Advertisement

ಲಕ್ಷದ್ವೀಪ ಪ್ರವೇಶಕ್ಕೆ ಷರತ್ತು; ಕರಾವಳಿ ಉದ್ಯಮ ವಲಯಕ್ಕೆ ಪೆಟ್ಟು!

12:38 AM Nov 19, 2020 | mahesh |

ಮಂಗಳೂರು: ದೇಶದೆಲ್ಲೆಡೆ ಲಾಕ್‌ಡೌನ್‌ ಹಂತಹಂತವಾಗಿ ಸಡಿಲಿಕೆಯಾಗಿ ವ್ಯಾಪಾರ ವಹಿವಾಟು ಚೇತರಿಕೆ ಕಾಣುತ್ತಿದ್ದರೂ ಲಕ್ಷದ್ವೀಪ ಪ್ರವೇಶಕ್ಕೆ ಈಗಲೂ ಕ್ವಾರಂಟೈನ್‌ ನಿಯಮ ಜಾರಿಯಲ್ಲಿರುವುದರಿಂದ ಸರಕು ಸಾಗಾಟಕ್ಕೆ ಬಹುದೊಡ್ಡ ಪೆಟ್ಟು ಬಿದ್ದಿದೆ.

Advertisement

ಲಕ್ಷದ್ವೀಪಕ್ಕೆ ವಿವಿಧ ಸರಕುಗಳನ್ನು ಮಂಗಳೂರು ಕೇಂದ್ರಿತವಾಗಿ ಪ್ರತೀದಿನವೆಂಬಂತೆ ನೌಕೆಗಳ ಮೂಲಕ ಸಾಗಿಸಲಾಗುತ್ತಿತ್ತು. ಆದರೆ ಲಾಕ್‌ಡೌನ್‌, ಕ್ವಾರಂಟೈನ್‌ ನಿಯಮ ಜಾರಿಯೊಂದಿಗೆ ಇದು ನಿಂತುಹೋಗಿತ್ತು. ಮಂಗಳೂರಿನಿಂದ ಪ್ರತೀ ವರ್ಷ ಸೆ. 15ರಿಂದ ಮೇ 15ರ ವರೆಗೆ ಲಕ್ಷದ್ವೀಪಕ್ಕೆ ಸರಕು ಸಾಗಾಟಕ್ಕೆ ಅವಕಾಶವಿದೆ. ಲಕ್ಷದ್ವೀಪದಲ್ಲಿನ್ನೂ ನಿಯಮ ಕಟ್ಟುನಿಟ್ಟಾಗಿ ಜಾರಿಯಲ್ಲಿರುವುದು ಸಂಕಷ್ಟಕ್ಕೆ ಕಾರಣವಾಗಿದೆ.

ವಾರದಲ್ಲಿ ಕೆಲವು ದಿನ ಸಂಚರಿಸುತ್ತಿದ್ದ ಪ್ರಯಾಣಿಕರ ನೌಕೆಯ ಪ್ರವೇಶಕ್ಕೂ ಅವಕಾಶ ದೊರಕಿಲ್ಲ. ಸದ್ಯ ಜೀವನಾಶ್ಯಕ ವಸ್ತುಗಳನ್ನು ಮಾತ್ರ ಸರಕಾರಿ ವಿಶೇಷ ನೌಕೆಗಳ ಮೂಲಕ ಮಂಗಳೂರು, ಕೊಚ್ಚಿ, ಕೋಯಿಕ್ಕೋಡ್‌ಗಳಿಂದ ವಿಶೇಷ ನಿಗಾ ವಹಿಸಿ ಸರಬರಾಜು ಮಾಡಲಾಗುತ್ತಿದೆ.

