Advertisement

ಕಾಂಕ್ರೀಟ್‌ ನಗರಿಯ ಕಲ್ಲಿನ ಕೋಟೆ

04:43 PM Oct 14, 2017 | |

ಬೆಂಗಳೂರು ಅಂದಾಕ್ಷಣ ಮಾಗಡಿ ಕೆಂಪೇಗೌಡರು ನೆನಪಾಗುತ್ತಾರೆ. ಮೊದಲು ಬೆಂದಕಾಳೂರು ಎಂಬ ಹೆಸರು ಹೊಂದಿದ್ದು, ಆನಂತರದಲ್ಲಿ “ಬೆಂಗಳೂರು’ ಎಂದು ಬದಲಾದ ಈ ಮಹಾನಗರದ ನಿರ್ಮಾತೃ ಕೆಂಪೇಗೌಡರು ಎಂಬ ಸಂಗತಿ ಎಲ್ಲರಿಗೂ ಗೊತ್ತಿದೆ. ಆದರೆ, ಮಾಗಡಿ ಕೆಂಪೇಗೌಡರಿಂದ ಆರಂಭಿಸಿ ಮೊಘಲರು, ಮರಾಠರು, ಹೈದರಾಲಿ, ಟಿಪ್ಪುಸುಲ್ತಾನ್‌, ಮೈಸೂರಿನ ಅರಸರು, ಬ್ರಿಟಿಷರು… ಹೀಗೆ ಹಲವರ ಆಡಳಿತಕ್ಕೆ ಸಾಕ್ಷಿಯಾದ ಬೆಂಗಳೂರಿನ ಕೋಟೆಯ ಬಗ್ಗೆ ಹೆಚ್ಚಿನವರಿಗೆ ತಿಳಿದೇ ಇಲ್ಲ. 

Advertisement

ಕೆಂಪೇಗೌಡರು ಬೆಂಗಳೂರು ನಿರ್ಮಿಸಿದ್ದು 1537ರಲ್ಲಿ. ಆ ಸಂದರ್ಭದಲ್ಲಿ ಹೊಸ ಊರಿನ ಗಡಿಗಳನ್ನು ಗುರುತಿಸಲು, ಅವತ್ತಿನ ಕಾಲಕ್ಕೆ ಇಡೀ ಊರಿಗೆ ಹೃದಯಭಾಗದಂತಿದ್ದ ಈಗಿನ ಚಿಕ್ಕಪೇಟೆ ಸರ್ಕಲ್‌ನಲ್ಲಿ, ನಾಲ್ಕು ನೇಗಿಲುಗಳಿಗೆ ಎತ್ತುಗಳನ್ನು ಕಟ್ಟಿ ಅವುಗಳನ್ನು ನಾಲ್ಕು ದಿಕ್ಕಿಗೆ ಓಡಿಸಿದರಂತೆ. ಆ ಎತ್ತುಗಳು ಎಲ್ಲಿ ನಿಲ್ಲುತ್ತವೆಯೋ ಅಲ್ಲಿ ಕೋಟೆಯ ಗಡಿ ನಿರ್ಮಿಸಬೇಕು ಎಂಬುದು ಆಗಿನ ನಿರ್ಧಾರವಾಗಿತ್ತು. ಹೀಗೆ ಓಡಿದ ಎತ್ತುಗಳು ಧರ್ಮಾಂಬುಧಿ ಕೆರೆ (ಈಗಿನ ಮೆಜೆಸ್ಟಿಕ್‌), ಹಲಸೂರು ಗೇಟ್‌ ಪೊಲೀಸ್‌ ಸ್ಟೇಶನ್‌, ಚಾಮರಾಜಪೇಟೆ ಹಾಗೂ ಬಿನ್ನಿ ಮಿಲ್‌ ಬಳಿ ನಿಂತುಕೊಂಡವಂತೆ. ಈ ಜಾಗದಲ್ಲಿ ಕೋಟೆಯ ನಿರ್ಮಾಣವಾಗಿತ್ತು. ಅದು ಒಂದು ಸರ್ಕಲ್‌ನಂತೆ ಬೆಂಗಳೂರನ್ನು ಸುತ್ತುವರಿದಿತ್ತು ಎಂಬುದು ಇತಿಹಾಸತಜ್ಞರ ಮಾತು.

