Advertisement

ಷರತ್ತು ಬದ್ಧ ಸಾಲ ಮನ್ನಾಕ್ಕೆ ಆಕ್ರೋಶ

03:20 PM Jun 28, 2017 | |

ಕಲಬುರಗಿ: ಸಹಕಾರಿ ಸಂಘಗಳಲ್ಲಿನ 50 ಸಾವಿರ ರೂ. ರೈತರ ಬೆಳೆ ಸಾಲ ಮನ್ನಾಕ್ಕೆ ರಾಜ್ಯ ಸರ್ಕಾರವು ವಿ ಧಿಸಿರುವ ಷರತ್ತುಗಳಿಂದಾಗಿ ಬಹುಭಾಗದ ರೈತರಿಗೆ ಯಾವುದೇ ರೀತಿಯ ಪ್ರಯೋಜನವಾಗಿಲ್ಲ. 

Advertisement

ಆದ್ದರಿಂದ ಕೂಡಲೇ ಷರತ್ತುಗಳನ್ನು ಕೈಬಿಡಬೇಕೆಂದು ಸರ್ಕಾರದ ಮೇಲೆ ಒತ್ತಡ ತರಲು ರೈತ ಸಂಘಟನೆಗಳೆಲ್ಲ ಒಗ್ಗೂಡಿ ಹೋರಾಟ ರೂಪಿಸಬೇಕೆಂದು ಜಿಲ್ಲಾ ರೈತ ಹೋರಾಟ ಸಮಿತಿ ಅಧ್ಯಕ್ಷ, ಜಿಲ್ಲಾ ಸಹಕಾರ ಕೇಂದ್ರ (ಡಿಸಿಸಿ) ಬ್ಯಾಂಕ್‌ನ ಮಾಜಿ ಅಧ್ಯಕ್ಷ ಕೇದಾರಲಿಂಗಯ್ಯ ಹಿರೇಮಠ ಕರೆ ನೀಡಿದರು. 

ಸರ್ಕಾರ ವಿಧಿಸಿರುವ ಷರತ್ತುಗಳು ರೈತರ ಪಾಲಿಗೆ ಕರಾಳವಾಗಿವೆ. ಸಾಲ ಮನ್ನಾಕ್ಕೆ ಸುಮಾರು 14 ಷರತ್ತುಗಳನ್ನು ರಾಜ್ಯ ಸರ್ಕಾರವು ವಿಧಿಸಿದೆ. ಅದರಲ್ಲಿಯೂ ನಾಲ್ಕನೇ ಷರತ್ತು ಪರಿಗಣಿಸಿದರೆ, ಈ ಸಾಲಿನಲ್ಲಿ ರಾಜ್ಯ ಸರ್ಕಾರವು ರೈತರ ಸಾಲ ಮನ್ನಾ ಮಾಡಬಾರದು ಎನ್ನುವಂತಿದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಆಕ್ಷೇಪಿಸಿದರು.

50,000ರೂ.ಗಿಂತ ಹೆಚ್ಚಿಗೆ ಅಲ್ಪಾವಧಿ  ಕೃಷಿ ಸಾಲ ಪಡೆದು 2017ರ ಜೂನ್‌ 20ಕ್ಕೆ ಹೊರಬಾಕಿ ಇರುವ ಸಾಲವು ಚಾಲ್ತಿ ಇದ್ದಲ್ಲಿ ಸಾಲ ಪಡೆದ ರೈತರು ಗಡುವು ದಿನಾಂಕ ಅಥವಾ 2018ರ ಜೂನ್‌ 20 ಇದರಲ್ಲಿ ಯಾವುದು ಮೊದಲೋ ಆ ದಿನಾಂಕದೊಳಗೆ 50,000ರೂ.ಗಳಿಗಿಂತ ಹೆಚ್ಚಿನ ಅಸಲನ್ನು ಪಾವತಿಸಿದಲ್ಲಿ 50,000ರೂ. ಗಳ ಸಾಲ ಮನ್ನಾ ಮಾಡಲಾಗುವುದು. 

ಸಂಪೂರ್ಣ ಸಾಲದ ಮೇಲಿನ ಬಡ್ಡಿ ಸಹಾಯಧನವನ್ನು ರಾಜ್ಯ ಸರ್ಕಾರ ಭರಿಸಲಿದೆ ಎಂಬ ಷರತ್ತು ಹಾಕಿದ್ದು, ಮುಂದಿನ ವರ್ಷ ಸಾಲ ಮನ್ನಾದ ನಿರ್ಧಾರವನ್ನು ಅ ಧಿಕೃತವಾಗಿಯೇ ರಾಜ್ಯ ಸರ್ಕಾರವು ಆದೇಶದಲ್ಲಿ ಪ್ರಕಟಿಸಿದೆ. ಇದರಿಂದ ಮುಂದಿನ ವರ್ಷದವರೆಗೂ ರೈತರಿಗೆ ಯಾವುದೇ ಹೊಸ ಸಾಲವೂ ಸಿಗುವುದಿಲ್ಲ. 