ಷರತ್ತುಗಳೇನು?
ಲಕ್ಷದ್ವೀಪದಲ್ಲಿ ಇಲ್ಲಿಯ ವರೆಗೆ ಒಂದು ಕೂಡ ಕೊರೊನಾ ಪ್ರಕರಣ ವರದಿಯಾಗಿಲ್ಲ ಎನ್ನಲಾಗುತ್ತಿದೆ. ಹೀಗಾಗಿ ಹೊರಗಿನಿಂದ ಆಗಮಿಸುವವರ ಬಗ್ಗೆ ತೀವ್ರ ಎಚ್ಚರಿಕೆ ತೆಗೆದುಕೊಳ್ಳಲಾಗುತ್ತಿದೆ. ಅದರಂತೆ ಮಂಗಳೂರಿನಿಂದ ಹೋಗುವವರು ಕೊರೊನಾ ನೆಗೆಟಿವ್‌ ವರದಿ ಹೊಂದಿರಬೇಕು ಮತ್ತು ಅಲ್ಲಿಗೆ ತಲುಪಿದ ಬಳಿಕ ನೌಕೆಯನ್ನು ನೀರಿನಲ್ಲಿಯೇ ನಿಲ್ಲಿಸಿ ಅದರೊಳಗೇ 14 ದಿನ ಕ್ವಾರಂಟೈನ್‌ ಆಗಬೇಕು. ಅಲ್ಲಿನ ಆರೋಗ್ಯ ಕ್ಷೇತ್ರ ಅಭಿವೃದ್ಧಿ ಹೊಂದಿರದ ಹಿನ್ನೆಲೆಯಲ್ಲಿ ಈ ನಿಯಮವನ್ನು ಜಾರಿಗೊಳಿಸಲಾಗಿದೆ ಎನ್ನುವುದು ಅಲ್ಲಿನವರ ವಾದ.

ಏನು ಸಮಸ್ಯೆ?
ಲಕ್ಷದ್ವೀಪದ ಜನತೆ ಪ್ರಮುಖ ಆವಶ್ಯಕತೆಗಳಿಗೆ ಮುಖ್ಯವಾಗಿ ಆಶ್ರಯಿಸುವುದು ಕೊಚ್ಚಿ ಮತ್ತು ಮಂಗಳೂರನ್ನು. ನೌಕೆಗಳ ಮೂಲಕ ಅಲ್ಲಿಂದ ವ್ಯಾಪಾರಿಗಳು, ಪ್ರಯಾಣಿಕರು ಮಂಗಳೂರು ಹಳೇ ಬಂದರಿಗೆ ಆಗಮಿಸುತ್ತಾರೆ. ಇಲ್ಲಿಂದ ಅಕ್ಕಿ, ತರಕಾರಿ ಮೊದಲಾದ ಆಹಾರ ವಸ್ತುಗಳು, ನಿರ್ಮಾಣ ಸಾಮಗ್ರಿಗಳನ್ನು ಕೊಂಡೊಯ್ಯುತ್ತಾರೆ. ಈ ಪ್ರಕ್ರಿಯೆಯನ್ನು ನಂಬಿಕೊಂಡು ಸಾವಿರಾರು ಕರಾವಳಿಗರು ಜೀವನ ನಡೆಸುತ್ತಿದ್ದಾರೆ. ಕಳೆದ ಎಪ್ರಿಲ್‌ನಿಂದ ಕೆಲಸವಿಲ್ಲದೆ ಅವರೆಲ್ಲರೂ ಸಂಕಷ್ಟ ಎದುರಿಸುತ್ತಿದ್ದಾರೆ.

