ಶಿರಸಿ: ಹಲವರು ಅಭಿವೃದ್ಧಿ ಏನು ಮಾಡಿದ್ದಾರೆ ಎಂದೆಲ್ಲ ಕೇಳುತ್ತಾರೆ. ಇರುವ ಅಪರೂಪದ ಕಾಡು ಕಡಿದು ಕಾಂಕ್ರೀಟ್ ಕಾಡು ನಿರ್ಮಾಣ ಮಾಡುವುದು ಅಭಿವೃದ್ಧಿಯಲ್ಲ ಎಂದು ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಪ್ರತಿಪಾದಿಸಿದರು. ಅವರು ತಾಲೂಕಿನ ಹುಳಗೋಳದಲ್ಲಿ ನಡೆದ ಕಾರ್ಯಕರ್ತರ, ಪ್ರಮುಖರ ಸಭೆಯಲ್ಲಿ ಮಾತನಾಡಿದರು.
ರಸ್ತೆ, ಸೇತುವೆ, ಕಟ್ಟಡಗಳನ್ನು ಮಾತ್ರ ಅಭಿವೃದ್ಧಿ ಎನ್ನುತ್ತಾರೆ. ಇಂಥ ಅಭಿವೃದ್ಧಿಗಳಷ್ಟೇ ಅಭಿವೃದ್ಧಿಗಳಲ್ಲ. ಅಂಥವರಿಗೆ ನಾವು
ಹೇಳುವ ಮಾತುಗಳೂ ಅರ್ಥವಾಗುವುದಿಲ್ಲ. ದೇವರು ನಿರ್ಮಾಣ ಮಾಡಿದ ನೈಸರ್ಗಿಕ ಕಾಡು ಕಡಿದು ಕಾಂಕ್ರಿಟ್ ಕಾಡು ನಿರ್ಮಾಣ ಮಾಡುವುದು ಅಭಿವೃದ್ಧಿಯಲ್ಲ. ಇದೇ ಅಭಿವೃದ್ಧಿ ಎಂದರೆ ಅಂಥ ಮೂರ್ಖರೂ ಬೇರಿಲ್ಲ. ವ್ಯಕ್ತಿ ಯಾವತ್ತೂ ತನ್ನ ಆಂತರಿಕ ಶಕ್ತಿ ಬೆಳಸಿಕೊಳ್ಳಬೇಕು. ಈಗಿನ ಸ್ವರ್ಗ ಉಳಿಸಿ ಮುಂದಿನ ತಲೆ ಮಾರಿಗೂ ಕೊಡಬೇಕು ಎಂದರು.
ರಾಜಕಾರಣ ಎಂದರೆ ಕನಿಷ್ಠ ನೂರು ವರ್ಷಗಳ ಮುಂದಾಲೋಚನೆ ಇರಬೇಕು. ಇಲ್ಲವಾದಲ್ಲಿ ಅದೊಂದು ಡೊಂಬರಾಟ ಆಗುತ್ತದೆ. ಬರಗಾಲದಲ್ಲಿ ರಾಜ ಹಾಲಿನ ಅಭಿಷೇಕಕ್ಕೆ ಮುಂದಾದಂತೆ ಆಗಬಾರದು ಎಂದ ಅವರು, ಅಭಿವೃದ್ಧಿ ಎಂಬುದು ಜ್ಞಾನಾಧಾರಿತವಾಗಬೇಕು. ಒಬ್ಬ ಮನುಷ್ಯ ಒಂದೇ ಸಮಯದಲ್ಲಿ ಎರಡೂಮೂರು ಕೆಲಸಗಳು ಕರಾರುವಕ್ಕಾಗಿ ಮಾಡುವಂತಿರಬೇಕು. ಕ್ರಿಯೇಟಿವ್ ನಾಲೇಜ್ ಯುವಜನರ ಆಸಕ್ತಿಯಾಗಬೇಕು. ಜ್ಞಾನಾಧಾರಿತ ಆರ್ಥಿಕ ಅಭಿವೃದ್ಧಿ ಅನೇಕ ಏಳ್ಗೆಗೆ ಸಹಕಾರಿ ಆಗಲಿದೆ. ಕರಾವಳಿ, ಮಲೆನಾಡಿಗೆ ಅಭಿವೃದ್ಧಿ ಆಗಬೇಕು ಎಂದರು.
