Advertisement

ಕೋಲ್ಕತ್ತಾ ವೈದ್ಯರ ಮೇಲಿನ ಹಲ್ಲೆ ಖಂಡಿಸಿ ಪ್ರತಿಭಟನೆ

01:06 AM Jun 15, 2019 | Team Udayavani |

ಬೆಂಗಳೂರು: ಕೋಲ್ಕತ್ತಾದಲ್ಲಿ ಇತ್ತೀಚೆಗೆ ನಡೆದ ವೈದ್ಯ ಪರಿಭಾ ಮುಖರ್ಜಿ ಅವರ ಮೇಲಿನ ಹಲ್ಲೆ ಖಂಡಿಸಿ ಪಶ್ಚಿಮ ಬಂಗಾಳದ ಕಿರಿಯ ವೈದ್ಯರು ನಡೆಸುತ್ತಿರುವ ಮುಷ್ಕರಕ್ಕೆ ರಾಜ್ಯದ ವೈದ್ಯರೂ ಬೆಂಬಲ ನೀಡಿ ನಗರದ ಚಾಮರಾಜಪೇಟೆಯ ಭಾರತೀಯ ವೈದ್ಯಕೀಯ ಸಂಘ ಕಚೇರಿ ಎದುರು ವೈದ್ಯರು ಪ್ರತಿಭಟನೆ ನಡೆಸಿದರು.

Advertisement

ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ನೂರಾರು ವೈದ್ಯರು “ವೈದ್ಯರಿಕೆ ರಕ್ಷಣೆ ನೀಡಬೇಕು’, “ತುರ್ತು ನಿಗಾ ಘಟಕಗಳಲ್ಲಿ ಕಾರ್ಯನಿರ್ವಹಿಸುವ ವೈದ್ಯರಿಗೆ ಪೊಲೀಸ್‌ ಭದ್ರತೆ ಒದಗಿಸಬೇಕು’ ಹಾಗೂ “ವೈದ್ಯರ ಮೇಲೆ ಹಲ್ಲೆ ಮಾಡುವವರ ವಿರುದ್ಧ ಕಠಿಣ ಕಾನೂನು ಕ್ರಮಕ್ಕೆ ಮುಂದಾಗಬೇಕು’ ಎಂದು ಘೋಷಣೆ ಕೂಗಿದರು.

ಈ ವೇಳೆ ಮಾತನಾಡಿದ ಭಾರತೀಯ ವೈದ್ಯಕೀಯ ಸಂಘ ಕರ್ನಾಟಕ ರಾಜ್ಯ ಘಟಕದ ಕಾರ್ಯದರ್ಶಿ ಡಾ.ಎಸ್‌.ಶ್ರೀನಿವಾಸ, ತುರ್ತು ಸಂದರ್ಭದಲ್ಲಿ ವೈದ್ಯರು ತಮ್ಮ ಕೈಲಾದಷ್ಟು ಶ್ರಮ ಹಾಕಿ ರೋಗಿಯನ್ನು ಉಳಿಸಿಕೊಳ್ಳುವ ಪ್ರಯತ್ನ ಮಾಡುತ್ತಾರೆ. ಅದರ ಹೊರತಾಗಿ ರೋಗಿಯನ್ನು ಉಳಿಸಿಕೊಳ್ಳಲಾಗದಿದ್ದರೆ ಅದು ವೈದ್ಯರ ತಪ್ಪಲ್ಲ.

ಎರಡು ದಿನಗಳ ಹಿಂದೆ ಕೋಲ್ಕತ್ತಾದ ಎನ್‌ಆರ್‌ಎಸ್‌ ಮೆಡಿಕಲ್‌ ಕಾಲೇಜಿನಲ್ಲಿ ನಡೆದ ಘಟನೆಯಲ್ಲಿ 80 ವರ್ಷದ ಹೃದ್ರೋಗಿಯೊಬ್ಬರು ಚಿಕಿತ್ಸೆ ಫ‌ಲಕಾರಿಯಾಗದೆ ಸಾವೀಗಿಡಾಗಿದ್ದು, ಅವರ ಸಂಬಂಧಿ ಯುವ ವೈದ್ಯ ಪರಿಭಾ ಮುಖರ್ಜಿ ಎಂಬುವವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ.

ಈ ರೀತಿ ಘಟನೆಗಳು ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿದ್ದು, ಇವುಗಳನ್ನು ಹತೋಟಿಗೆ ತರುವುದಕ್ಕೆ ಸೂಕ್ತ ಕಾನೂನು ಕ್ರಮ ಅತ್ಯಗತ್ಯವಾಗಿದೆ. ಈ ನಿಟ್ಟಿನಲ್ಲಿ ವೈದ್ಯರ ಮೇಲಿನ ಹಲ್ಲೆ ಮಾಡುವವರ ವಿರುದ್ಧ ಪೋಕ್ಸೋ ಮಾದರಿಯಲ್ಲಿ ಜಾಮೀನು ರಹಿತ ಬಂಧನದಂತಹ ಕಾನೂನು ಕ್ರಮಕ್ಕೆ ಸರ್ಕಾರ ಮುಂದಾಗಬೇಕು ಎಂದು ಒತ್ತಾಯಿಸಿದರು.

