Advertisement
ನೋಡಲು ಗಟ್ಟಿಮುಟ್ಟಾಗಿರುವ ಕಾಂಕ್ರಿಟ್ ಕಟ್ಟಡಗಳಲ್ಲೂ ಕೂಡ ಕೆಲವೊಮ್ಮೆ ಬಿರುಕು ಬಿಟ್ಟುಕೊಳ್ಳುವುದು, ಬಾಗುವುದು, ಸೋರುವುದು ಆಗುತ್ತದೆ. ಸಾಕಷ್ಟು ಸಿಮೆಂಟ್ ಸುರಿದಂತೆ ಕಾಣುತ್ತದೆ. ಮರಳ ಗುಣಮಟ್ಟದ ಬಗ್ಗೆಯೂ ಏನೂ ಕಡಿಮೆ ಮಾಡಿಲ್ಲ. ಆದರೂ ಕಾಂಕ್ರಿಟ್ ಸೋತದ್ದು ಎಲ್ಲಿ? ಎಂಬ ಪ್ರಶ್ನೆ ಹಲವರದ್ದಾಗಿರುತ್ತದೆ. ಇದಕ್ಕೆ ಉತ್ತರ ಕ್ಯೂರಿಂಗ್. ಅದು ಸರಿಯಾಗಿ ಆಗದೇ ಇದ್ದರೆ ಹೀಗೆಲ್ಲಾ ಆಗುತ್ತಿರುತ್ತದೆ. ಹಾಗಾಗಿ, ಮನೆ ಕಟ್ಟುವಿಕೆಯಲ್ಲಿ ನಾವು “ಇದೇನು? ಬರೀ ನೀರು ಸುರಿಯುವುದಕ್ಕೆ ಇಷ್ಟೊಂದು ಪ್ರಾಮುಖ್ಯತೆ ಏಕೆ’ ಎಂದು ಹೇಳುವಂತಿಲ್ಲ. ನಮಗೆಲ್ಲ ಅನ್ನಾಹಾರದ ಜೊತೆಗೆ ನೀರು ಹೇಗೆ ಮುಖ್ಯವೋ ಅದೇ ರೀತಿಯಲ್ಲಿ ಕಟ್ಟಡಗಳಿಗೂ ನೀರುಣಿಸುವುದು ಮುಖ್ಯ.
Related Articles
Advertisement
ನೀರು ಹೆಚ್ಚಾ ಬೇಡ!ಸಿಮೆಂಟ್ ಗಟ್ಟಿಗೊಳ್ಳಲು ನೀರು ಮುಖ್ಯ ಎಂದು ಸಿಕ್ಕಾಪಟ್ಟೆ ಸುರಿಯುವಂತೆಯೂ ಇಲ್ಲ. ನಿರ್ದಿಷ್ಟ ಕಾರ್ಯಕ್ಕೆ, ನಿರ್ದಿಷ್ಟ ಗಟ್ಟಿತನ ಪಡೆಯಲು ಇಂತಿಷ್ಟೇ ನೀರು ಎಂದಿರುತ್ತದೆ. ನೀರು ಹಾಕಿದಷ್ಟೂ ಸಿಮೆಂಟ್ ಕಾಂಕ್ರಿಟ್‌ನ ಸರಿದಾಡುವ ಗುಣದಿಂದ ಅದರ ಮೂಲ ವಸ್ತುಗಳಾದ ಜೆಲ್ಲಿಕಲ್ಲು, ಮರಳು ಬೇರ್ಪಡುವ ಸಾಧ್ಯತೆ ಹೆಚ್ಚಿರುತ್ತದೆ. ಹಾಗಾಗಿ, ನಾವು ನಮ್ಮ ಕೆಲಸಕ್ಕೆ ಎಷ್ಟು ಬೇಕೋ ಅಷ್ಟು ಮಾತ್ರ ನೀರನ್ನು ಸಿಮೆಂಟ್ ಕಾಂಕ್ರಿಟಿಗೆ ಹಾಕಬೇಕು . ನೀರನ್ನು ಹೆಚ್ಚು ಸುರಿದರೂ ಕಾಂಕ್ರಿಟ್ ದುರ್ಬಲಗೊಳ್ಳುವ ಸಾಧ್ಯತೆ ಇರುತ್ತದೆ. ಕೆಲವೊಮ್ಮೆ ನೋಡಲು ಕಡಿಮೆ ನೀರು ಹಾಕಿದಂತೆ ತೋರಿದರೂ ಒಮ್ಮೆ ವೈಬ್ರೇಟರ್ ಯಂತ್ರದಿಂದ ಅದುರಿಸಿದರೆ, ಕಾಂಕ್ರಿಟಿನ ಒಳಗಿದ್ದ ನೀರೆಲ್ಲ ಮೇಲೆ ಬಂದು ಸಾಕಷ್ಟು ನೀರು ಹಾಕಿರುವುದು ಕಂಡುಬರುತ್ತದೆ. ಈ ಕಾರಣದಿಂದಾಗಿಯೇ ನುರಿತ ಮೇಸಿŒಗಳು ಕಾಂಕ್ರಿಟ್ ಅನ್ನು ಒಂದು ಹಿಡಿಯಲ್ಲಿ ಅದುಮಿ, ನೀರು ಬೆರಳ ಸಂದಿಗಳಲ್ಲಿ ಜಿನುಗುತ್ತಿದೆಯೇ? ಎಂದು ಪರಿಶೀಲಿಸಿ ನೀರಿನ ಪ್ರಮಾಣವನ್ನು ನಿರ್ಧರಿಸುತ್ತಾರೆ! ಕ್ಯೂರಿಂಗ್ ನೀರು ಎಲ್ಲಿ ಹೋಗುತ್ತದೆ?