ಹುಬ್ಬಳ್ಳಿ, ಬೆಳಗಾವಿಯಲ್ಲಿ ವಿಮಾನ ಕಾರ್ಗೋ ಸೇವೆ ಆರಂಭವಾಗಲಿದೆ ಎಂದೂ ಹೇಳಿದ ಸಚಿವರು, ನಮ್ಮ ಉತ್ಪನ್ನಗಳು ಉತ್ಪಾದನಾ ಕ್ಷೇತ್ರದಿಂದ ಏಳೆಂಟು ತಾಸಿನಲ್ಲಿ ಗ್ರಾಹಕರ ಕಡಗೆ ಸೇರುವಂತೆ ಆಗಬೇಕು. ಇಂಥ ಅಭಿವೃದ್ಧಿ ಬಗ್ಗೆ ಯಾರೂ ಕೇಳುವುದಿಲ್ಲ, ಅನಂತಕುಮಾರ ಹೆಗಡೆ ಮುಂದಿನ ವಿವಾದ ಏನು ಕೇಳುತ್ತಾರೆ ಎಂದೂ ಟಾಂಗ್ ನೀಡಿದರು.
ಜಿ.ಎಂ. ಹೆಗಡೆ ಹುಳಗೋಳ, ಎನ್.ಎನ್. ಹೆಗಡೆ ಕಣ್ಣೀಮನೆ, ತಾಪಂ ಉಪಾಧ್ಯಕ್ಷ ಚಂದ್ರು ಎಸಳೆ, ಗ್ರಾಮೀಣ ಘಟಕದ ಅಧ್ಯಕ್ಷ ಆರ್.ವಿ. ಹೆಗಡೆ ಚಿಪಗಿ, ಅನಂತ ಭಟ್ಟ ಹುಳಗೋಳ, ಸುರೇಶ್ಚಂದ್ರ ಹೆಗಡೆ ಕೆಶಿನ್ಮನೆ, ಸವಿತಾ ಹೆಗಡೆ ಹುಳಗೋಳ, ಗಜಾನನ ಕಣ್ಣಿ ಇತರರು ಇದ್ದರು.
ರಾಹುಲ್‌ಗೆ ಯಾಕೆ ವೈನಾಡು?
ಶಿರಸಿ: ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಸ್ಪರ್ಧಿಸಲು ಯಾಕೆ ವೈನಾಡೇ ಆಗಬೇಕು? ಇದರ ಹಿಂದೆ ಬೇರೆ ಕಥೆಯೇ ಇದೆ ಎಂದು ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಪ್ರತಿಪಾದಿಸಿದ ಘಟನೆ ನಡೆಯಿತು. ಉತ್ತರ ಕನ್ನಡದ ಶಿರಸಿಯ ಹುಳಗೋಳದಲ್ಲಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಅವರು ವಾರಣಾಸಿಯಲ್ಲಿ ಸ್ಪರ್ಧಿಸುತ್ತಾರೆ. ರಾಹುಲ್ ಗಾಂಧಿ ಅವರು ವೈನಾಡನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಇವರಿಬ್ಬರೂ ರಾಜಕೀಯದ ಎರಡು ದ್ರುವಗಳೇ. ರಾಜಕೀಯವಾಗಿ ವೈನಾಡೇ ಆಯ್ಕೆ ಮಾಡಿಕೊಳ್ಳಲು ಕಾರಣ ಹಾಗೂ ಸಂದೇಶ ಕೂಡ ಇದೆ. ಅವರು ಯಾಕೆ ವೈನಾಡು ಬಿಟ್ಟು ಉತ್ತರ ಕನ್ನಡ, ಕಾಂಗ್ರೆಸ್‌ನ ಬಲಿಷ್ಠ ರಾಜ್ಯ ಎನ್ನುವ ಕರ್ನಾಟಕದಲ್ಲಿ ಎಲ್ಲೂ ನಿಲುವುದಿಲ್ಲ ಏಕೆ ಎಂದೂ ಕೇಳಿದರು. ವೈನಾಡಿನಲಿ ಶೇ.52ರಷ್ಟು ಮುಸ್ಲಿಂಮರು, ಶೇ24ರಷ್ಟು ಕ್ರೀಶ್ಚಿಯನ್ನರೂ ಇದ್ದಾರೆ ಎಂದೂ ಹೇಳಿದರು. ದೇಶ ಬದುಕಿದರೆ ಮಾತ್ರ ನಾವೂ ಬದುಕುತ್ತೇವೆ ಎಂದೂ ಹೇಳಿದರು.