Advertisement

750ಕ್ಕೂ ಅಧಿಕ ಕಾರ್ಮಿಕರಿಗೆ ಸಂಕಷ್ಟ
ಲೌಕ್‌ಡೌನ್‌ಗೂ ಮುನ್ನ ಲಕ್ಷದ್ವೀಪಕ್ಕೆ ಮಂಗಳೂರಿನಿಂದ ತೆರಳುವ ನೌಕೆಯಲ್ಲಿ ಸುಮಾರು 300 ಜನರು ಕೆಲಸ ನಿರ್ವಹಿಸುತ್ತಿದ್ದರು. ಲೋಡಿಂಗ್‌-ಅನ್‌ಲೋಡಿಂಗ್‌ನಲ್ಲಿಯೂ ಸುಮಾರು 200 ಜನರು ಕೆಲಸ ಮಾಡುತ್ತಾರೆ. ಆಹಾರ ಹಾಗೂ ಸರಕು ಸಾಮಗ್ರಿ ಸೇರಿ ಸುಮಾರು 600 ಟನ್‌ ವಸ್ತುಗಳು ಲಕ್ಷದ್ವೀಪಕ್ಕೆ ಸರಬರಾಜಾಗುತ್ತಿತ್ತು. ತರಹೇವಾರಿ ತರಕಾರಿ, ದಿನಸಿ, ಕಲ್ಲು, ಮರಳು, ಜಲ್ಲಿಯನ್ನು ನೌಕೆಯವರೆಗೆ ತರಲು 250ಕ್ಕೂ ಅಧಿಕ ಮಂದಿ ಪರೋಕ್ಷವಾಗಿ ದುಡಿಯುತ್ತಿದ್ದರು. ಆದರೆ ಲಾಕ್‌ಡೌನ್‌ ಬಳಿಕ ಇಷ್ಟೂ ಮಂದಿಗೆ ಉದ್ಯೋಗ ಇಲ್ಲವಾಗಿದೆ. ಹಲವು ಮಂದಿ ನೌಕೆಯ ಮಾಲಕರು ಸಮಸ್ಯೆ ಎದುರಿಸುತ್ತಿದ್ದಾರೆ.

ಐತಿಹಾಸಿಕ ಹಿನ್ನೆಲೆ
ಮಂಗಳೂರು ಮತ್ತು ಲಕ್ಷದ್ವೀಪ ನಡುವೆ ವಾಣಿಜ್ಯ ವ್ಯವಹಾರಕ್ಕೆ ನೂರಾರು ವರ್ಷಗಳ ಇತಿಹಾಸವಿದೆ. ಮಂಗಳೂರಿನಿಂದ ಸುಮಾರು 365 ಕಿ.ಮೀ. (277 ಮೈಲು) ದೂರದಲ್ಲಿ ಪ್ರಾರಂಭವಾಗುತ್ತದೆೆ ಲಕ್ಷದ್ವೀಪ ಸಮೂಹ. ಕವರತ್ತಿ, ಅಗಾಟ್ಟಿ, ಕಲ್ಪೆನಿ, ಮಿನಿಕಾಯ್‌, ಅಮಿನಿ, ಚತ್ತಲತ್‌, ಕಿಲ್ತಾನ್‌ ಹಾಗೂ ಬಿತ್ತಾ, ಅಂದ್ರೋತ್‌, ಕಡಮಟ್ಟ್ ಅಲ್ಲಿನ ಪ್ರಮುಖ ದ್ವೀಪಗಳು. ಪ್ರವಾಸಿತಾಣವಾದ ಲಕ್ಷದ್ವೀಪ ಸಮೂಹಕ್ಕೆ ಅವಿಭಜಿತ ದ.ಕ. ಜಿಲ್ಲೆಯಿಂದ ಬಹಳಷ್ಟು ಪ್ರವಾಸಿಗರು ಹೋಗುತ್ತಿರುತ್ತಾರೆ.

ಲಕ್ಷದ್ವೀಪಕ್ಕೆ ತೆರಳುವ ನಿಯಮಾವಳಿಗಳಲ್ಲಿ ಬದಲಾವಣೆ ಮಾಡಲು ಅವಕಾಶ ಇದೆಯೇ ಎಂದು ತಿಳಿದುಕೊಳ್ಳಲಾಗುವುದು. ಕನಿಷ್ಠ ವ್ಯಾಪಾರಿಗಳಿಗಾದರೂ ಯಾವ ರೀತಿಯಲ್ಲಿ ಅನುಕೂಲ ಮಾಡಿಕೊಡಬಹುದು ಎಂಬ ಬಗ್ಗೆ ಅಲ್ಲಿನ ಆಡಳಿತದ ಜತೆಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು.
– ಕೋಟ ಶ್ರೀನಿವಾಸ ಪೂಜಾರಿ, ಜಿಲ್ಲಾ ಉಸ್ತುವಾರಿ ಸಚಿವರು

ದಿನೇಶ್‌ ಇರಾ

Advertisement

Udayavani is now on Telegram. Click here to join our channel and stay updated with the latest news.

Next