ಕಾಂಕ್ರಿಟ್ ಸಂಪೂರ್ಣವಾಗಿ ಗಟ್ಟಿಗೊಂಡನಂತರ ಒಂದಷ್ಟು ನೀರು ಮಾತ್ರ ಅದರಲ್ಲಿ ಉಳಿಯುತ್ತಾದರೂ, ಅದರ ಗಟ್ಟಿಗೊಳ್ಳುವ ರಸಾಯನಿಕೆ ಕ್ರಿಯೆಗೆ ಸಾಕಷ್ಟು ನೀರು ಬೇಕಾಗುತ್ತದೆ. ಜೊತೆಗೆ ಒಂದಷ್ಟು ನೀರು ಸೆಂಟ್ರಿಂಗ್ ಸಂದಿಗಳಿಂದ ಹರಿದು ಹೋಗುತ್ತದೆ ಇಲ್ಲವೆ ಗಾಳಿಗೆ ಆವಿಯಾಗಿ ಹೋಗುತ್ತದೆ. ನಾವು ಚಳಿಗಾಲ, ನೀರೆಲ್ಲಿ ಆವಿಯಾಗುತ್ತದೆ? ಎಂದು ನಿರ್ಲಕ್ಷ್ಯ ಮಾಡುವಂತಿಲ್ಲ. ಈ ಅವಧಿಯಲ್ಲಿ ಗಾಳಿಯಲ್ಲಿ ತೇವಾಂಶ ಕಡಿಮೆ ಇದ್ದು, ಕಾಂಕ್ರಿಟ್ ಬೇಗನೆ ಒಣಗಿ ಹೋಗುತ್ತದೆ. ಇನ್ನು ಬೇಸಿಗೆ ಕಾಲದಲ್ಲಂತೂ ನೀರನ್ನು ಉಣಿಸುವುದೇ ಒಂದು ದೊಡ್ಡ ಕೆಲಸ ಆಗಿಬಿಡುತ್ತದೆ. ಈ ಅವಧಿಯಲ್ಲಿ ಗಾಳಿಯೂ ಜೋರಾಗಿ ಬೀಸುವುದರಿಂದ, ನೀರು ಬೇಗನೆ ಆವಿಯಾಗುತ್ತದೆ. ನೀರಿಗೆ ಸ್ವಾಭಾವಿಕವಾಗೇ ಕೆಳಗೆ ಹರಿಯುವ ಗುಣ ಇರುವುದರಿಂದ, ಒಂದಷ್ಟು ನೀರು ಕೆಳಗೂ ಸೋರಿಹೋಗಬಹುದು. ಅಕ್ಕಪಕ್ಕ ಅಚ್ಚಿನಂತೆ ಬಳಸಲಾಗಿರುವ ಮರಮುಟ್ಟುಗಳೂ ಕೂಡ ಒಂದಷ್ಟು ನೀರನ್ನು ಹೀರಿಕೊಂಡು ಬಿಡುತ್ತವೆ. ನಾವು ಈ ಎಲ್ಲ ಅಂಶವನ್ನು ಗಮನದಲ್ಲಿಟ್ಟುಕೊಂಡು ಕಾಂಕ್ರಿಟಿಗೆ ನೀರು ಉಣಿಸಬೇಕಾಗುತ್ತದೆ. ಕ್ಯೂರಿಂಗ್ ವಿಧಾನಗಳು
ಹಲಗೆಯಂತೆ ಸೂರಿನ ಕಾಂಕ್ರಿಟಿಗೆ ಚಿಕ್ಕಚಿಕ್ಕ ಕಟ್ಟೆಗಳನ್ನು ಕಟ್ಟಿ ನೀರು ನಿಲ್ಲಿಸಿ, ಉಣಿಸುವುದು ಹೆಚ್ಚು ಪ್ರಚಲಿತದಲ್ಲಿದೆ. ನೀರು ಸಾಮಾನ್ಯವಾಗಿ ಒಂದು ದಿನಕ್ಕೆ ಒಂದು ಎಮ್‌ಎಮ್ ನಷ್ಟು ಆವಿಯಾಗಿ ಹೋಗುತ್ತದೆ. ಅಂದರೆ, ನೀವು ಇಪ್ಪತ್ತು ದಿನ ಕ್ಯೂರ್ ಮಾಡಬೇಕೆಂದಿದ್ದರೆ ಕಡೇಪಕ್ಷ ಇಪ್ಪತ್ತು ಸೆಂಟಿಮೀಟರ್ ಅಂದರೆ ಸುಮಾರು ಒಂದು ಇಂಚಿನಷ್ಟು ನೀರನ್ನು ನಿಲ್ಲಿಸಲು ತಯಾರಿರಬೇಕು. ಈ ನೀರಿನಲ್ಲಿ ಒಂದಷ್ಟು ಸೋರಿಹೋಗುವುದರಿಂದ, ಅದರಲ್ಲೂ ಕಾಂಕ್ರಿಟ್ ಹಾಕಿದ ಎರಡು ಮೂರು ದಿನ ಸೋರುವಿಕೆ ಹೆಚ್ಚಿರುವುದರಿಂದ, ಹೆಚ್ಚುವರಿ ನೀರು ಹಾಕುವುದು ಅನಿವಾರ್ಯ. ಕಾಂಕ್ರಿಟ್ ಕಾಲಂಗಳಿಗೆ ಗೋಣಿ ಚೀಲಗಳನ್ನು ಇಲ್ಲವೇ ರಾಗಿ ಹುಲ್ಲನ್ನು ದಾರದಂತೆ ಹೆಣೆದು, ಸುತ್ತುವುದು ಇದ್ದದ್ದೇ. ಕೆಲವೊಮ್ಮೆ ಕಾಲಂಗಳಿಗೆ ಪ್ಲಾಸ್ಟಿಕ್ ಸುತ್ತುವುದೂ ಉಂಟು. ಆದರೆ, ಹೀಗೆ ಸುತ್ತಿದರೆ ಕೆಲವೊಮ್ಮೆ ನಮಗೆ ಒಳಗೆ ಕಾಂಕ್ರಿಟ್ ಒಣಗಿದರೂ ಗೊತ್ತಾಗುವುದಿಲ್ಲ. ಆದುದರಿಂದ ದಪ್ಪದಾದ ಪಾರದರ್ಶಕ ಪ್ಲಾಸ್ಟಿಕ್ ಹಾಳೆಗಳನ್ನೇ ಬಳಸಬೇಕಾಗುತ್ತದೆ. ಕಟ್ಟಡ ದೊಡ್ಡದಿದ್ದರೆ ಪಂಪ್ ಬಳಸಿಯೂ ನೀರು ಉಣಿಸಬಹುದು. ಇಲ್ಲ, ಕೆಲವೇ ಕಾಲಂಗಳು ಇದ್ದರೆ, ಅವುಗಳ ಮೇಲೆ ಸಣ್ಣ ರಂಧ್ರ ಇರುವ ಡಬ್ಬಗಳನ್ನು ಇಟ್ಟು, ಇವಕ್ಕೆ ನೀರು ತುಂಬಿಸಿಯೂ ಸತತವಾಗಿ ನೀರು ಉಣಿಸಬಹುದು. ಒಂದು ಹತ್ತು ಚದರದ ಮನೆಯ ಸೂರೂ ಕೂಡ ಸಾಕಷ್ಟು ನೀರು ಬೇಡುವುದರಿಂದ, ಇದಕ್ಕೆಂದೇ ಒಂದೆರಡು ಕಾರ್ಮಿಕರನ್ನು ನಿಯೋಜಿಸುವುದು ಒಳ್ಳೆಯದು. ಹೆಚ್ಚಿನ ಮಾಹಿತಿಗೆ ಫೋನ್ 98441 32826 – ಆರ್ಕಿಟೆಕ್ಟ್ ಕೆ.ಜಯರಾಮ್