Advertisement

ಕೇರಳ ಆ್ಯಂಬುಲೆನ್ಸ್‌ಗೆ ಷರತ್ತುಬದ್ಧ ಅವಕಾಶ: ಡಿಸಿ ಸಿಂಧೂ ರೂಪೇಶ್‌

03:17 AM Apr 08, 2020 | Sriram |

ಮಂಗಳೂರು: ಉಭಯ ರಾಜ್ಯಗಳ ಹಿರಿಯ ಅಧಿಕಾರಿಗಳು ರೂಪಿಸಿದ್ದ ಮಾನದಂಡದಂತೆ ಕೇರಳ ಮತ್ತು ಕರ್ನಾಟಕದ ತಲಪಾಡಿ ಗಡಿಯನ್ನು ತುರ್ತು ವೈದ್ಯಕೀಯ ಚಿಕಿತ್ಸೆಗೆ ತೆರೆಯಲು ಸರ್ವೋಚ್ಚ ನ್ಯಾಯಾಲಯ ಆದೇಶಿಸಿದ್ದು, ಕೆಲವು ನಿರ್ಬಂಧಗಳೊಂದಿಗೆ ದಕ್ಷಿಣ ಕನ್ನಡ ಜಿಲ್ಲೆಗೆ ಕಾಸರಗೋಡು ಕಡೆಯಿಂದ ಬರುವ ರೋಗಿಗಳಿಗೆ ಚಿಕಿತ್ಸೆಗೆ ಅವಕಾಶ ನೀಡಲು ತೀರ್ಮಾನಿಸಲಾಗಿದೆ ಎಂದು ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್‌ ತಿಳಿಸಿದ್ದಾರೆ.

Advertisement

ಈ ಹಿನ್ನೆಲೆಯಲ್ಲಿ ಮಂಗಳವಾರ ಐಎಂಎ ಸದಸ್ಯರೊಂದಿಗೆ ಜಿಲ್ಲಾ ಮಟ್ಟದ ಕೋವಿಡ್‌ ನಿಯಂತ್ರಣ ಸಭೆ ನಡೆಸಲಾಗಿದೆ. ಅತ್ಯಂತ ತುರ್ತು ಚಿಕಿತ್ಸೆ ಮತ್ತು ರಸ್ತೆ ಅಪಘಾತಗಳ  ಚಿಕಿತ್ಸೆಗೆ ಸರಕಾರಿ ಆ್ಯಂಬುಲೆನ್ಸ್‌ಗಳಲ್ಲಿ ರೋಗಿಗಳನ್ನು ಕರೆತರಲು ಅನುಮತಿ ನೀಡಲಾಗಿದೆ.

ಚಿಕಿತ್ಸೆಗೆ ಬರುವ ರೋಗಿಯು “ನಾನ್‌ ಕೋವಿಡ್‌’ ಎಂದು ಮತ್ತು ಆ ಚಿಕಿತ್ಸೆಯು ಕಾಸರಗೋಡಿನಲ್ಲಿ ಲಭ್ಯವಿಲ್ಲವೆಂದು ಕಾಸರಗೋಡಿನ ಸ್ಥಳೀಯ ಸರಕಾರಿ ವೈದ್ಯಾಧಿಕಾರಿಯು ದೃಢೀಕರಣವನ್ನು ಸಲ್ಲಿಸಬೇಕಿದೆ. ರೋಗಿಯನ್ನು ಕರೆ ತರುವ ಆ್ಯಂಬುಲೆನ್ಸ್‌ಗಳನ್ನು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ನಿರ್ದೇಶನದಂತೆ ಸ್ಯಾನಿಟೈಸ್‌ ಮಾಡಲಾಗುವುದು ಎಂದು ಹೇಳಿದರು.

ಹಾಗೆಯೇ ರೋಗಿಯೊಂದಿಗೆ ಕೇವಲ ಒಬ್ಬ ಸಹಾಯಕ, ಆ್ಯಂಬುಲೆನ್ಸ್‌ ಚಾಲಕ ಮತ್ತು ಒಬ್ಬ ಪ್ಯಾರಾಮೆಡಿಕ್ಸ್‌ ಅವರನ್ನು ಮಾತ್ರ ಕರೆತರಲು ಅವಕಾಶ ನೀಡಲಾಗಿದೆ. ತಲಪಾಡಿ ಗಡಿಯಲ್ಲಿ ನಮ್ಮ ಜಿಲ್ಲೆಯ ವೈದ್ಯಕೀಯ ತಂಡವನ್ನು ನಿಯೋಜಿಸಲಾಗಿದೆ.

ಕಾಸರಗೋಡಿನಿಂದ ಬರುವ ಆ್ಯಂಬುಲೆನ್ಸ್‌ ಹಾಗೂ ರೋಗಿಯನ್ನು ಪ್ರಥಮ ಹಂತದ ದಾಖಲೆಗಳನ್ನು ನಿಗದಿತ ಚೆಕ್‌ ಲಿಸ್ಟ್‌ನಲ್ಲಿ ಪರಿಶೀಲನೆ ನಡೆಸಿದ ಅನಂತರ ಜಿಲ್ಲೆಯೊಳಗೆ ಪ್ರವೇಶಿಸಲು ಅನುಮತಿ ನೀಡಲಾಗುವುದು. ಈ ಎಲ್ಲ ಮಾನದಂಡವನ್ನು ಪಾಲಿಸಲು ಈಗಾಗಲೇ ಚೆಕ್‌ ಲಿಸ್ಟ್‌ ಅನ್ನು ತಯಾರಿಸಿ ಕಾಸರಗೋಡಿನ ಜಿಲ್ಲಾಡಳಿತಕ್ಕೆ ರವಾನಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next