Advertisement

ಕಿತ್ತು ಹೋದ ಸಂಪಾಜೆ ರಸ್ತೆಯ ಕಾಂಕ್ರೀಟ್‌!

05:12 AM Jan 03, 2019 | |

ಅರಂತೋಡು: ಸಂಪಾಜೆ ಪ್ರಾಥಮಿಕ ಆರೋಗ್ಯ ಕೇಂದ್ರದ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ರೋಗಿಗಳು ಆಸ್ಪತ್ರೆಗೆ ತೆರಳಲು ನರಕಯಾತನೆ ಅನುಭವಿಸುತ್ತಿದ್ದಾರೆ. ಸಂಪಾಜೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕೆಲವು ವರ್ಷಗಳಿಂದ ವೈದ್ಯರು ಹಾಗೂ ಇತರ ಸಿಬಂದಿಯಿಲ್ಲದೆ ಈ ಭಾಗದ ರೋಗಿಗಳು ಸಮಸ್ಯೆ ಎದುರಿಸುತ್ತಿದ್ದರು. ಇದೀಗ ಖಾಸಗಿ ಸಂಸ್ಥೆಯೊಂದು ಆಸ್ಪತ್ರೆಯ ನಿರ್ವಹಣೆಯ ಜವಾಬ್ದಾರಿಯನ್ನು ವಹಿಸಿಕೊಂಡಿದ್ದು, ಸಿಬಂದಿ ಹುದ್ದೆಗಳನ್ನು ಭರ್ತಿ ಮಾಡಿದೆ ಎಂದು ವೈದ್ಯರು ತಿಳಿಸಿದ್ದಾರೆ.

Advertisement

ಆದರೆ ಆಸ್ಪತ್ರೆಗೆ ತೆರಳುವ ರಸ್ತೆ ತೀರಾ ಹದಗೆಟ್ಟಿದ್ದು, ಅಲ್ಲಲ್ಲಿ ಹೊಂಡ – ಗುಂಡಿಗಳಿಂದ ಕೂಡಿದೆ. ತುರ್ತು ಚಿಕಿತ್ಸೆಗೆ ವಾಹನದ ಮೂಲಕ ರೋಗಿಗಳನ್ನು ಸಾಗಾಟ ಮಾಡುವ ಸಂದರ್ಭ ವಾಹನಗಳು ಎತ್ತಿ ಹಾಕುತ್ತಿದ್ದು, ರೋಗಿಗಳು, ಗರ್ಭಿಣಿಯರು ಹಾಗೂ ಬಾಣಂತಿಯರು ಸಮಸ್ಯೆ ಎದುರಿಸುತ್ತಿದ್ದಾರೆ. ಈ ರಸ್ತೆ ಆಸ್ಪತ್ರೆಯ ಆವರಣದ ಒಳಗೆ ಇದ್ದು, ಜಾಗವೂ ಆಸ್ಪತ್ರೆಗೆ ಸೇರಿದೆ. ಕೇವಲ 100 ಮೀ. ರಸ್ತೆಯನ್ನು ಅಭಿವೃದ್ದಿ ಮಾಡಿದರೆ ಆಸ್ಪತ್ರೆಯ ಸಮಸ್ಯೆ ಪರಿಹಾರ ಕಾಣುತ್ತದೆ ಎಂದು ಸ್ಥಳೀಯರು ಹೇಳುತ್ತಾರೆ.

ಮುರಿದ ಕೌ ಗೇಟ್‌
ಆಸ್ಪತ್ರೆ ಆವರಣದ ಬಳಿಯ ಚರಂಡಿಗೆ ಅಳವಡಿಸಲಾದ ಕೌಗೇಟ್‌ ಮುರಿದಿದ್ದು, ಇದರ ಮೇಲೆ ವಾಹನಗಳು ಸಂಚಾರಿಸಬೇಕಾಗುತ್ತದೆ. ಇದು ಕೂಡ ಸಮಸ್ಯೆಗೆ ದಾರಿ ಮಾಡಿಕೊಡುತ್ತಿದೆ. ಈ ಕಾರಣದಿಂದ ಕೌಗೇಟನ್ನು ಬದಲಾಯಿಸಬೇಕು. ಇಲ್ಲವೇ ದುರಸ್ತಿ ಮಾಡಬೇಕೆಂಬುದು ಗ್ರಾಮದ ಜನರ ಬೇಡಿಕೆಯಾಗಿದೆ. ಮಾಣಿ – ಮೈಸೂರು ರಸ್ತೆಯಿಂದ ಆಸ್ಪತ್ರೆಗೆ ಸಂಪರ್ಕ ಕಲ್ಪಿಸುವ ಕಾಂಕ್ರೀಟ್‌ ರಸ್ತೆ ಕೆಲವೆಡೆ ಹೊಂಡ ಬಿದ್ದಿದೆ. ಈ ರಸ್ತೆಯನ್ನು ತ್ವರಿತವಾಗಿ ಅಭಿವೃದ್ಧಿಗೊಳಿಸುವ ಅಗತ್ಯವಿದೆ.

