ವಿಧಾನಸಭೆ: ರಾಜ್ಯಪಾಲರು ಜಂಟಿ ಅಧಿವೇಶನ ಉದ್ದೇಶಿಸಿ ಭಾಷಣ ಮಾಡಿದ ಬಳಿಕ, ಕಳೆದ ವಿಧಾನಸಭೆಯ ಅಧಿವೇಶನದ ನಂತರ ನಿಧನರಾದ ಗಣ್ಯರಿಗೆ ಉಭಯ ಸದನಗಳಲ್ಲಿ ಸಂತಾಪ ಸಲ್ಲಿಸಲಾಯಿತು.
ಮಾಜಿ ರಾಜ್ಯಪಾಲ ಟಿ.ಎನ್.ಚತುರ್ವೇದಿ, ಮಾಜಿ ಸಚಿವರಾದ ಡಿ.ಮಂಜುನಾಥ್, ವೈಜನಾಥ ಪಾಟೀಲ್, ಮಲ್ಲಾರಿಗೌಡ ಪಾಟೀಲ್, ಕೆ.ಅಮರನಾಥ ಶೆಟ್ಟಿ, ಮಾಜಿ ಶಾಸಕರಾದ ನಾರಾಯಣರಾವ್ ಗೋವಿಂದ ತರಳೆ, ಚಂದ್ರಕಾಂತ ಸಿಂದೋಲ್, ಪೇಜಾವರ ಮಠದ ವಿಶ್ವೇಶ ತೀರ್ಥರು, ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಎನ್.ವೆಂಕಟಾಚಲ, ಹಿರಿಯ ಸಂಶೋಧಕ ಡಾ.ಎಂ.ಚಿದಾನಂದಮೂರ್ತಿ, ಹಿರಿಯ ಸಾಹಿತಿ ಪ್ರೊ.ಎಲ್.ಎಸ್.ಶೇಷಗಿರಿ ರಾವ್, ಹೊಸ್ತೋಟ ಮಂಜುನಾಥ ಭಾಗವತರು, ಕೇಂದ್ರ ಚುನಾವಣಾ ಆಯೋಗದ ಮಾಜಿ ಮುಖ್ಯ ಆಯುಕ್ತ ಟಿ.ಎನ್.ಶೇಷನ್ ಅವರಿಗೆ ಸಂತಾಪ ಸಲ್ಲಿಸಲಾಯಿತು.
ವಿಧಾನಸಭೆಯಲ್ಲಿ ಸಂತಾಪ ಸೂಚನೆ ಮಂಡಿಸಿದ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ನಿಧನರಾದ ಗಣ್ಯರ ಗುಣಗಾನ ಮಾಡಿದರು. ಸ್ಪೀಕರ್ ಮಂಡಿಸಿದ ಸಂತಾಪ ಸೂಚನೆ ಬೆಂಬಲಿಸಿ ಮಾತನಾಡಿದ ಮುಖ್ಯಮಂತ್ರಿ ಯಡಿಯೂರಪ್ಪ, ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಕಾಂಗ್ರೆಸ್‌ನ ಯು.ಟಿ.ಖಾದರ್, ಜೆಡಿಎಸ್ ಹಿರಿಯ ಶಾಸಕರಾದ ಎಚ್.ಕೆ. ಕುಮಾರಸ್ವಾಮಿ, ಜಿ.ಟಿ.ದೇವೇಗೌಡ, ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ, ಸಚಿವ ಜೆ.ಸಿ.ಮಾಧುಸ್ವಾಮಿ, ಬಿಜೆಪಿ ಶಾಸಕ ರಾದ ಮಾಡಾಳು ವಿರೂಪಾಕ್ಷಪ್ಪ, ಅಭಯ್ ಪಾಟೀಲ್, ಕಾಂಗ್ರೆಸ್‌ನ ಹಿರಿಯ ನಾಯಕ ಎಚ್.ಕೆ.ಪಾಟೀಲ್ ಇತರರು ಅಗಲಿದ ಗಣ್ಯರ ಗುಣಗಾನ ಮಾಡಿದರು. ಬಳಿಕ, ಒಂದು ನಿಮಿಷ ಮೌನಾಚರಣೆ ಮೂಲಕ ಅಗಲಿದ ಗಣ್ಯರ ಆತ್ಮಕ್ಕೆ ಶಾಂತಿ ಕೋರಲಾಯಿತು.
ಪೇಜಾವರರ ಗುಣಗಾನ: ವಿಧಾನಸಭೆಯಲ್ಲಿ ಸಂತಾಪ ಸೂಚನೆ ಮಂಡಿಸಿ ಮಾತನಾಡಿದ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ಧಾರ್ಮಿಕ ಸಂತ ಶ್ರೀ ವಿಶ್ವೇಶ ತೀರ್ಥರು ಐದು ಬಾರಿ ಪರ್ಯಾಯ ಪೀಠಾರೋಹಣ ಮಾಡಿದ್ದರು. ಧಾರ್ಮಿಕ, ಆಧ್ಯಾತ್ಮಿಕ, ಸಾಮಾಜಿಕ ರಂಗ ಗಳಲ್ಲಿ ಕ್ರಿಯಾಶೀಲರಾಗಿದ್ದ ಅವರು ನಕ್ಸಲ್ ಪೀಡಿತ ಪ್ರದೇ ಶಗಳ ಅಭಿವೃದ್ಧಿ, ಗ್ರಾಮಗಳ ದತ್ತು ಸ್ವೀಕಾರ, ಶೈಕ್ಷಣಿಕ- ಸಾಮಾಜಿಕ ಸಂಸ್ಥೆಗಳಿಗೆ ಮಾರ್ಗದರ್ಶನ ನೀಡುವ ಮೂಲಕ ಸಮಾಜಮುಖೀಯಾಗಿದ್ದರು. ನಾನಾ ಸಮು ದಾಯಗಳ ನಡುವೆ ಸಾಮರಸ್ಯ ಬೆಸೆಯುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು ಎಂದು ಗುಣಗಾನ ಮಾಡಿದರು.
