Advertisement

ಸ್ಥಳೀಯ ಸಂಸ್ಥೆಗಳಲ್ಲಿ ಶಾಸಕರ ಹಸ್ತಕ್ಷೇಪಕ್ಕೆ ಖಂಡನೆ

09:22 PM Mar 04, 2020 | Lakshmi GovindaRaj |

ಅರಸೀಕೆರೆ: ಕ್ಷೇತ್ರದ ಶಾಸಕ ಕೆ.ಎಂ.ಶಿವಲಿಂಗೇಗೌಡರು ಸ್ಥಳೀಯ ಜನಪ್ರತಿನಿಧಿಗಳ ಅಧಿಕಾರ ಹಾಗೂ ಅನುದಾನದಲ್ಲಿ ಹಸ್ತಕ್ಷೇಪ ಮಾಡುವ ಮೂಲಕ ಪ್ರಜಾಪ್ರಭುತ್ವ ಆಡಳಿತ ವ್ಯವಸ್ಥೆಗೆ ಅವಮಾನ ಮಾಡುತ್ತಿದ್ದಾರೆ ಎಂದು ಆರೋಪಿಸಿ ಕಾಂಗ್ರೆಸ್‌ ಮುಖಂಡರು ನಗರದ ಗ್ರಾಮೀಣ ನೀರು ಸರಬರಾಜು ಯೋಜನಾ ಕಚೇರಿಯ ಮುಂಭಾಗ ಬುಧವಾರ ಪ್ರತಿಭಟನೆ ನಡೆಸಿದರು.

Advertisement

ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡಿದ ಜಿಪಂ ಸದಸ್ಯ ಪಟೇಲ್‌ ಶಿವಪ್ಪ, ಪ್ರಜಾಪ್ರಭುತ್ವ ಆಡಳಿತದಲ್ಲಿ ಪಂಚಾಯತ್‌ ರಾಜ್‌ ವ್ಯವಸ್ಥೆಯಲ್ಲಿ ಅಧಿಕಾರ ವಿಕೇಂದ್ರೀಕರಣ ಮಾಡುವ ಮೂಲಕ ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿ ಹಾಗೂ ಗ್ರಾಮ ಪಂಚಾಯಿತಿ ಮಟ್ಟದ ಅಭಿವೃದ್ಧಿ ಕೆಲಸ ಕಾರ್ಯಗಳಿಗೆ ಸರ್ಕಾರ ಅನುದಾನ ಬಿಡುಗಡೆ ಮಾಡುತ್ತದೆ. ಸ್ಥಳೀಯ ಜನಪ್ರತಿನಿಧಿಗಳು ಕಾರ್ಯಯೋಜನೆ ಅನುಷ್ಠಾನ ಗೊಳಿಸಬೇಕೆಂಬ ಉದ್ದೇಶದಿಂದ ಆಡಳಿತ ವ್ಯವಸ್ಥೆ ರೂಪಿಸಲಾಗಿದೆ.

ಆದರೆ ಕ್ಷೇತ್ರದ ಶಾಸಕರು ಜಿಲ್ಲಾ ಪಂಚಾಯಿತಿ ಚುನಾಯಿತ ಪ್ರತಿನಿಧಿಗಳ ಅಧಿಕಾರ ವ್ಯಾಪ್ತಿ ಅರ್ಥ ಮಾಡಿಕೊಳ್ಳದೇ ಕಾಂಗ್ರೆಸ್‌ ಪಕ್ಷದ ಸದಸ್ಯರು ಆಯ್ಕೆಯಾಗಿರುವ ಕ್ಷೇತ್ರಗಳ ಅಭಿವೃದ್ಧಿ ಕಾರ್ಯಗಳ ಅನುದಾನದಲ್ಲಿ ಹಾಗೂ ಅನುಷ್ಠಾನದಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂದು ಆಪಾದಿಸಿದರು. ಜಿಲ್ಲೆಯಲ್ಲಿ ಯಾವ ಕ್ಷೇತ್ರದ ಶಾಸಕರು ಮಾಡದಂತಹ ಅನ್ಯಾಯವನ್ನು ಮಾಡುವ ಮೂಲಕ ಸ್ಥಳೀಯ ಜನಪ್ರತಿನಿಧಿಗಳ ಅಧಿಕಾರವನ್ನೇ ಕಿತ್ತುಕೊಳ್ಳುತ್ತಿದ್ದಾರೆ ಎಂದು ದೂರಿದರು.

ಬೆಂಬಲಿಗರಿಗೆ ಕಾಮಗಾರಿ ಗುತ್ತಿಗೆ: ಗ್ರಾಮೀಣ ಕುಡಿಯುವ ನೀರು ಮತ್ತು ಸರಬರಾಜು ಇಲಾಖೆಯಿಂದ ಗಂಡಸಿ ಮತ್ತು ಕಣಕಟ್ಟೆ ಹೋಬಳಿಯಲ್ಲಿ ಜಿಲ್ಲಾ ಪಂಚಾಯಿತಿ ಅಧೀನದಲ್ಲಿ ಅನುಷ್ಠಾನಗೊಳ್ಳಬೇಕಿದ್ದ ಹಲವಾರು ಅಭಿವೃದ್ಧಿ ಕಾಮಗಾರಿಗಳನ್ನು ತಮ್ಮ ಪಕ್ಷದ ಕಾರ್ಯಕರ್ತರಿಗೆ ಗುತ್ತಿಗೆ ನೀಡಿ ಸರ್ವಾಧಿಕಾರಿ ಧೋರಣೆ ಪ್ರದರ್ಶಿಸುತ್ತಿರುವುದು ನೋಡಿದರೆ ಶಾಸಕರಿಗೆ ಪ್ರಜಾಪ್ರಭುತ್ವ ಆಡಳಿತ ವ್ಯವಸ್ಥೆಯ ಅಧಿಕಾರ ವಿಕೇಂದ್ರೀಕರಣದ ಬಗ್ಗೆ ಗೌರವ ಇಲ್ಲದಂತೆ ಕಾಣುತ್ತದೆ ಎಂದು ಅವರು ಕಿಡಿ ಕಾರಿದರು.

