ಹುಬ್ಬಳ್ಳಿ: ತೈಲ, ಅಡುಗೆ ಅನಿಲ ಹಾಗೂ ದಿನಬಳಕೆ ವಸ್ತುಗಳ ಬೆಲೆ ಹೆಚ್ಚಳ ಖಂಡಿಸಿ, ಅಖೀಲ ಭಾರತ ಮಜಲಿಸ್ ಎ ಇತ್ತೇಹಾದುಲ್ ಮಸ್ಲೀಮೀನ್ ಪಕ್ಷದ ನೇತೃತ್ವದಲ್ಲಿ ಬುಧವಾರ ಸೈಕಲ್ ರ್ಯಾಲಿ ನಡೆಯಿತು.
ಇಲ್ಲಿನ ಡಾ|ಬಿ.ಆರ್.ಅಂಬೇಡ್ಕರ್ ವೃತ್ತದಿಂದ ಮಿನಿವಿಧಾನಸೌಧದವರೆಗೆ ಸೈಕಲ್ ರ್ಯಾಲಿ ಮೂಲಕ ಆಗಮಿಸಿ ತಹಶೀಲ್ದಾರ್ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಲಾಯಿತು. ಕೋವಿಡ್-19 ಸಂಕಷ್ಟದಿಂದ ಜನರು ಆರ್ಥಿಕ ಸಮಸ್ಯೆ ಅನುಭವಿಸುತ್ತಿದ್ದು, ಇಂತಹ ಸಂದರ್ಭದಲ್ಲಿ ಪೆಟ್ರೋಲ್, ಡಿಸೇಲ್, ಅಡುಗೆ ಅನಿಲ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಹೆಚ್ಚಿಸುವ ಮೂಲಕ ಜನ ಸಾಮಾನ್ಯರಿಗೆ ದೊಡ್ಡ ಹೊರೆ ಹಾಕಲಾಗಿದೆ. ಸಾಮಾನ್ಯ ಜನರ ಬಗ್ಗೆ ಚಿಂತನೆ ಮಾಡಬೇಕಾದ ಕೇಂದ್ರ ಸರಕಾರ ಶ್ರೀಮಂತರ ಹಿತ ಕಾಯುವ ನಿಟ್ಟಿನಲ್ಲಿ ಬೆಲೆ ಏರಿಕೆ ಮಾಡಿರುವುದು ಖಂಡನೀಯ. ಕೂಡಲೇ ಬೆಲೆ ಇಳಿಸಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ನೇಪಾಳದಲ್ಲಿ ಪ್ರತಿ ಲೀಟರ್ ಸಪೆಟ್ರೋಲ್‌ಗೆ 53 ರೂ. ಶ್ರೀಲಂಕಾದಲ್ಲಿ 51 ರೂ. ಅಪಘಾನಿಸ್ತಾನದಲ್ಲಿ 37ರೂ. ಇದೆ. ಆದರೆ ಭಾರತದಲ್ಲಿ 93 ರೂ. ತಲುಪಿದೆ. ಕೇಂದ್ರ ಸರಕಾರ ಆಯ-ವ್ಯಯದಲ್ಲಿ ಪ್ರತಿ ಲೀಟರ್ ಪೆಟ್ರೋಲ್‌ಗೆ 2.50 ರೂ. ಡಿಸೇಲ್ ಗೆ 4 ರೂ. ಹೆಚ್ಚಿಸಿ ಜನ ವಿರೋಧಿ ಕ್ರಮ ಕೈಗೊಂಡಿದೆ. ಕೇಂದ್ರ ಸರಕಾರ ಪೆಟ್ರೋಲ್, ಡಿಸೇಲ್ ಮೇಲಿನ ಹಲವು ಸೆಸ್‌ಗಳನ್ನು ಕಡಿಮೆ ಮಾಡುವ ಮೂಲಕ ದರ ಇಳಿಸಬೇಕು. ಇದರೊಂದಿಗೆ ರಸಗೊಬ್ಬರ, ಕಲ್ಲಿದ್ದಲು, ಕಡಲೆ, ವಟಾಣಿ, ಹತ್ತಿಯಿಂದ ಹಿಡಿದು ತೋಟಗಾರಿಕೆ ಬೆಳೆಗಳು ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದೆ. ಇದರೊಂದಿಗೆ ವಿಮಾನ ನಿಲ್ದಾಣ, ರೈಲು, ಬಂದರು, ಗೋದಾಮು, ಎಲ್‌ಐಸಿ ಇನ್ನಿತರೆ ಸರಕಾರಿ ಸ್ವಾಮ್ಯದ ಸಂಸ್ಥೆಗಳನ್ನು ಸಖಾಸಗೀಕರಣಕ್ಕೆ ಮುಂದಾಗಿದ್ದಾರೆ ಕೂಡಲೇ ಇವುಗಳನ್ನು ವಾಪಸ್ ಪಡೆಯಬೇಕೆಂದು ಒತ್ತಾಯಿಸಿದರು.
ಇದನ್ನೂ ಓದಿ : ಬಂಟರ ಸಂಘ “ಅತ್ಯುತ್ತಮ ಕಾರ್ಯಕರ್ತ ವಾರ್ಷಿಕ ಪ್ರಶಸ್ತಿ”ಗೆ ಮುಂಡಪ್ಪ ಪಯ್ಯಡೆ ಆಯ್ಕೆ
ಎಐಎಂಐಎಂ ಮುಖಂಡ ವಿಜಯ ಗುಂಟ್ರಾಳ ಮಾತನಾಡಿದರು. ಮುಖಂಡರಾದ ರಾಜೇಸಾಬ್ ದರ್ಗಾದ, ಸಾಕ್ ಬಾರೂದವಾದ, ನಜೀರ್ ಹೊನ್ನಾಳ, ರಾಕೇಶ ಬಸವರಾಜ, ಇಮ್ತಿಯಾಜ್ ಬಿಳಿಪಸಾರ, ಅಶ್ಪಾಕ್ ಚಾಕಾಪುರಿ, ಇರ್ಫಾನ್ ಜರದಿ, ಮಹ್ಮದ್ ಕಿತ್ತೂರು,ಸುಲೇಮಾನ್ ಸಿದ್ದಿಕಿ, ನಜೀರ್ ಕಿತ್ತೂರು, ತನ್ವೀರ್ ಬ್ಯಾಹಟ್ಟಿ, ಜಾವೇದ್ ಗೋರಿಸ ಸೇರಿದಂತೆ ಇನ್ನಿತರರಿದ್ದರು.