Advertisement

ಸೇತುವೆ ಕಾಮಗಾರಿ ಕಳಪೆ ಖಂಡಿಸಿ ಪ್ರತಿಭಟನೆ

03:07 PM Dec 12, 2019 | Suhan S |

ಬ್ಯಾಡಗಿ: ಮೋಟೆಬೆನ್ನೂರಗುತ್ತಲ ಮಾರ್ಗ ಮಧ್ಯದ ಅಳಲಗೇರಿ ಗ್ರಾಮದ ಬಳಿ ಒಂದೂವರೆ ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿರುವ ಸೇತುವೆ ಕಾಮಗಾರಿ ಕಳಪೆಯಾಗಿದ್ದು, ಈ ಕುರಿತು ಸಮಗ್ರ ತನಿಖೆ ನಡೆಸಿ ಗುತ್ತಿಗೆದಾರನ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿಅಳಲಗೇರಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.

Advertisement

ಬುಧವಾರ ಸೇತುವೆ ಬಳಿಯಲ್ಲಿ ಸೇರಿದ್ದ ಗ್ರಾಮಸ್ಥರು ಸೇತುವೆ ಕಾಮಗಾರಿಯಲ್ಲಿ ಕಳಪೆ ಸಾಮಗ್ರಿಗಳನ್ನು ಬಳಸಿ ನಿರ್ಮಿಸಿದ ಕಾರಣ ಸೇತುವೆ ಉದ್ಘಾಟನೆಗೂ ಮುನ್ನವೇ ಬಿರುಕು ಕಾಣಿಸುತ್ತಿವೆ ಎಂದು ಆರೋಪಿಸಿ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿದರು.

ಈ ಸಂದರ್ಭದಲ್ಲಿ ಮಾತನಾಡಿದ ನ್ಯಾಯವಾದಿ ರಾಮನಗೌಡ ತಂಗೊಡರ, ಮೋಟೆಬೆನ್ನೂರ ಗ್ರಾಮದಿಂದ ಅಳಲಗೇರಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ನಿಟ್ಟಿನಲ್ಲಿ ಸುಮಾರು 1.32 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ ಸೇತುವೆ ಸಂಪೂರ್ಣ ಕಳಪೆಯಾಗಿದೆ. ಈ ಕುರಿತು ನಿರ್ಮಾಣ ಹಂತದಲ್ಲಿಯೇ ಹಲವು ಬಾರಿ ಇಲಾಖೆ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಇಷ್ಟಾದರೂ ಗುತ್ತಿಗೆದಾರನ ಕೈಗೊಂಬೆಗಳಂತೆ ವರ್ತಿಸಿದ ಅಧಿಕಾರಿಗಳು ಬೇಜವಾಬ್ದಾರಿತ ತೋರಿದ್ದಾರೆ. ಸಾರ್ವಜನಿಕರ ಬಳಕೆಗೂ ಮುನ್ನವೇ ಸೇತುವೆಯಲ್ಲಿ ಬಿರುಕು ಕಾಣಿಸಿಕೊಂಡಿದೆ. ಕಳಪೆ ಮಟ್ಟದ ಸಾಮಗ್ರಿ ಬಳಸಿದ ಕಾರಣ ಸೇತುವೆ ಈ ಸ್ಥಿತಿ ಬಂದಿದ್ದು, ಇಂತಹ ಕಾಮಗಾರಿ ನಡೆಸಿದ ಗುತ್ತಿದಾರನನ್ನು ಕಪ್ಪು ಪಟ್ಟಿಗೆ ಸೇರಿಸುವಂತೆ ಆಗ್ರಹಿಸಿದರು.

ಶರೀಫ್‌ ಕೋಟಿಯವರ ಮಾತನಾಡಿ, 2018ರಲ್ಲಿ ಆರಂಭವಾದ ಕಾಮಗಾರಿಯನ್ನು ಇದೆ-2019 ವರ್ಷದ 5ನೇ ತಿಂಗಳಿನಲ್ಲಿ ಮುಗಿಸಬೇಕಿತ್ತು. ಆದರೆ, ಈ ವರೆಗೂ ಗುತ್ತಿಗೆದಾರ ಕಾಮಗಾರಿ ಮುಕ್ತಾಯಗೊಳಿಸಿಲ್ಲ. ಇದಕ್ಕೆ ಸಂಬಂಧಪಟ್ಟಂತೆ ಅ ಧಿಕಾರಿಗಳು ಸಹ ಯಾವುದೇ ಮುತುವರ್ಜಿ ವಹಿಸುತ್ತಿಲ್ಲ. ಪರಿಣಾಮ ಸೇತುವೆ ಮುಂದಿನ ರಸ್ತೆ ಹಾಳು ಬಿದ್ದಿದ್ದು, ಸಂಚಾರ ದುಸ್ಥರವಾಗಿದೆ. ಆದ್ದರಿಂದ ಯಾವುದೇ ಕಾರಣಕ್ಕೂ ಗುತ್ತಿಗೆದಾರನಿಗೆ ಉಳಿದ ಬಿಲ್‌ ಪಾವತಿಸದಂತೆ ಆಗ್ರಹಿಸಿದರು.

ಶಾಂತಪ್ಪ ಕೋಟಿಯವರ ಮಾತನಾಡಿ, ಸೇತುವೆಗೆ ಬಳಸಿದ ಸಾಮಗ್ರಿಗಳು ಸಂಪೂರ್ಣ ಕಳಪೆಯಾಗಿದ್ದು, ಪರಿಣಾಮ ಈಗಾಗಲೇ ಸೇತುವೆ ಮೇಲಿನ ಸಿಮೆಂಟ್‌ ಸೇರಿದಂತೆ ಕೈಯಿಂದ ಕಿತ್ತರೂ ಕಲ್ಲುಗಳು ಹೊರಬರುತ್ತಿವೆ. ಸೇತುವೆ ಮೇಲೆ ಓಡಾಡಲು ಭಯವಾಗುತ್ತಿದೆ. ಸೇತುವೆಗೆ ಬಳಸಿದ ವಸ್ತುಗಳನ್ನು ಪರೀಕ್ಷೆ ಮಾಡಿಸಿದಲ್ಲಿ ಗುಣಮಟ್ಟದ ಸತ್ಯಾ ಸತ್ಯತೆ ಹೋರಬೀಳಲಿದೆ. ಸಾರ್ವಜನಿಕರ ತೆರಿಗೆ ಹಣವನ್ನು ದುರುಪಯೋಗ ಮಾಡಿದ್ದು, ಸರಕಾರಕ್ಕೆ ಸೇತುವೆಗೆ ಬಳಸಿದ ಮೊತ್ತವನ್ನು ಮರು ಭರಣ ಮಾಡಿಕೊಳ್ಳುವಂತೆ ಆಗ್ರಹಿಸಿದರು. ಬಸಣ್ಣ ಬಣಕಾರ, ಫಕ್ಕೀರಗೌಡ ತಂಗೊಡರ, ಸಂಜೀವ ಯಮನಕ್ಕನವರ, ರಾಜನಗೌಡ ತಂಗೊಡರ, ನಿಂಗಪ್ಪ ಹೊನ್ನತ್ತಿ, ಬೀರಪ್ಪ ಹೊನ್ನತ್ತಿ, ಕರಿಯಪ್ಪ ಮಾಗಳದ, ಹೊನ್ನಪ್ಪ ತಳವಾರ ಸೇರಿದಂತೆ ಇನ್ನಿತರರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next