ಕೆಂಪೇಗೌಡರ ನಂತರದಲ್ಲಿ ಮೊಘಲರು, ಮರಾಠರು, ಮೈಸೂರು ಒಡೆಯರು, ಹೈದರ್‌ ಮತ್ತು ಟಿಪ್ಪುವಿನ ಕಾಲದಲ್ಲಿ ಕೋಟೆಯ ನಿರ್ಮಾಣ ರೂಪಾಂತರಗೊಂಡು ಮತ್ತಷ್ಟು ಅಭಿವೃದ್ಧಿ ಹೊಂದಿದೆ. ಆನಂತರದಲ್ಲಿ “ಅಭಿವೃದ್ಧಿ’ಯೆಂಬ ಗಾಳಕ್ಕೆ ಸಿಕ್ಕಿಕೊಂಡು ಬೆಂಗಳೂರು ಕೋಟೆಯ ಒಂದೊಂದೇ ಭಾಗ ಕಣ್ಮರೆಯಾಗಿದೆ. ಈಗ ಕೆ.ಆರ್‌. ಮಾರ್ಕೆಟ್‌ನ ವಿಕ್ಟೋರಿಯಾ ಆಸ್ಪತ್ರೆಗೆ ಅಂಟಿಕೊಂಡಂತೆಯೇ ಇರುವ ಕೋಟೆಯ ಉಳಿದಿರುವ ಭಾಗವೇ, ಬೆಂಗಳೂರಲ್ಲೂ ಹಿಂದೆ ಕೋಟೆಯಿತ್ತು ಎಂಬ ಮಾತಿಗೆ ಸಾಕ್ಷಿಯಾಗಿ ಉಳಿದಿರುವ ಕುರುಹು. 

ಈಗ ವಿಕ್ಟೋರಿಯಾ ಆಸ್ಪತ್ರೆಯಿಂದ ಸ್ವಲ್ಪ ದೂರವಷ್ಟೇ ಉಳಿದುಕೊಂಡಿರುವ ಕೋಟೆಯಲ್ಲಿ ವಿಜಯನಗರದ ಕಾಲದ ನಾಲ್ಕಾರು ಕೆತ್ತನೆಗಳಿವೆ. ಕೋಟೆಯೊಳಗೆ ಗಣೇಶನ ದೇವಸ್ಥಾನವೂ ಇದೆ. ಬೆಂಗಳೂರು ಕೋಟೆಯ ಗಟ್ಟಿತನ ಮತ್ತು ವೈಭವದ ಬಗ್ಗೆ ಬ್ರಿಟಿಷ್‌ ಲೈಬ್ರರಿಯ ಆನ್‌ಲೈನ್‌ ಆವೃತ್ತಿಯಲ್ಲಿ ಚಿತ್ರ ಮತ್ತು ವಿವರಣೆಗಳಿವೆ. ಅವಶೇಷದಂತೆ, ಹಳೆಯ ವೈಭವದ ಕುರುಹಿನಂತೆ ಉಳಿದಿರುವ ಕೋಟೆಯನ್ನು ನೋಡಲು ಇಂಗ್ಲೆಂಡ್‌, ಫ್ರಾನ್ಸ್‌ನಿಂದ ಪ್ರವಾಸಿಗರು ಬರುತ್ತಾರೆ. ಕೇವಲ ಮಣ್ಣು ಹಾಗೂ ಸುಣ್ಣದ ಮಿಶ್ರಣದಿಂದ ನಿರ್ಮಾಣವಾಗಿರುವ, ಮುನ್ನೂರು ವರ್ಷಗಳ ನಂತರವೂ ಗಟ್ಟಿಮುಟ್ಟಾಗಿರುವ ಕೋಟೆಯನ್ನು ಕಂಡು ಬೆರಗಾಗಿದ್ದಾರೆ. ಆದರೆ, ವಿದೇಶಿ ಪ್ರವಾಸಿಗರ ಪಾಲಿಗೆ ಪ್ರಮುಖ ಆಕರ್ಷಣೆಯಾಗಿರುವ ಕೋಟೆ, ಬೆಂಗಳೂರಿಗರ ಪಾಲಿಗೆ ಆಟದ ಸಾಮಾನು ಹಾಗೂ ತರಕಾರಿ ಖರೀದಿಸುವ ಸ್ಥಳವಷ್ಟೇ ಆಗಿರುವುದು ವಿಪರ್ಯಾಸ.

