪ

06:49 AM Jan 30, 2019 | Team Udayavani |

ಬೆಂಗಳೂರು: ಮಾಜಿ ರಕ್ಷಣಾ ಸಚಿವ ಜಾರ್ಜ್‌ ಫ‌ರ್ನಾಂಡಿಸ್‌ ಅವರ ನಿಧನಕ್ಕೆ ರಾಜ್ಯ ಬಿಜೆಪಿ ನಾಯಕರು ಕಂಬನಿ ಮಿಡಿದು ಸಂತಾಪ ಸೂಚಿಸಿದ್ದಾರೆ. ಮಾಜಿ ರಕ್ಷಣಾ ಸಚಿವರಾಗಿದ್ದ ಜಾರ್ಜ್‌ ಫ‌ರ್ನಾಂಡಿಸ್‌ ಅವರ ನಿಧನ ತೀವ್ರ ದುಃಖ ಉಂಟುಮಾಡಿದೆ.

Advertisement

ಸರಳತೆಯಿಂದಲೇ ದೇಶದ ಜನರ ಮನಸ್ಸು ಗೆದ್ದಿದ್ದ ಅವರು ವಾಜಪೇಯಿ ಅವರ ಕೇಂದ್ರ ಸಚಿವ ಸಂಪುಟದಲ್ಲಿ ರಕ್ಷಣಾ ಸಚಿವರಾಗಿ ಅತ್ಯುತ್ತಮ ಕಾರ್ಯ ನಿರ್ವಹಿಸಿದ್ದರು. ಅವರು ಕನ್ನಡಿಗರು ಎಂಬುದು ಹೆಮ್ಮೆಯ ಸಂಗತಿಯಾಗಿತ್ತು ಎಂದು ಬಿಜೆಪಿ ರಾಜ್ಯಾಧ್ಯಕ್ಷರಾದ ವಿಧಾನಸಭೆ ಪ್ರತಿಪಕ್ಷ ನಾಯಕ ಬಿ.ಎಸ್‌.ಯಡಿಯೂರಪ್ಪ ಸಂತಾಪ ವ್ಯಕ್ತಪಡಿಸಿದ್ದಾರೆ.

ರಾಜ್ಯದಲ್ಲಿ ಹುಟ್ಟಿದರೂ ಮುಂಬೈನಲ್ಲಿ ರಾಜಕೀಯ ಜೀವನ ರೂಪಿಸಿಕೊಂಡು ಕಾರ್ಮಿಕರು ಹಾಗೂ ಶೋಷಿತರ ನಿಜವಾದ ಧ್ವನಿಯಾಗಿದ್ದರು. ತುರ್ತು ಪರಿಸ್ಥಿತಿ ವಿರೋಧಿಸಿ ಹೋರಾಟ ನಡೆಸಿ ಜೈಲು ಸೇರಿದ್ದ ಅವರು ಜೈಲಿನಿಂದಲೇ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿ ಜಯ ಗಳಿಸಿದ್ದ ಅಪರೂಪದ ರಾಜಕಾರಣಿ.

ಮೊರಾರ್ಜಿ ದೇಸಾಯಿ ಅವರ ನೇತೃತ್ವದಲ್ಲಿ ಮೊದಲ ಬಾರಿಗೆ ಜನತಾ ಪಕ್ಷದ ಸರ್ಕಾರ ಕೇಂದ್ರದಲ್ಲಿ ರಚನೆಯಾದಾಗ ಕೈಗಾರಿಕಾ ಸಚಿವರಾಗಿದ್ದ ಅವರು ಬಳಿಕ ರೈಲ್ವೆ ಸಚಿವರಾಗಿ ಕೊಂಕಣ ರೈಲು ಯೋಜನೆಯನ್ನು ಜಾರಿಗೆ ತಂದರು. ಆ ಮೂಲಕ ಕರ್ನಾಟಕದ ಅಭಿವೃದ್ಧಿಗೆ ವೇಗ ತಂದುಕೊಟ್ಟವರು ಎಂದು ಸ್ಮರಿಸಿದ್ದಾರೆ.

ಎನ್‌ಡಿಎ ಸರ್ಕಾರದಲ್ಲಿ ಸಾಮಾನ್ಯ ಕನಿಷ್ಠ ಕಾಯಕ್ರಮ ರೂಪಿಸಿ ಅಟಲ್‌ ಬಿಹಾರಿ ವಾಜಪೇಯಿಯವರ ನೇತೃತ್ವದ ಸರ್ಕಾರ ಉತ್ತಮವಾಗಿ ಕೆಲಸ ಮಾಡಲು ಕಾರಣೀಭೂತರಾಗಿದ್ದರು. ರಕ್ಷಣಾ ಸಚಿವರಾಗಿದ್ದಾಗ ಸಿಯಾಚಿನ್‌ನಂತಹ ದುರ್ಗಮ ಪ್ರದೇಶದಲ್ಲಿ ಸೇವೆ ಸಲ್ಲಿಸುವ ಸೇನಾ ಸಿಬ್ಬಂದಿಯ ಸಮಸ್ಯೆಯನ್ನು ಖುದ್ದಾಗಿ ಸ್ಥಳಕ್ಕೆ ತೆರಳಿ ಆಲಿಸಿದ್ದರು.