ವಿಜಯನಗರ ಜಿಲ್ಲೆ ಆಗಬೇಕೆಂಬ ಆಸೆ ಇತ್ತು: ಹಂಪಿ ಕನ್ನಡ ವಿವಿ ಸ್ಥಾಪನೆಗೆ ಕಾರಣಕರ್ತರಾಗಿದ್ದ ಡಾ.ಎಂ.ಚಿದಾನಂದ ಮೂರ್ತಿ ಅವರು ಹಂಪಿಯ ಸ್ಮಾರಕಗಳಿಗೆ ಯಾವುದೇ ರೀತಿಯಲ್ಲಿ ಹಾನಿಯಾದರೆ ತಕ್ಷಣ ಅಲ್ಲಿಗೆ ತೆರಳಿ ಪರಿಶೀಲಿಸುತ್ತಿದ್ದರು. ವಿಜಯ ನಗರ ಜಿಲ್ಲೆಯಾಗಬೇಕು ಎಂಬ ಆಸೆ ಅವರಿಗಿತ್ತು ಎಂದು ಸಚಿವ ಆನಂದ್ ಸಿಂಗ್ ಸ್ಮರಿಸಿದರು.
ಅತಿ ಹೆಚ್ಚು ಬಾರಿ ಪರ್ಯಾಯ ಪೀಠಾರೋಹಣ ಮಾಡಿದ್ದ ಪೇಜಾವರ ಮಠದ ವಿಶ್ವೇಶತೀರ್ಥರು ಜನಸೇವೆಯೇ ಜನಾರ್ದನನ ಸೇವೆ ಎಂದು ಭಾವಿಸಿದ್ದರು. ಶ್ರೀರಾಮ ಮಂದಿರ ನಿರ್ಮಾಣಕ್ಕಾಗಿ ನಡೆದ ಆಂದೋಲನ, ನಾನಾ ಸಾಮಾಜಿಕ ಹೋರಾಟದಲ್ಲೂ ಸಕ್ರಿಯರಾಗಿದ್ದರು.
-ಬಿ.ಎಸ್.ಯಡಿಯೂರಪ್ಪ, ಸಿಎಂ
ವಿಶ್ವೇಶ ತೀರ್ಥರು ಧಾರ್ಮಿಕ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದರು. ಸಾಮಾಜಿಕ ಕ್ಷೇತ್ರದಲ್ಲೂ ತೊಡಗಿಸಿಕೊಂಡು ಜನಪರವಾಗಿ ಕೆಲಸ ಮಾಡಿದರು.
-ಸಿದ್ದರಾಮಯ್ಯ, ವಿಧಾನಸಭೆ ಪ್ರತಿಪಕ್ಷ ನಾಯಕ
ಪೇಜಾವರ ಮಠದ ವಿಶ್ವೇಶತೀರ್ಥರು ಧಾರ್ಮಿಕ ಗುರು, ಸಾಮಾಜಿಕ ಸಂತರಾಗಿದ್ದರು. ತಮ್ಮ ಜೀವನದುದ್ದಕ್ಕೂ ಕಪ್ಪು ಚುಕ್ಕೆ ಇಲ್ಲದೆ ಕಾರ್ಯ ನಿರ್ವಹಿಸಿದರು. ವಿವಾದಗಳು ಸೃಷ್ಟಿಯಾದಾಗ ಎಲ್ಲರಿಗೂ ಚರ್ಚೆಗೆ ಅವಕಾಶ ಕೊಡುತ್ತಿದ್ದರು.
-ಯು.ಟಿ.ಖಾದರ್, ಶಾಸಕ
ಉಡುಪಿ ಎಂದರೆ ಪೇಜಾವರ ಮಠದ ವಿಶ್ವೇಶತೀರ್ಥರು ಎಂಬತ್ತಿತ್ತು. ಅವರು ಕೊನೆಯದಾಗಿ ರಾಜಾಂಗಣದಲ್ಲಿ ಪ್ರವಚನ ನೀಡಿ, ರಾಜಕಾರಣ, ಭ್ರಷ್ಟಾಚಾರದ ಕುರಿತು ಮಾತನಾಡಿದ್ದರು. ಅದನ್ನು ಎಲ್ಲ ಜನಪ್ರತಿನಿಧಿಗಳು ಆಲಿಸಬೇಕು. ಉಡುಪಿಯಲ್ಲಿ ಅವರ ಸ್ಮಾರಕ ನಿರ್ಮಿಸಬೇಕು.
-ರಘುಪತಿ ಭಟ್, ಶಾಸಕ