ಸಂತೆ ಮಾರುಕಟ್ಟೆಯಲ್ಲಿ ಬಿಜೆಪಿ ಪ್ರಚಾರ
ಭಟ್ಕಳ: ಲೋಕಸಭಾ ಚುನಾವಣೆ ಹಿನ್ನೆಲೆ ತಾಲೂಕು ಬಿಜೆಪಿ ಮಂಡಲದ ವತಿಯಿಂದ ಸಂತೆ ಮಾರುಕಟ್ಟೆಯಲ್ಲಿ ಮಂಡಲಾಧ್ಯಕ್ಷ ರಾಜೇಶ ನಾಯ್ಕರ ನೇತೃತ್ವದಲ್ಲಿ ನೂರಾರು ಕಾರ್ಯಕರ್ತರು ಬಹಿರಂಗ ಪ್ರಚಾರ ನಡೆಸಿದರು. ಭಟ್ಕಳ ಸಂತೆ ಮಾರುಕಟ್ಟೆಯಲ್ಲಿ ಹೆಚ್ಚಾಗಿ ರೈತರು, ರೈತ ಮಹಿಳೆಯರು, ವ್ಯಾಪಾರಿಗಳು ಆಗಮಿಸುತ್ತಿರುವುದರಿಂದ ಅದನ್ನು ಪ್ರಚಾರಕ್ಕಾಗಿ ಆರಿಸಿಕೊಂಡಿದ್ದು ಕೆನರಾ ಕ್ಷೇತ್ರದ ಅಭ್ಯರ್ಥಿ ಅನಂತಕುಮಾರ್ ಹೆಗಡೆ ಅವರಿಗೆ ಮತ ಚಲಾಯಿಸುವಂತೆ ಅವರ ಸಾಧನೆಯ ಬಗ್ಗೆ ಹಾಗೂ ಇತ್ತೀಚೆಗಷ್ಟೆ ಬಿಡುಗಡೆಗೊಳಿಸಿದ ಉತ್ತರ ಕನ್ನಡ ಜಿಲ್ಲಾ ಬಿಜೆಪಿ ಪ್ರಣಾಳಿಕೆ ಬಿಡುಗಡೆಗೊಳಿಸಲಾಯಿತು.
ದೇಶದಲ್ಲಿ ಕಳೆದ ಐದು ವರ್ಷಗಳಲ್ಲಿ ಆಗುರುವ ಅಭಿವೃದ್ಧಿ, ದೇಶದ ಆರ್ಥಿಕ ಪರಿಸ್ಥಿತಿ ಸುಧಾರಿಸಲು ಕೇಂದ್ರ ಸರಕಾರ ತೆಗೆದುಕೊಂಡ ಕ್ರಮ, ಮುಂದೆ ದೇಶವನ್ನು ಪ್ರಧಾನಿ ನರೇಂದ್ರ ಮೋದಿಯವರೇ ಮುನ್ನಡೆಸಬೇಕು ಎನ್ನುವುದಕ್ಕೆ ಕಾರಣಗಳನ್ನು ಸಹ ಮತದಾರರಿಗೆ ನೀಡಿ ಏ.23 ರಂದು ನಡೆಯಲಿರುವ ಚುನಾವಣೆಯಲ್ಲಿ ಬಿಜೆಪಿಗೆ ಮತ ಹಾಕುವಂತೆ
ಕೋರಿದರು.
