ರಾಯಚೂರು: ಭಾರತೀಯ ಜೀವ ವಿಮಾ ನಿಗಮ ಸಂಸ್ಥೆಯನ್ನು ಷೇರು ವಿನಿಮಯ ಕೇಂದ್ರದಲ್ಲಿ ಪಟ್ಟಿ ಮಾಡಲು ಮತ್ತು ಎಲ್‌ಐಸಿಯ ಐಪಿಒ ಬಿಡುಗಡೆ ಮಾಡುತ್ತಿರುವ ಕ್ರಮ ಖಂಡಿಸಿ ವಿಮಾ ನೌಕರರ ಸಂಘದ ರಾಯಚೂರು ವಿಭಾಗ ಘಟಕದ ಸದಸ್ಯರು ಪ್ರತಿಭಟನೆ ನಡೆಸಿದರು.
ಎಲ್‌ಐಸಿಯ ವಿಭಾಗೀಯ ಕಚೇರಿ ಎದುರು ಧರಣಿ ನಡೆಸಿದ ಪ್ರತಿಭಟನಾಕಾರರು, ಕೇಂದ್ರ ಸರ್ಕಾರದ ಧೋರಣೆ ಖಂಡಿಸಿ ಪ್ರತಿಭಟನೆ ನಡೆಸಿದರು.
ಎಲ್‌ಐಸಿಯನ್ನು ಹಂತ-ಹಂತವಾಗಿ ದುರ್ಬಲಗೊಳಿಸುವ ಹುನ್ನಾರ ನಡೆದಿದೆ. ದೇಶದ ಆರ್ಥಿಕತೆಗೆ ತನ್ನದೇ ವಿಶೇಷ ನೆರವು ನೀಡಿದ ಸಂಸ್ಥೆಯನ್ನೇ ಖಾಸಗೀಕರಣ ಮಾಡುವ ಸಂಚು ಒಳ್ಳೆಯದಲ್ಲ ಎಂದು ದೂರಿದರು.
ಸರ್ಕಾರದ ಆರಂಭಿಕ ಬಂಡವಾಳ ಐದು ಕೋಟಿ ಇತ್ತು. ಆ ನಂತರ ಎಲ್‌ಐಸಿ ತಾನು ಅಂದು ಸ್ವಾಧೀನಪಡಿಸಿಕೊಂಡ ಹಿಂದಿನ ಕಂಪನಿಗಳ ವಿಮಾದಾರರಿಗೆ ಈ ಆರಂಭಿಕ ಬಂಡವಾಳಕ್ಕಿಂತ ಅತಿ ಹೆಚ್ಚಿನ ಪರಿಹಾರ ಪಾವತಿಸಿದೆ. ಪಾಲಿಸಿದಾರರೇ ಎಲ್‌ಐಸಿಯ ನಿಜವಾದ ಮಾಲೀಕರು. ಪಾಲಿಸಿದಾರರ ಉಳಿತಾಯದ ಹಣದ ಮೂಲಕ ರಚಿಸಲಾದ ಎಲ್ ಐಸಿಯ ಅಪಾರ ಮೌಲ್ಯವನ್ನು ಕೆಲವೇ ಹೂಡಿಕೆದಾರರಿಗೆ ಹಸ್ತಾಂತರಿಸುವುದು ಅಪಾಯಕಾರಿ ಬೆಳವಣಿಗೆ ಎಂದು ಕಳವಳ ವ್ಯಕ್ತಪಡಿಸಿದರು.
ಹಣಕಾಸು ವರ್ಷದ ವಿತ್ತೀಯ ಕೊರತೆ ಸರಿದೂಗಿಸುವ ನೆಪದಲ್ಲಿ ಎಲ್ ಐಸಿಯ ಷೇರುಗಳನ್ನು ಮಾರಲು ಸರ್ಕಾರ ವಿಫಲ ಪ್ರಯತ್ನ ನಡೆಸಿದೆ. ಎಲ್‌ಐಸಿಯ ಮೌಲ್ಯವನ್ನು 15 ಲಕ್ಷ ಕೋಟಿ ರೂ.ಗಳಿಂದ 6 ಲಕ್ಷ ಕೋಟಿ ರೂ.ಗೆ ಇಳಿಸಲಾಗಿದೆ. ಇದು ದೇಶದ ಅಸಂಖ್ಯೆ ಪಾಲಿಸಿದಾರರ, ಸಂಸ್ಥೆಯನ್ನು ಬೆಳೆಸಿದ ದೇಶದ ಜನರ ದೃಢ ನಂಬಿಕೆ ಮತ್ತು ವಿಶ್ವಾಸಕ್ಕೆ ನೀಡಿದ ಆಘಾತ ಎಂದು ದೂರಿದರು.
ಎಲ್‌ಐಸಿಯ ಐಪಿಒ ಎನ್ನುವುದು ಸಂಸ್ಥೆಯ ಖಾಸಗೀಕರಣದ ಮೊದಲ ಹೆಜ್ಜೆಯಾಗಿದೆ. ನವಉದಾರೀಕರಣ ನೀತಿಗೆ ಬದ್ಧವಾಗಿರುವ ಈ ಸರ್ಕಾರ ಎಲ್‌ಐಸಿಯ ಶೇ.3.5 ಷೇರುಗಳನ್ನು ವಿಕ್ರಯಗೊಸಿದರೂ ನಾವು ಸುಮ್ಮನಿರುವುದಿಲ್ಲ ಎಂದರು.