ಮ್ಯೂಸಿಯಂ ಮಾಡಬಹುದಿತ್ತು
ಪುರಾತತ್ವ ಇಲಾಖೆ, ಪ್ರವಾಸೋದ್ಯಮ ಇಲಾಖೆ, ಮೇಯರ್‌ ಹಾಗೂ ಕಾರ್ಪೋರೇಟರ್‌ಗಳು ಸ್ವಲ್ಪ ಆಸಕ್ತಿ ತೋರಿಸಿದ್ದರೆ, ಬೆಂಗಳೂರಿನ ಇತಿಹಾಸ ಹೇಳುವ ಕೋಟೆ ಇರುವ ಸ್ಥಳದಲ್ಲಿ ಒಂದು ಮ್ಯೂಸಿಯಂ ಮಾಡಬಹುದಿತ್ತು. ಕೋಟೆಗೆ ಸಮೀಪದಲ್ಲಿಯೇ ಟಿಪ್ಪು ಸುಲ್ತಾನನ ಬೇಸಿಗೆ ಅರಮನೆ, ವೆಂಕಟರಮಣ ಸ್ವಾಮಿ ದೇವಸ್ಥಾನವೂ ಇರುವುದರಿಂದ ಇದನ್ನು ಪ್ರೇಕ್ಷಣೀಯ ಸ್ಥಳವೆಂದೂ ಘೋಷಿಸಿ ಪ್ರವಾಸಿಗರ ಆಕರ್ಷಣೆಯ ತಾಣವಾಗಿಯೂ ರೂಪಿಸಬಹುದಿತ್ತು. ಆ ಮೂಲಕ, ಕೋಟೆಯೂ ಸೇರಿದಂತೆ ಹತ್ತಾರು ಐತಿಹಾಸಿಕ ಸ್ಮಾರಕಗಳನ್ನೂ ಸಂರಕ್ಷಿಸಬಹುದಿತ್ತು. ಆದರೆ, ಅಂಥ ಕೆಲಸ ಈವರೆಗೂ ಆಗಿಲ್ಲ…

Advertisement

ಸಿಟಿ ಆಫ್ ಲೇಕ್ಸ್‌ ಅಂದಿದ್ದನಂತೆ!
ಬೆಂಗಳೂರು ಕೋಟೆಯೊಂದಿಗೇ ತಳಕು ಹಾಕಿಕೊಂಡಂತಿದ್ದ ದೇವಾಲಯಗಳ ಕುರಿತು ಅಚ್ಚರಿ ಮತ್ತು ಅಲ್ಲಿನ ಪ್ರಕೃತಿ ಸೌಂದರ್ಯ ಬ್ರಿಟಿಷರನ್ನೂ ಬಹುವಾಗಿ ಆಕರ್ಷಿಸಿತ್ತಂತೆ. ಈ ಮಾತಿಗೆ ಸಾಕ್ಷಿ ಅನ್ನುವಂತೆ, ಬ್ರಿಟಿಷರ ಕಾಲದಲ್ಲಿ ರಚನೆಯಾದ ನಂದಿಬೆಟ್ಟ, ಬೆಂಗಳೂರು ಕೋಟೆ, ಕುಣಿಗಲ್‌ ಕೆರೆ, ಗವಿ ಗಂಗಾಧರೇಶ್ವರ, ಹಲಸೂರಿನ ಸೋಮೇಶ್ವರ, ಮಾಗಡಿ ಸೋಮೇಶ್ವರ, ಶ್ರೀರಂಗಪಟ್ಟಣ ಹಾಗೂ ಮೈಸೂರಿಗೆ ಸಂಬಂಧಿಸಿದ ಹಲವು ಕಲಾಕೃತಿಗಳು ಬ್ರಿಟಿಷ್‌ ಲೈಬ್ರರಿಯಲ್ಲಿ ಲಭ್ಯವಿವೆ. ಮೂರನೇ ಮೈಸೂರು ಯುದ್ಧದ ಸಂದರ್ಭದಲ್ಲಿ ವೈಸ್‌ರಾಯ್‌ ಆಗಿದ್ದವನು ಲಾರ್ಡ್‌ ಕಾರ್ನ್ ವಾಲಿಸ್‌. ಬೆಂಗಳೂರಿನ ಉದ್ದಕ್ಕೂ ಇದ್ದ ಕೆರೆಗಳನ್ನು ಕಂಡು  ಆತ- This is the city of lakes ಎಂದು ಉದ್ಗರಿಸಿದ್ದನಂತೆ. 
– ವಾಸುದೇವ

Advertisement

Udayavani is now on Telegram. Click here to join our channel and stay updated with the latest news.

Next