ಬಿಜೆಪಿ ಮಹಿಳಾ ಘಟಕದ ಪ್ರಮುಖರಾದ ಶಿವಾನಿ ಶಾಂತಾರಾಮ, ಮಂಡಳದ ಪ್ರಮುಖರಾದ ಹನುಮಂತ ನಾಯ್ಕ, ಮಹೇಂದ್ರ ನಾಯ್ಕ, ಕೆ.ಕೆ. ಮೋಹನ, ದೀಪಕ ನಾಯ್ಕ, ಪ್ರಮೋದ ಜೋಶಿ, ರವಿ ನಾಯ್ಕ ಜಾಲಿ, ಸಚಿನ್ ಮಹಾಲೆ, ವಿನಾಯಕ ಆಚಾರ್ಯ, ಮಣಿ ಪೂಜಾರಿ, ಆನಂದ ಬಾಳಿ ಮುಂತಾದವರಿದ್ದರು.
ಬಿಜೆಪಿ ಪ್ರಣಾಳಿಕೆ ಬಂದರುಗಳ ಅಭಿವೃದ್ಧಿಗೆ ಪೂರಕ
ಕಾರವಾರ: ರಾಷ್ಟ್ರ ಮಟ್ಟದಲ್ಲಿ ಬಿಜೆಪಿ ಬಿಡುಗಡೆ ಮಾಡಿರುವ ಪ್ರಣಾಳಿಕೆಯ ಕೆಲ ಅಂಶಗಳು ಜಿಲ್ಲೆಯ ಕರಾವಳಿ ಭಾಗದ ಅಭಿವೃದ್ಧಿಗೆ ಪೂರಕವಾಗಿದ್ದು, ಇಲ್ಲಿನ ಬಂದರುಗಳ ಅಭಿವೃದ್ಧಿಗೆ ಮಹತ್ವ ಸಿಕ್ಕಿದೆ ಎಂದು ಬಿಜೆಪಿ ಮಾಧ್ಯಮ ಸಂಚಾಲಕ ವಕೀಲ ನಾಗರಾಜ ನಾಯಕ ಹೇಳಿದರು. ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ನವದೆಹಲಿಯಲ್ಲಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಪಕ್ಷದ ಪ್ರಣಾಳಿಕೆ ಬಿಡುಗಡೆ ಮಾಡಿದ್ದಾರೆ. ಗೃಹಸಚಿವ ರಾಜನಾಥ್ ಸಿಂಗ್ ನೇತೃತ್ವದ ಪ್ರಣಾಳಿಕೆ ತಯಾರಿಕಾ ಸಮಿತಿ ಕಾಟಾಚಾರಕ್ಕೆ ಪ್ರಣಾಳಿಕೆ ತಯಾರಿಸಿಲ್ಲ.
ದೇಶಾದ್ಯಂತ ಸುಮಾರು 6 ಕೋಟಿಗೂ ಹೆಚ್ಚಿನ ಜನಾಭಿಪ್ರಾಯ ಸಂಗ್ರಹಿಸಿ ಪ್ರಣಾಳಿಕೆ ಸಿದ್ಧಪಡಿಸಲಾಗಿದೆ. ದೇಶವು 75ನೇ ವರ್ಷದತ್ತ ಪಾದಾರ್ಪಣೆ ಮಾಡುತ್ತಿರುವ ಕಾಲಘಟ್ಟದಲ್ಲಿ 75 ಪ್ರಮುಖ ಅಭಿವೃದ್ಧಿ ಅಂಶಗಳಿಗೆ ಪ್ರಣಾಳಿಕೆಯಲ್ಲಿ ಹೆಚ್ಚಿನ ಆದ್ಯತೆ ನೀಡಲಾಗಿದೆ ಎಂದರು.