Advertisement

ಇದು ರೈತರ ಪಾಲಿಗೆ ಕರಾಳವಾಗಿರುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಪ್ರಧಾನಿ ನರೇಂದ್ರ ಮೋದಿ ಅವರು ಈಗಾಗಲೇ ಮುಂದಿನ ವರ್ಷದಿಂದ ಜನವರಿಯಲ್ಲಿಯೇ ಬಜೆಟ್‌ ಮಂಡಿಸುವ ಘೋಷಣೆ ಮಾಡಿದ್ದಾರೆ. ಹಾಗೊಂದು ವೇಳೆ ಆದಲ್ಲಿ ರಾಜ್ಯ ಸರ್ಕಾರವು ಜನವರಿಯಲ್ಲಿಯೇ ರಾಜ್ಯ ಬಜೆಟ್‌ ಮಂಡಿಸಬೇಕಾಗುತ್ತದೆ.

ಸಾಲ ಮನ್ನಾದ ಷರತ್ತಿನಿಂದಾಗಿ ರೈತರ ಸಾಲ ಮತ್ತೆ ನನೆಗುದಿಗೆ ಬೀಳಲಿದೆ. ರೈತ ಸಂಘಟನೆಗಳು ಈಗಾಗಲೇ ಆದೇಶದ ವಿರುದ್ಧ ಹೋರಾಟ ಆರಂಭಿಸಬೇಕಾಗಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 75 ಲಕ್ಷ ರೈತರಿಗೆ ಸಾಲ ಮನ್ನಾದ ಪ್ರಯೋಜನ ಆಗುತ್ತದೆ ಎಂಬುದು ಸುಳ್ಳು. ಕೇವಲ 15 ಲಕ್ಷ ರೈತರಿಗೂ ಲಾಭ ಆಗುವುದಿಲ್ಲ.

ಆದ್ದರಿಂದ ಹೋರಾಟ ಅನಿವಾರ್ಯ ಎಂದು ವಿವರಣೆ ನೀಡಿದರು. ಎಚ್‌.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿಗಳಾಗಿದ್ದಾಗ 2007ರಲ್ಲಿ ಬರದ ಹಿನ್ನೆಲೆಯಲ್ಲಿ ಸಹಕಾರ ಸಂಘಗಳಲ್ಲಿನ ರೈತರ 25000ರೂ.ಗಳವರೆಗಿನ ಸಾಲ ಮನ್ನಾ ಮಾಡಿ, 45 ದಿನಗಳೊಳಗೆ ಸಾಲ ಮನ್ನಾದ ಎರಡೂವರೆ ಸಾವಿರ ಕೋಟಿ ರೂ.ಗಳನ್ನು ಬ್ಯಾಂಕ್‌ಗೆ ಜಮಾ ಮಾಡಿದ್ದರು ಎಂದರು. 

ಈ ಹಿಂದೆ 2012ರಲ್ಲಿ ಜಗದೀಶ ಶೆಟ್ಟರ್‌ ಮುಖ್ಯಮಂತ್ರಿಗಳಾಗಿದ್ದಾಗ ಸಹಕಾರಿ ಸಂಘಗಳಲ್ಲಿನ ರೈತರ 25000ರೂ.ಗಳ ಸಾಲ ಮನ್ನಾ ಮಾಡಿದ್ದರು. ಆದಾಗ್ಯೂ, ಸಾಲದ ಹಣವನ್ನು ಬ್ಯಾಂಕಿಗೆ ಭರಿಸಲು ಒಂದು ವರ್ಷ ಕಾಲ ವಿಳಂಬ ಮಾಡಿದರು. ಇದರಿಂದಾಗಿ ಹೊಸ ಸಾಲ ಪಡೆಯಲು ಹಾಗೂ ಸಾಲದ ನವೀಕರಣಕ್ಕೆ ಹಲವಾರು ಷರತ್ತುಗಳನ್ನು ಹಾಕಿದ್ದರಿಂದ ರೈತರು ಕಂಗಾಲಾದರು.

ಈಗ ಸಿದ್ದರಾಮಯ್ಯ ಸರ್ಕಾರವು ಅದಕ್ಕಿಂತ ಕಠಿಣ ಷರತ್ತುಗಳನ್ನು ವಿಧಿಸಿದೆ. ಇಂತಹ ಯಾವುದೇ ಷರತ್ತುಗಳನ್ನು ಹಾಗೂ ನಿಬಂಧನೆಗಳನ್ನು ಹಾಕದೇ ವಿಳಂಬವಿಲ್ಲದೇ ರೈತರ ಸಾಲದ ಮನ್ನಾದ 8000 ಕೋಟಿ ರೂ. ಗಳನ್ನು ಬ್ಯಾಂಕ್‌ ಖಾತೆಗಳಿಗೆ ನೇರವಾಗಿ ಜಮಾ ಮಾಡಬೇಕು ಎಂದು ಆಗ್ರಹಿಸಿದರು.   

Advertisement

Udayavani is now on Telegram. Click here to join our channel and stay updated with the latest news.

Next