Advertisement

ಷರತ್ತುಗಳು ಅನ್ವಯ

05:53 PM Aug 06, 2019 | Sriram |

ಬರೀ ವೇಗ, ಅದರಿಂದ ದೊರೆಯುವ ಥ್ರಿಲ್‌ ಇವಷ್ಟೇ ಮುಖ್ಯವಲ್ಲ. ಅದು ಒಡ್ಡುವ ಷರತ್ತುಗಳಿಗೆ ನಾವು ಬದ್ಧವಾಗಿರಬೇಕು. ಅವನ್ನು ಪಾಲಿಸಿದರಷ್ಟೇ ಬಾಳು ನಗುತ್ತದೆ.

Advertisement

ಮೈಸೂರು ರಸ್ತೆಯ ಒಂದು ಕಾರ್ನರ್‌ನಲ್ಲೋ, ನಂದಿಬೆಟ್ಟದ ರೋಡಲ್ಲೋ, ಹಾಸನ ಹೈವೆಯಲ್ಲೋ ಸುಮ್ಮನೆ ಬೆಳಗ್ಗೆ ಹೊತ್ತು ನಿಂತರೆ ಕಿವಿಗಡಚಿಕ್ಕುವ ಸದ್ದು. ಸದ್ದಿನ ಹಿಂದೆ ವೇಗದ ಮದ. ನಿಜ, ನಮ್ಮ ಯುವ ಜನಾಂಗಕ್ಕೆ ಸ್ಪೀಡ್‌ನ‌ ನಶೆ ಏರಿದೆ.

ಹಾಗಾಗಿ, ಅದರ ಅಮಲಲ್ಲಿ ಡ್ರೈವ್‌ ಮಾಡುತ್ತಿರುತ್ತಾರೆ. ಎಡಗೈಯಲ್ಲಿ ಕಾರಿನ ಗೇರ್‌ ಕಡ್ಡಿಯನ್ನು ಹಠಕ್ಕೆ ಬಿದ್ದವರಂತೆ ಎಳೆದಾಡುತ್ತಿರುತ್ತಾರೆ. ಮೀಟರ್‌ ಕಡ್ಡಿಗೆ ಇನ್ನು ತಿರುಗಲು ಜಾಗವೇ ಉಳಿದಿರುವುದಿಲ್ಲ. ಅಷ್ಟೊಂದು ವೇಗ, ವೇಗ ನಿಮಗೊಂದು ಕಿಕ್‌ ಕೊಡುತ್ತದೆ ಅನ್ನೋದೇನೋ ಹೌದು, ಆದರೆ ಈ ವೇಗದ ಹಿಂದೆ ಸಾವಿನ ಷರತ್ತುಗಳು ಇದೆ ಅಲ್ಲವೇ?

ಅಂಥದೊಂದು ಕಿಕ್‌ ವಾರಕ್ಕೊಮ್ಮೆಯಾದರೂ ಇವರಿಗೆ ಬೇಕೇ ಬೇಕು. ಒಂದು ದಿನ ಹೀಗೆ ಗೇರ್‌ ಕಡ್ಡಿಯನ್ನು ಎಳೆದಾಡುವಾಗ ಎದುರಿಗೆ ಬಂದ ಲಾರಿ ಸುಮ್ಮನೆ ಹೀಗೆ ಮುಟ್ಟಿ ಹೋಯಿತು ಅಂತಿಟ್ಟುಕೊಳ್ಳಿ. ಆಗ, ನಿಮ್ಮ ಮೂಳೆಗಳನ್ನು ಎಷ್ಟು ಕಿಲೋಮೀಟರು ಆಚೆ ಹುಡುಕಬೇಕು ಗೊತ್ತಾ? ಬದುಕಿನಲ್ಲಿ ವೇಗ ಕೊಡುವ ಚಿಲ್‌ ಅನುಭವಿಸಲಾಗದಂತೆ ಬದುಕಬೇಕು ಅಂತ ಹೇಳವುದಿಲ್ಲ. ಆದರೆ, ವೇಗದ ಕಿಕ್‌ ಎಷ್ಟಿರಬೇಕೊ ಅಷ್ಟಿರಬೇಕು. ವೇಗದ ಖುಷಿ ಉಣ್ಣಲು ಬದುಕಿನ ಕೆಲವು ಷರತ್ತುಗಳಿವೆ. ಷರತ್ತು ಪೂರೈಸಿದ್ದೇ ಆದರೆ ಸೇಫ್ ಆ್ಯಂಡ್‌ ಚಿಲ್‌ ಡ್ರೈವಿಂಗ್‌.

