Advertisement

ಕರೆನ್ಸಿ ಚಸ್ಟ್‌ ಸೇವೆ ಸ್ಥಗಿತಗೊಳಿಸುವ ನಿರ್ಧಾರಕ್ಕೆ ಖಂಡನೆ

03:39 PM Dec 12, 2019 | Suhan S |

ಕುಷ್ಟಗಿ: ಪಟ್ಟಣದ ಮಾರುತಿ ವೃತ್ತದ ಎಸ್‌ಬಿಐ ಬ್ಯಾಂಕ್‌ ಶಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಹಣ ಕ್ರೋಢೀಕರಣ ಘಟಕವನ್ನು (ಕರೆನ್ಸಿ ಚಸ್ಟ್‌) ಸೇವೆ ಇದೇ ಡಿ. 31ರಿಂದ ಸ್ಥಗಿತಗೊಳಿಸುವ ನಿರ್ಧಾರಕ್ಕೆ ಉದ್ದಿಮೆದಾರರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Advertisement

ಪಟ್ಟಣದ ಎಸ್‌ಬಿಐ ಶಾಖೆಯಲ್ಲಿದ್ದ ಕರೆನ್ಸಿ ಘಟಕಕ್ಕೆ ಭಾರತೀಯ ರಿಸರ್ವ್‌ ಬ್ಯಾಂಕ್‌ನಿಂದ ಹಣ ಪೂರೈಕೆಯ ವ್ಯವಸ್ಥೆ ಇತ್ತು. ಆದರೆ ಈ ಸೇವೆ ಇದೇ ಡಿ. 31ಕ್ಕೆ ಬಂದ್‌ ಆಗುತ್ತಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.

ಈ ಬ್ಯಾಂಕಿನಿಂದ ಸ್ಥಳೀಯ ಅಂಚೆ ಕಚೇರಿ, ತಾವರಗೇರಾ, ಹನುಮಸಾಗರ, ಹೂಲಗೇರಾ ಮೊದಲಾದ ಎಸ್‌ಬಿಐ ಶಾಖೆಗಳಿಗೆ, ಸಹಕಾರ ಬ್ಯಾಂಕ್‌ ಸೇರಿದಂತೆ ಇತರೇ ಬ್ಯಾಂಕ್‌ ಹಣ ಸರಬರಾಜು ವ್ಯವಸ್ಥೆ ಇತ್ತು. ಇದರಿಂದ ಸಕಾಲದಲ್ಲಿ ಹಣ ಲಭ್ಯತೆ ಇರುತ್ತಿದ್ದು, ಯಾವಾಗಲೂ 10 ಕೋಟಿಗೂ ಅಧಿಕ ಹಣ ಮೀಸಲಿರುತ್ತಿತ್ತು. ಲಕ್ಷಕ್ಕೂ ಅಧಿಕ ಮೊತ್ತ ಅಗತ್ಯವಾದರೆ ಕೂಡಲೇ ಸಿಗುತ್ತಿತ್ತು. ಕರೆನ್ಸಿ

ಚಸ್ಟ್‌ ಸೇವೆ ಡಿ. 31ರಿಂದ ಸ್ಥಗಿತಗೊಂಡರೆ ಯಲಬುರ್ಗಾ ಎಸ್‌ಬಿಐ ಶಾಖೆಯಿಂದ ತರಿಸಿಕೊಳ್ಳಬೇಕಿದ್ದು, ಅಲ್ಲಿಯವರೆಗೂ ಕಾಯಬೇಕು. ಲಕ್ಷಕ್ಕೂ ಅಧಿಕ ಮೊತ್ತ ಅಗತ್ಯವಾದರೆ ಕ್ರೋಢಿಕೃತವಾಗುವರೆಗೂ ಕಾಯಬೇಕು. ಇಲ್ಲವೇ ದೊಡ್ಡ ಮೊತ್ತ ಹಣ ಅಗತ್ಯವಾದರೆ ಮುಂಚೆಯೇ ಶಾಖೆಗೆ ತಿಳಿಸುವ ಪರಿಸ್ಥಿತಿ ಬರಲಿದೆ.

ಮಾಹಿತಿ ಪ್ರಕಾರ ಆರ್‌ಬಿಐ ನಿರ್ದೇಶನದ ಮೇರೆಗೆ ಕರೆನ್ಸಿ ಚಸ್ಟ ಸೇವೆ ಸ್ಥಗಿತಕ್ಕೆ ಎಲ್ಲವೂ ಆನ್‌ಲೈನ್‌ನಲ್ಲಿ ವ್ಯವಹರಿಸಲು ಪೂರಕ ವ್ಯವಸ್ಥೆ ಇದಾಗಿದೆ ಎಂದು ಹೇಳಲಾಗುತ್ತಿದೆ. ಆದರೆ ಇದನ್ನು ಒಪ್ಪುವುದಿಲ್ಲ. ಈ ಸೇವೆಯನ್ನು ಯಾವೂದೇ ಕಾರಣಕ್ಕೂ ಸ್ಥಗಿತಗೊಳಿಸದಿರಲಿ, ಇದೇ ಡಿ. 13ರಂದು ಬ್ಯಾಂಕ್‌ ಎಜಿಎಂ ಮೂಲಕ ಡಿಜಿಎಂಗೆ ಮನವಿ ಸಲ್ಲಿಸಲಾಗುತ್ತಿದೆ. ಅಲ್ಲದೇ ಕೊಪ್ಪಳ ಸಂಸದ ಕರಡಿ ಸಂಗಣ್ಣ ಹಾಗೂ ಕೇಂದ್ರ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್‌ ಅವರಿಗೂ ಸಲ್ಲಿಸಲಾಗುವುದು ಎಂದು ಹೈದ್ರಾಬಾದ್‌ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಬಸವರಾಜ್‌ ಗಾಣಗೇರ ತಿಳಿಸಿದರು. ಬ್ಯಾಂಕಿನಲ್ಲಿ ಗ್ರಾಹಕರಿಗೆ ಸೇವೆ ತೃಪ್ತಿಕರವಾಗಿಲ್ಲ. ತಾಸುಗಟ್ಟಲೇ ನಿಲ್ಲಬೇಕು ಇದನ್ನು ಸರಿಪಡಿಸದೇ ಬ್ಯಾಂಕಿನ ಕರೆನ್ಸಿ ಚಸ್ಟ್‌ ಸೇವೆ ಸ್ಥಗಿತಗೊಳಿಸಲು ಮುಂದಾಗಿರುವುದು ಖಂಡನೀಯ ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next