Advertisement

ಸೈನಿಕರ ಮನೋಸ್ಥೈರ್ಯ ಹೆಚ್ಚಿಸಿದ್ದ ಅವರ ಆದರ್ಶ ನಡವಳಿಕೆಗೆ ಮಾದರಿ. ಸೇನಾ ಸಾಮರ್ಥಯ ಹೆಚ್ಚಿಸಿ ದೇಶವನ್ನು ಬಾಹ್ಯ ಶತ್ರುಗಳ ಉಪಟಳದಿಂದ ರಕ್ಷಿಸಿದ ಜಾರ್ಜ್‌ ಫ‌ರ್ನಾಂಡಿಸ್‌ ಅವರ ನಿಧನದಿಂದ ದೇಶ ಒಬ್ಬ ಆದರ್ಶ ರಾಜಕಾರಣಿಯನ್ನು ಕಳೆದುಕೊಂಡಿದೆ. ಅವರ ಆತ್ಮಕ್ಕೆ ಶಾಂತಿ ಕೋರಿ ಅವರ ಬಂಧುಗಳು ಹಾಗೂ ಅಭಿಮಾನಿಗಳಿಗೆ ದುಃಖ ಭರಿಸುವ ಶಕ್ತಿಯನ್ನು ದೇವರು ನೀಡಲಿ ಎಂದು ಪ್ರಾರ್ಥಿಸಿದ್ದಾರೆ.

ಕೇಂದ್ರ ಸಚಿವ ಸದಾನಂದಗೌಡ ಸಂತಾಪ: ಕರ್ನಾಟಕದಲ್ಲಿ ಹುಟ್ಟಿ, ಮುಂಬೈನ ಶೋಷಿತ ಕಾರ್ಮಿಕ ಹೋರಾಟದಲ್ಲಿ ತನ್ನ ಛಾಪು ಮೂಡಿಸಿ, ದೇಶಾದ್ಯಂತ ಹೆಸರುವಾಸಿಯಾಗಿ ರೈಲ್ವೆ, ರಕ್ಷಣಾ ಸಚಿವರಾಗಿ ತನ್ನ ಕಾರ್ಯ ನಿರ್ವಹಿಸಿದ್ದ ಮಾನ್ಯ ಶ್ರೀ ಜಾರ್ಜ್‌ ಫ‌ರ್ನಾಂಡಿಸ್‌ರವರು ಇಹಲೋಕ ತ್ಯಜಿಸಿದ್ದು ದುಃಖಕರ. ಇವರ ಅಗಲಿಕೆಯಿಂದ ದೇಶ ರಾಜಕಾರಣದ ಹಿರಿಯ ಕೊಂಡಿಯೊಂದು ಕಳಚಿದಂತಾಗಿದೆ ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಟ್ವೀಟ್‌ನಲ್ಲಿ ಸಂತಾಪ ಸಲ್ಲಿಸಿದ್ದಾರೆ.
 
ಜಾರ್ಜ್‌ ಫ‌ರ್ನಾಂಡಿಸ್‌ ಈ ದೇಶದ ಒಬ್ಬ ಕಾರ್ಮಿಕ ಹೋರಾಟಗಾರ. ಹೃದಯ ಶ್ರೀಮಂತಿಕೆಯುಳ್ಳ ವ್ಯಕ್ತಿ. ಜೈಲಿನಲ್ಲಿ ಇದ್ದುಕೊಂಡು ಹೋರಾಟ ಮಾಡಿದವರು. ನಾವು ಈಗ ಅವರನ್ನು ಕಳೆದುಕೊಂಡಿದ್ದೇವೆ. ಅವರ ವಿಚಾರಗಳು ಜನರಿಗೆ ಮಾದರಿಯಾಗಲಿ.
-ಡಿ.ಕೆ. ಶಿವಕುಮಾರ್‌, ಜಲ ಸಂಪನ್ಮೂಲ ಸಚಿವ. 

ಜಾರ್ಜ್‌ ಫ‌ರ್ನಾಂಡಿಸ್‌ ಅವರು ನಮ್ಮ ರಾಜ್ಯದ ಸುಪುತ್ರರು. ಕಾರ್ಮಿಕ ಹೋರಾಟಗಾರರಾಗಿ, ಸಮಾಜವಾದಿ ಹೋರಾಟಗಾರರಾಗಿ, ರಾಜಕಾರಣಿಯಾಗಿ ಪ್ರಾಮಾಣಿಕ ವ್ಯಕ್ತಿಯಾಗಿದ್ದರು. ದೇಶದ ರಾಜಕಾರಣದಲ್ಲಿ ಅವರು ತಮ್ಮದೇ ಆದ ಛಾಪು ಮೂಡಿಸಿದ್ದರು. 
-ದಿನೇಶ್‌ ಗುಂಡೂರಾವ್‌, ಕೆಪಿಸಿಸಿ ಅಧ್ಯಕ್ಷ.

ಮಾಜಿ ರಕ್ಷಣಾ ಸಚಿವರಾದ ಜಾರ್ಜ್‌ ಫ‌ರ್ನಾಂಡಿಸ್‌ ಅವರ ನಿಧನವು ಅತ್ಯಂತ ನೋವು ತಂದಿದೆ. ರಾಜ್ಯದಲ್ಲಿ ಹುಟ್ಟಿದರೂ, ಮುಂಬೈನಲ್ಲಿ ರಾಜಕೀಯ ಜೀವನ ರೂಪಿಸಿಕೊಂಡರು. ಕಾರ್ಮಿಕರು, ಶೋಷಿತರ ನಿಜವಾದ ಧ್ವನಿಯಾಗಿದ್ದರು. ಅವರ ಆತ್ಮಕ್ಕೆ ಶಾಂತಿ ಸಿಗಲಿ.
-ಡಾ.ಜಿ.ಪರಮೇಶ್ವರ್‌, ಉಪ ಮುಖ್ಯಮಂತ್ರಿ.

Advertisement

Udayavani is now on Telegram. Click here to join our channel and stay updated with the latest news.

Next