ಪ್ರಣಾಳಿಕೆಯಲ್ಲಿ ರಾಷ್ಟ್ರದ ಸುರಕ್ಷತೆಗೆ ಮೊದಲ ಆದ್ಯತೆ ನೀಡಲಾಗಿದೆ. ಜಲ ಸಮಸ್ಯೆ ನಿವಾರಣೆಗೆ ಜಲ ಆಯೋಗ ರಚನೆ, 2020ರ ಒಳಗೆ ಎಲ್ಲ ರೈಲ್ವೆ ಟ್ರ್ಯಾಕ್‌ಗಳಿಗೆ ವಿದ್ಯುತ್ತೀಕರಣ, ಗಂಗಾ ಶುದ್ಧೀಕರಣಕ್ಕೆ ಕಾಲಮಿತಿ ಯೋಜನೆ ಅಲ್ಲದೇ 2022ರ ಒಳಗೆ ದೇಶದ ಜನರ ಬಡತನ ನಿರ್ಮೂಲನೆಗೆ ಗುರಿ ನಿಗದಿಪಡಿಸಲಾಗಿದೆ. ರೈತರಿಗೆ ಕ್ರೆಡಿಟ್ ಕಾರ್ಡ್ ಮೂಲಕ 1 ಲಕ್ಷ ರೂ. ಸಾಲದ ಜತೆಗೆ ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ 1 ಲಕ್ಷ ರೂ. ತನಕ ಸಾಲ ಯೋಜನೆ ಪ್ರಣಾಳಿಕೆಯ ಪ್ರಮುಖಾಂಶಗಳಾಗಿವೆ ಎಂದರು.
ಜಿಲ್ಲೆಯ ಎಲ್ಲ ವರ್ಗದ ರೈತರಿಗೆ 6000 ರೂ.ನ ಕಿಸಾನ್ ಸಮ್ಮಾನ್ ನಿಧಿ ಅನ್ವಯವಾಗಲಿದೆ. ಕಳೆದ ಬಜೆಟ್‌ನಲ್ಲಿ ಘೋಷಿಸಿದಂತೆ, ಪ್ರತ್ಯೇಕ ಮೀನುಗಾರಿಕೆ ಸಚಿವಾಲಯ ಸ್ಥಾಪಿಸುವುದರ ಕುರಿತು ಕರಾವಳಿ ಮೀನುಗಾರರ ಬಹು ದಿನಗಳ ಬೇಡಿಕೆ ಈಡೇರಿಕೆಗೆ ಕ್ರಮ ಕೈಗೊಳ್ಳಲಾಗುತ್ತದೆ. ಸಾಗರಮಾಲಾ ಯೋಜನೆಯಡಿ ಬಂದರುಗಳ ಅಭಿವೃದ್ಧಿಗೆ ಪ್ರಣಾಳಿಕೆಯಲ್ಲಿ ಹೆಚ್ಚಿನ ಒತ್ತು ನೀಡಲಾಗಿದೆ. ಇದರಿಂದ ಜಿಲ್ಲೆಯ ಬಂದರುಗಳ ಅಭಿವೃದ್ಧಿಗೆ ಉತ್ತೇಜನ ಸಿಗಲಿದೆ. ಅಲ್ಲದೇ ಚಿಕ್ಕ ಹಿಡುವಳಿದಾರ 60 ವರ್ಷ ದಾಟಿದ ಎಲ್ಲ ರೈತರಿಗೆ ಪಿಂಚಣಿ ಯೋಜನೆಗಳು, ಗ್ರಾಮೀಣ ವಿಕಾಸಕ್ಕೆ 50 ಸಾವಿರ ಕೋಟಿ ರೂ. ಮೀಸಲಿಡಲು ಪ್ರಣಾಳಿಕೆಯಲ್ಲಿ ಒತ್ತು ನೀಡಲಾಗಿದ್ದು, ಗ್ರಾಮೀಣ ಜನರು ನಗರಕ್ಕೆ ವಲಸೆ ಹೋಗುವುದನ್ನು ತಪ್ಪಿಸಲು ಇದರಿಂದ ಅನುಕೂಲವಾಗಲಿದೆ ಎಂದು ತಿಳಿಸಿದರು.
ನಯನಾ ನೀಲಾವರ, ಸುಜಾತಾ ಬಾಂದೇಕರ, ಗ್ರಾಮೀಣ ಅಧ್ಯಕ್ಷ ಮಾರುತಿ ನಾಯ್ಕ, ಸಾಮಾಜಿಕ ಜಾಲತಾಣ ಸಂಚಾಲಕ ಕಿಷನ್ ಕಾಂಬಳೆ, ಸಂದೇಶ ಶೆಟ್ಟಿ, ಸತೀಶ ಅಮದಳ್ಳಿ ಇದ್ದರು.