ಹಗರಿಬೊಮ್ಮನಹಳ್ಳಿ: ಸಿಎಂ ಘೋಷಿಸಿರುವಂತೆ ರಾಜ್ಯದಲ್ಲಿ ನೇಕಾರರ ಸಾಲಮನ್ನಾ ಯೋಜನೆ ತಕ್ಷಣವೇ ಜಾರಿಗೊಳಿಸಬೇಕು ಎಂದು ಸಿಪಿಐ ಪಕ್ಷದ ತಾಲೂಕು ಕಾರ್ಯದರ್ಶಿ ಎಸ್.ಅನ್ವರ್ ಬಾಷಾ ಆಗ್ರಹಿಸಿದರು. ಕೇಂದ್ರ ಮತ್ತು ರಾಜ್ಯ ಸರಕಾರಗಳ ಜನ ವಿರೋಧಿ ನೀತಿ ಖಂಡಿಸಿ ಸಿಪಿಐ ಪಕ್ಷದ ತಾಲೂಕು ಪದಾಧಿಕಾರಿಗಳು ಪಟ್ಟಣದ ತಹಶೀಲ್ದಾರ್ ಕಚೇರಿ ಮುಂಭಾಗ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಅವರು ಸೋಮವಾರ ಮಾತನಾಡಿದರು.
ನೇಕಾರರಿಗೆ ನೀಡಲಾಗುತ್ತಿರುವ ಬ್ಯಾಂಕ್ ಕಿರುಕುಳ ತಡೆಯಬೇಕು. ಸಾರ್ವಜನಿಕ ವಲಯದಲ್ಲಿ ಹೂಡಿಕೆಯನ್ನು ಹೆಚ್ಚಿಸುವ ಮೂಲಕ ಉದ್ಯೋಗ ಸೃಷ್ಟಿಗೆ ಅಗತ್ಯ ಕ್ರಮ ಕೈಗೊಳ್ಳಬೇಕು. ಕೇಂದ್ರ ಮತ್ತು ರಾಜ್ಯ ಸರಕಾರಗಳು ನೆರೆ ಮತ್ತು ಬರದಿಂದಾಗಿ ತತ್ತರಿಸಿದಸಂತ್ರಸ್ತರಿಗೆ ಪರಿಹಾರ ನೀಡುವಲ್ಲಿ ಮೀನಮೇಷ ಎಣಿಸುತ್ತಿವೆ. ಯುವಜನರಿಗೆ ಉದ್ಯೋಗ ಕಲ್ಪಿಸಬೇಕು.
ಉದ್ಯೋಗ ಖಾತರಿ ಯೋಜನೆಯಡಿ 200 ಮಾನವ ದಿನಕ್ಕೆ ಉದ್ಯೋಗ ವಿಸ್ತರಿಸಿ, ತಕ್ಷಣವೇ ಬಾಕಿ ಕೂಲಿ ಮೊತ್ತ ಪಾವತಿಸಬೇಕು. ಕನಿಷ್ಠ ವೇತನವನ್ನು 18 ಸಾವಿರ ರೂಗೆ ಹೆಚ್ಚಿಸಬೇಕು ಎಂದು ಒತ್ತಾಯಿಸಿದರು. ಪಕ್ಷದ ಜಿಲ್ಲಾ ಸಮಿತಿ ಸದಸ್ಯ ಶಾಂತರಾಜ ಜೈನ್ ಮಾತನಾಡಿ, ಕೇತ್ರದಲ್ಲಿನ ಕೆರೆಗಳಿಗೆ ಶಾಶ್ವತವಾಗಿ ನದಿ ನೀರು ತುಂಬಿಸುವ ಯೋಜನೆ ಜಾರಿಗೊಳಿಸಬೇಕು. ವಸತಿರಹಿತರಿಗೆ ನಿವೇಶನ ಮತ್ತು ವಸತಿ ಸೌಲಭ್ಯ ಕಲ್ಪಿಸಬೇಕು. ಬರ ಮತ್ತು ನೆರೆ ಹಾವಳಿಯಿಂದ ಬೆಳೆನಷ್ಟಕ್ಕೊಳಗಾದ ರೈತರ ಸಾಲಮನ್ನಾ ಮಾಡಬೇಕು. ರೈತರ ಬೆಳೆಗಳಿಗೆ ವೈಜ್ಞಾನಿಕ ಬೆಂಬಲಬೆಲೆ ನಿಗದಿಪಡಿಸಬೇಕು ಎಂದರು.
ರಾಜ್ಯ ರೈತ ಸಂಘದ ಹತ್ತಿ ಅಡಿವಪ್ಪ ಮಾತನಾಡಿ, ಕೇಂದ್ರ ಸರಕಾರ ನೆರೆ ಸಂತ್ರಸ್ತರನ್ನು ಸಂಪೂರ್ಣ ಕಡೆಗಣಿಸಿ ಜನವಿರೋಧಿ ನೀತಿ ಅನುಸರಿಸುತ್ತಿದೆ. ಸಾಕಷ್ಟು ನವಗ್ರಾಮಗಳನ್ನು ನಿರ್ಮಾಣ ಮಾಡಬೇಕಿದ್ದು, ಯಾವೊಬ್ಬ ಸಂಸದರು ಕೇಂದ್ರದಲ್ಲಿ ರಾಜ್ಯದ ಪರಿಸ್ಥಿತಿಯನ್ನು ಹೇಳಲು ಅಂಜುತ್ತಿರುವುದು ನಾಚಿಕೆಗೇಡಿ ಸಂಗತಿಯಾಗಿದೆ ಎಂದು ಹರಿಹಾಯ್ದರು. ತಹಶೀಲ್ದಾರ್ ಆಶಪ್ಪ ಪೂಜಾರಗೆ ಮನವಿ ಸಲ್ಲಿಸಿದರು.
ಪಕ್ಷದ ಮುಖಂಡರಾದ ಗಾದಿಲಿಂಗಪ್ಪ, ಮೈಲಪ್ಪ, ನಾಗೇಶ, ಚೌಡಪ್ಪ, ಕೆ. ಗಂಗಾಧರ, ಲಕ್ಷ್ಮಣ, ವಿಜಯಮ್ಮ, ಲಲಿತಾ, ವೆಂಕಟಮ್ಮ, ಶಿವಕುಮಾರ, ಕಲ್ಯಾಣ, ಹನುಮಂತಪ್ಪ, ಪರಶುರಾಮ, ದೇವಣ್ಣ ಇತರರಿದ್ದರು.