ಪ್ರತಿಭಟನೆಯಲ್ಲಿ ಬೇಲೂರು ಕ್ಷೇತ್ರದ ಜಿಪಂ ಸದಸ್ಯರಾದ ಮಂಜಪ್ಪ, ಚಂದ್ರಶೇಖರ್‌, ಜಿಪಂ ಮಾಜಿ ಸದಸ್ಯೆ ಸುಲೋಚನಾ ಬಾಯಿ, ನಗರಸಭೆ ಸದಸ್ಯ ವೆಂಕಟಮುನಿ, ನಗರಸಭೆ ಮಾಜಿ ಸದಸ್ಯ ಶ್ರೀನಿವಾಸ್‌, ಉಮಾಶಂಕರ್‌, ಜಯಪದ್ಮ , ನಿರಂಜನ್‌, ಯೋಗೀಶ್‌, ಮದನ್‌, ದಲಿತ ಸಂಘಟನೆಗಳ ಒಕ್ಕೂಟಗಳ ಅಧ್ಯಕ್ಷ ವೆಂಕಟೇಶ್‌, ಅಣ್ಣಾ ದೊರೈ, ಮಾಡಾಳು ರಂಗನಾಥ್‌, ನಂಜಪ್ಪ, ಕೃಷ್ಣನಾಯ್ಕ ಹಾಗೂ ಮತ್ತಿತರರು ಭಾಗವಹಿಸಿದ್ದರು.

Advertisement

ಸಂವಿಧಾನದ ಆಶಯಗಳಿಗೆ ಧಕ್ಕೆ: ಜಿಪಂ ಸದಸ್ಯ ಮಾಡಾಳು ಸ್ವಾಮಿ ಮಾತನಾಡಿ, ಜಿಲ್ಲೆಯ ಯಾವ ಶಾಸಕರೂ ಜಿಲ್ಲಾ ಪಂಚಾಯಿತಿ ಸದಸ್ಯರ ಅನುದಾನಕ್ಕೆ ಕತ್ತರಿ ಹಾಕುವುದಿರಲಿ ಅಥವಾ ಕಾಮಗಾರಿಗೆ ಸಂಬಂಧಿಸಿದ ಹಸ್ತಕ್ಷೇಪ ಮಾಡಿಲ್ಲ ಆದರೆ. ಸ್ಥಳೀಯ ಶಾಸಕರು ಉದ್ದೇಶ ಪೂರಕವಾಗಿಯೇ ಕಾಂಗ್ರೆಸ್‌ ಸದಸ್ಯರು ಆಯ್ಕೆಯಾಗಿರುವ ಕ್ಷೇತ್ರಗಳಲ್ಲಿ ಹಸ್ತಕ್ಷೇಪ ಮಾಡುವ ಮೂಲಕ ಸಂವಿಧಾನದ ಆಶಯಗಳಿಗೆ ಧಕ್ಕೆ ತರುತ್ತಿದ್ದಾರೆ. ಶಾಸಕರು ತಮ್ಮ ವರ್ತನೆಯನ್ನು ಸರಿಪಡಿಸಿಕೊಳ್ಳದಿದ್ದರೆ ಕಾಂಗ್ರೆಸ್‌ನಿಂದ ಬೀದಿಗಿಳಿದು ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದರು.

ಬೆಲೆ ತೆರಬೇಕಾಗುತ್ತದೆ: ಕಾಂಗ್ರೆಸ್‌ ಮುಖಂಡ ಶಶಿಧರ್‌ ಮಾತನಾಡಿ, ಶಾಸಕರು ತಮಗೆ ಸರ್ಕಾರದಿಂದ ಬರುವ ಕೋಟ್ಯಂತರ ರೂ. ಅನುದಾನದ ಜೊತೆಗೆ ಜಿಪಂ ಸದಸ್ಯರ ಅನುದಾನವನ್ನು ಬಳಕೆ ಮಾಡಿಕೊಂಡು ಮುಂದಿನ ಗ್ರಾಮಪಂಚಾಯಿತಿ ಚುನಾವಣೆಯ ದೃಷ್ಟಿಯಿಂದ ಜೆಡಿಎಸ್‌ ಕಾರ್ಯಕರ್ತರಿಗೆ ಕಾಮಗಾರಿಗಳನ್ನು ನೀಡುವ ಆಸೆ ತೋರಿಸಿ ಹಿಡಿದಿಟ್ಟುಕೊಳ್ಳಲು ಅನುದಾನವನ್ನು ದುರ್ಬಳಕೆ ಮಾಡಿಕೊಳ್ಳುವ ಮೂಲಕ ಸ್ಥಳೀಯ ಸಂಸ್ಥೆಗಳ ಚುನಾಯಿತ ಜನಪ್ರತಿನಿಧಿಗಳ ಅಧಿಕಾರ ಮೊಟಕುಗೊಳಿಸುತ್ತಿರುವುದು ಸರಿಯಲ್ಲ. ಮುಂದಿನ ದಿನಗಳಲ್ಲಿ ಇದಕ್ಕೆ ಅವರು ಬೆಲೆ ತೆರಬೇಕಾಗುತ್ತದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next