ಹೊಸ ಕಟ್ಟಡದಲ್ಲಿ ಕಾರ್ಯ
ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಸುಮಾರು 2.15 ಎಕ್ರೆ ಜಾಗ ಇದೆ. ಮೂರು ವರ್ಷಗಳಿಂದ ಹೊಸ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದೆ. ಕಟ್ಟಡ ಸುಸಜ್ಜಿಜಿತವಾಗಿದ್ದು, ಮೂಲ ಸೌಕರ್ಯಗಳಲ್ಲಿ ಒಂದಾದ ರಸ್ತೆ ಅಭಿವೃದ್ಧಿಗಾಗಿ ಕಾಯುತ್ತಿದೆ.

ಗ್ರಾ.ಪಂ.ಗೆ ಬರೆಯುತ್ತೇವೆ
ಆಸ್ಪತ್ರೆಯ ಆವರಣದ ಒಳಗೆ ರಸ್ತೆಯ ಕಾಂಕ್ರೀಟ್‌ ಕಿತ್ತು ಹೋಗಿದ್ದು, ವಾಹನ ಸಂಚಾರಕ್ಕೆ ಸಮಸ್ಯೆಯಾಗುತ್ತಿದೆ ಎನ್‌. ಆರ್‌.ಜಿ. ಯೋಜನೆಯಲ್ಲಿ ರಸ್ತೆಯ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲು ಸ್ಥಳೀಯ ಗ್ರಾಮ ಪಂಚಾಯತ್‌ಗೆ ಬರೆಯುತ್ತೇವೆ.
– ಡಾ| ರಾಜೇಶ್‌,
ಕೊಡಗು ಜಿಲ್ಲಾ ಆರೋಗ್ಯಾಧಿಕಾರಿ

Advertisement

ದುರಸ್ತಿ ಮಾಡಿ
ಆಸ್ಪತ್ರೆಗೆ ಹೋಗುವ ರಸ್ತೆಯ ಕಾಂಕ್ರೀಟ್‌ ಎದ್ದು ಹೋಗಿ ರೋಗಿಗಳಿಗೆ ಸಮಸ್ಯೆಯಾಗಿದೆ. ಈ ರಸ್ತೆಯನ್ನ ಸಂಬಂಧಪಟ್ಟವರು ತಕ್ಷಣ ದುರಸ್ತಿ ಮಾಡಬೇಕು.
 - ಪ್ರವೀಣ್‌,
ಸ್ಥಳೀಯರು

ಅಭಿವೃದ್ಧಿಗೆ ಗಮನ
ಈ ರಸ್ತೆಯನ್ನು ಅಭಿವೃದ್ಧಿಪಡಿಸಲು ನಾವು ಈಗಾಗಲೇ ಜಿಲ್ಲಾ ಪಂಚಾಯತ್‌ಗೆ ಹಲವು ಬಾರಿ ಬರೆದಿದ್ದೇವೆ. ರಸ್ತೆ ಅಭಿವೃದ್ಧಿ ಬಗ್ಗೆ ಗಮನ ಹರಿಸಲಾಗುವುದು.
– ಬಾಲಚಂದ್ರ ಕಳಗಿ,
ಮಾಜಿ ಅಧ್ಯಕ್ಷರು, ಕೊಡಗು ಸಂಪಾಜೆ ಗ್ರಾ.ಪಂ

ತೇಜೇಶ್ವರ್‌ ಕುಂದಲ್ಪಾಡಿ

Advertisement

Udayavani is now on Telegram. Click here to join our channel and stay updated with the latest news.

Next