Advertisement

ನಮ್ಮ ದೇಶದ ಜನಸಂಖ್ಯೆ ಹೆಚ್ಚಿದ್ದು, ವೈದ್ಯರ ಕೊರತೆ ಇದೆ. ಒಬ್ಬ ವೈದ್ಯ ನಿತ್ಯ 40 ರಿಂದ 50 ರೋಗಿಗಳಿಗೆ ಚಿಕಿತ್ಸೆ ಕೊಡಬೇಕಾದ ಒತ್ತಡವಿದೆ. ಇಂತಹ ಸಂದರ್ಭದಲ್ಲಿ ವೈದ್ಯರಿಗೆ ತಮ್ಮ ಕರ್ತವ್ಯ ನಿರ್ವಹಿಸಲು ಭದ್ರತಾ ಹಾಗೂ ಶಾಂತಿಯುತವಾದ ವಾತಾವರಣ ಅಗತ್ಯವಿರುತ್ತದೆ. ಆದರೆ, ಕಳೆದ ನಾಲ್ಕೈದು ವರ್ಷದಿಂದ ದೇಶದಲ್ಲಿ ವೈದ್ಯರ ಮೇಲೆ ಹಲ್ಲೆಗಳು ಹೆಚ್ಚಾದ ಹಿನ್ನೆಲೆ ತುರ್ತು ನಿಗಾ ಘಟಕಗಳಲ್ಲಿ ಕರ್ತವ್ಯ ನಿರ್ವಹಿಸಲು ಸಾಕಷ್ಟು ವೈದ್ಯರು ಹಿಂದೇಟು ಹಾಕುತ್ತಿದ್ದಾರೆ.

ವೈದ್ಯಕೀಯ ವಿದ್ಯಾರ್ಥಿಗಳು ಆತಂಕದಲ್ಲಿಯೇ ಅಭ್ಯಾಸ ನಡೆಸುತ್ತಿದ್ದಾರೆ. ಸರ್ಕಾರವು ಎಲ್ಲಾ ಆಸ್ಪತ್ರೆಗಳು ತುರ್ತು ನಿಗಾ ಘಟಕಕ್ಕೆ ಪೊಲೀಸ್‌ ಭದ್ರತೆ ಒದಗಿಸಬೇಕಿದೆ. ಜತೆಗೆ ಜನಸಾಮಾನ್ಯರು ವೈದ್ಯರು ಕೂಡಾ ಮನುಷ್ಯರೇ ಅವರನ್ನು ಎಲ್ಲರಂತೆಯೇ ಆತ್ಮೀಯತೆ ಹಾಗೂ ಗೌರವದಿಂದ ಕಾಣುವ ಪ್ರವೃತ್ತಿ ಬೆಳೆಸಿಕೊಳ್ಳಬೇಕು ಎಂದರು.

ಪ್ರತಿಭಟನಾನಿರತ ವೈದ್ಯರು ನಗರ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸುವ ಮೂಲಕ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್‌ ಶಾ, ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರಿಗೆ ವೈದ್ಯರ ಭದ್ರತೆ ಹಾಗೂ ವೈದ್ಯರ ಮೇಲಿನ ಹಲ್ಲೆಗಳ ವಿರುದ್ಧ ಕಠಿಣ ಕಾನೂನು ಜಾರಿಗೊಳಿಸುವಂತೆ ಒತ್ತಾಯಿಸಿದರು.

ಭಾರತೀಯ ವೈದ್ಯಕೀಯ ಸಂಘ ಕರ್ನಾಟಕ ರಾಜ್ಯ ಘಟಕದ ಅಧ್ಯಕ್ಷ ಡಾ.ಅನ್ನದಾನಿ ಎಂ.ಮೇಟಿ ಸೇರಿದಂತೆ ಸಂಘದ ಸದಸ್ಯ ವೈದ್ಯರು, ಕಿಮ್ಸ್‌ ಹಾಗೂ ಬೆಂಗಳೂರು ಮೆಡಿಕಲ್‌ ಕಾಲೇಜು ವಿದ್ಯಾರ್ಥಿಗಳು, ನರ್ಸಿಂಗ್‌ ಕಾಲೇಜು ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಪ್ರತಿಭಟನೆ ಹಿನ್ನೆಲೆ ಬೆಳಗ್ಗೆ 10 ರಿಂದ 12 ಗಂಟೆವರೆಗೆ ಕೆಲ ಖಾಸಗಿ ಆಸ್ಪತ್ರೆ ಹಾಗೂ ಕ್ಲಿನಿಕ್‌ಗಳ ಸೇವೆಯನ್ನು ಸ್ಥಗಿತಗೊಳಿಸಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next