ಬ್ಯಾಂಕಲ್ಲೇ ನೋಡಿ, ಬಿಗಿಯಾಗಿ ಟೈ ಕಟ್ಟಿಕೊಂಡು, ಕ್ರಾಫ್ತೀಡಿ ಕುಳಿತ ಬ್ಯಾಂಕ್‌ ಮ್ಯಾನೇಜರ್‌ ನಿಮಗೆ ಸಾಲ ಕೊಡುವ ಮುನ್ನ ನಿಮ್ಮ ಪೆನ್ನಿನ ಅರ್ಧ ಇಂಕು ಖಾಲಿ ಆಗುವಷ್ಟು ಸಹಿ ಹಾಕಿಸಿಕೊಂಡಿರುತ್ತಾನೆ. ಹೌದಲ್ಲಾ? ಆಗ ಷರತ್ತುಗಳನ್ನು ಏನಾದರೂ ಓದಿ ಕೊಂಡಿರುತ್ತೇವಾ? ಇಲ್ಲ. ಆ ಷರತ್ತುಗಳೇ ಪದವಿಯ ಸಿಲಬಸ್‌ನಷ್ಟಿರುತ್ತವೆ. ಓದುವ ಉಸಾಬರಿಗೆ ಹೋಗದೆ ಸಹಿ ಮಾಡಿ ಹಣ ತೆಗೆದುಕೊಂಡು ಎದ್ದು ಬರುತ್ತೇವೆ. ಸಾಲ ವಸೂಲಿ ಮಾಡಲು ನಿಮ್ಮ ಸಹಿಗಳು ಸಾಕ್ಷಿಗಿರುತ್ತವೆ ಅಷ್ಟೇ. ಸಹಿ ಮಾಡದೇ ನಿಮಗೆ ಸಾಲವಾದರೂ ಎಲ್ಲಿ ಸಿಗುತ್ತಿತ್ತು? ಷರತ್ತುಗಳಿಗೆ ಒಪ್ಪಿಕೊಂಡಿರಿ, ಅವರು ಹಣ ಕೊಟ್ಟರು ಅಷ್ಟೇ!

Advertisement

ಅದು ವ್ಯವಹಾರ. ಇದು ಬದುಕು. ವ್ಯವಹಾರವೇ ಹಾಗಿರುವಾಗ.

ಲೈಫ‌ು ಇಂಥ ಸಾವಿರ ಷರತ್ತುಗಳಿಂದಲೇ ಹೆಜ್ಜೆಹಾಕುತ್ತಿರುತ್ತವೆ. ಷರತ್ತುಗಳನ್ನು ಒಪ್ಪದೇ ಬಾಳನ್ನು, ಅದು ಕೊಡಮಾಡುವ ಖುಷಿಯನ್ನು ಅನುಭವಿಸಲು ಸಾಧ್ಯವಾ? ಬಹುಶಃ ಸಾಧ್ಯವಿಲ್ಲ.

ಇಲ್ಲೆಲ್ಲಾ ಷರತ್ತುಗಳನ್ನು ಓದಿಕೊಳ್ಳಬೇಕು. ಬ್ಯಾಂಕಿನಲ್ಲಿ ಸುಮ್ಮನೆ ಕಣ್ಮುಚ್ಚಿಕೊಂಡು ಸಹಿ ಹಾಕಿದಂತೆ ಹಾಕಿ ಎದ್ದುಬಂದು ಬಿಟ್ಟರೆ ಆಗದು. ಮದುವೆ ಸಂಬಂಧ ಒಂದು ನಿಯತ್ತು ಬೇಡುತ್ತದೆ; ಗೆಳೆತನ ಪ್ರಾಮಾಣಿಕತೆ ಕೇಳುತ್ತದೆ; ಪ್ರೀತಿ ನಂಬಿಕೆ ಬೇಕು ಅನ್ನುತ್ತದೆ; ಹಣಕಾಸು ವ್ಯವಹಾರಗಳು ಒಂದು ವಿಶ್ವಾಸದಲ್ಲಿ ನಡೆಯುತ್ತವೆ; ಒಂದು ವಿಧೇಯತೆ ಗೌರವ ತರುತ್ತದೆ. ಹೆತ್ತವರ ಬಗೆಗಿನ ಕಾಳಜಿ, ಆಸೆಯ ಮಿತಿಯಲ್ಲಿ ಹಾಕಿಕೊಳ್ಳಬೇಕಾದ ಚಾಪೆ, ಕನಸುಗಳನ್ನು ಇಂಧನವಾಗಿಸಿಕೊಂಡು ದಕ್ಕಿಸಿಕೊಳ್ಳಬೇಕಾದ ಗೆಲುವು… ಇವೆಲ್ಲಾ ಬದುಕು ಒಡ್ಡುವ ಷರತ್ತುಗಳಲ್ಲದೆ ಇನ್ನೇನು?

ಬದುಕು ಯಾವತ್ತೂ ಕೂಡ ಷರತ್ತುಗಳನ್ನು ಕಂಪನಿಗಳಂತೆ ಸಣ್ಣ ಅಕ್ಷರದಲ್ಲಿ ಪತ್ರದ ಮೂಲೆಯಲ್ಲಿ ಮೂರು ಲೈನ್‌ ಗೀಚಿ ತೋರಿಸುವುದಿಲ್ಲ. ಅದರ ಷರತ್ತುಗಳು ಖುಲ್ಲಂ ಖುಲ್ಲಂ ಕಣ್ಣ ಮುಂದೆ. ಒಪ್ಪಿಕೊಂಡರೆ ಸುಖೀ. ಇಲ್ಲವಾದರೆ ದುಃಖೀ. ಹಾಗಾಗಿ, ಬಾಳು ತನ್ನ ಷರತ್ತುಗಳನ್ನು ಅಂಗೈಯಲ್ಲಿಟ್ಟುಕೊಂಡು ಎದುರಿಗೆ ನಿಲ್ಲುತ್ತದೆ. ನಾವು ಮಾಡಿಕೊಳ್ಳುವ ಎಡವಟ್ಟುಗಳು ವೇಗವಾಗಿ ಓಡುವ ಆತುರದಲ್ಲಿ ಬದುಕು ಒಡ್ಡಿದ ಷರತ್ತುಗಳನ್ನು ಉಲ್ಲಂ ಸುವುದರಿಂದ. ವಿಚಿತ್ರವಾದ ಅಶಿಸ್ತಿನಿಂದ ಬಾಳು ಅರ್ಧಕ್ಕೇ ಮುಗಿದುಹೋಗುತ್ತದೆ. ಸಾಮರ್ಥ್ಯ ತಿಳಿಯದೆ ನುಗ್ಗಿದವನು ದಾರಿ ತಪ್ಪುತ್ತಾನೆ. ತುಂಬಾ ತಲಹರಟೆಗೆ ನಿಂತವನನ್ನು ಬಾಳು ಆಪೋಷನ ತೆಗೆದುಕೊಂಡು ಬಿಡುತ್ತದೆ. ಸೋಮಾರಿಯ ಕಿಸೆಯಲ್ಲಿ ಬರೀ ಸೋಲುಗಳೇ ತುಂಬಿರುತ್ತವೆ. ಇವೆಲ್ಲ ಷರತ್ತು ಉಲ್ಲಂ ಸಿದವರ ಪರಿಣಾಮಗಳು.

ನನ್ನ ಬದುಕು ಏಕೆ ಹೀಗಾಯ್ತು, ಇದೆಲ್ಲಾ ಯಾವ ಜನ್ಮದ ಕರ್ಮವೋ ಅಂತ ಅಲವತ್ತುಕೊಳ್ಳುವವರು ಇದನ್ನೆಲ್ಲಾ ಯೋಚನೆ ಮಾಡಬೇಕು. ನಮ್ಮ ಹಿರಿಯರು ಹೇಳಿದ್ದು ಇದನ್ನೇ. “ಹಾಸಿಗೆ ಇದ್ದಷ್ಟು ಕಾಲು ಚಾಚು’ ಅಂತ. ನಾವು ದುರಾಸೆಯ ಹಿಂದೆ ಬಿದ್ದು ಈ ಚಾಪೆಗೆ ಇನ್ನಷ್ಟು ತೇಪೆ ಹಾಕಿ ಕಾಲು ಚಾಚುತ್ತೇವೆ.

ತೇಪೆ ಹಾಕುವ ನೆಪದಲ್ಲಿ ಚಾಪೆ ಹರಿದು ಹೋಗುತ್ತದೆ. ಹರಿದ ಚಾಪೆಯ ಮೇಲೆ ಯಾರೂ ಕೂರುವುದಕ್ಕೆ ಮನಸು ಮಾಡುವುದಿಲ್ಲ. ಬರೀ ವೇಗ, ಅದರಿಂದ ದೊರೆಯುವ ಥ್ರಿಲ್‌ ಇವಷ್ಟೇ ಮುಖ್ಯವಲ್ಲ. ಅದು ಒಡ್ಡುವ ಷರತ್ತುಗಳಿಗೆ ನಾವು ಬದ್ಧವಾಗಿರಬೇಕು. ಅವನ್ನು ಪಾಲಿಸಿದರಷ್ಟೆ ಬಾಳು ನಗುತ್ತದೆ.

-ಸದಾಶಿವ್‌ ಸೊರಟೂರು

Advertisement

Udayavani is now on Telegram. Click here to join our channel and stay updated with the latest news.

Next