ಕೋಲಾರ: ಕೊರೊನಾ ಆತಂಕ ನಡುವೆಯೂ ರೈತರಿಗೆ ಅನುಕೂಲವಾಗಲು ಮುನ್ನಚ್ಚರಿಕೆ ಕ್ರಮ ಕೈಗೊಂಡು 2.36 ಲಕ್ಷ ಟನ್ ಮಾವು ಮಾರಾಟಕ್ಕೆ ಅವಕಾಶ ಕಲ್ಪಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್.ನಾಗೇಶ್ ತಿಳಿಸಿದರು. ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಡೀಸಿ, ಜಿಪಂ ಸಿಇಒ, ವಿವಿಧ ಇಲಾಖೆ ಅಧಿಕಾರಿಗಳು, ಶಾಸಕರೊಂದಿಗೆ ಸಭೆ ನಡೆಸಿದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದರು.
ಈ ಬಾರಿ ಫಸಲು ಕಡಿಮೆ ಇದ್ದು, 2.36 ಲಕ್ಷ ಟನ್ ಸರಕು ಮಾರುಕಟ್ಟೆಗೆ ಬರುತ್ತದೆ ಎಂದು ಅಂದಾಜಿಸಲಾಗಿದೆ. ಇದರಲ್ಲಿ 1.36 ಲಕ್ಷ ಟನ್ ಮಾವು ಪೊಸೆಸಿಂಗ್ ಯೂನಿಟ್‌ಗಳಿಗೆ ಹೋಗುತ್ತದೆ. ಉಳಿದ ಮಾವು ಮಾರಾಟವನ್ನು ದಿನಕ್ಕೆ ಇಷ್ಟು ಎಂದು ನಿಗದಿಗೊಳಿಸಿ ಮಾರಾಟಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ವಿವರಿಸಿದರು.
ಲಾರಿ ನಿಲುಗಡೆಗೆ ಪ್ರತ್ಯೇಕ ಜಾಗ: ಹೊರ ರಾಜ್ಯದ ಲಾರಿಗಳಿಗೆ ಅವಕಾಶ ನೀಡುವುದಿಲ್ಲ, ಈಗಾಗಲೇ ಬೆಂಗಳೂರಿನ ಲಾರಿ ಮಾಲಿಕರ ಸಂಘದೊಂದಿಗೆ ಮಾತನಾಡಿದ್ದು, ಹೊರ ರಾಜ್ಯದ ಲಾರಿಗಳಿಗೆ ಪ್ರವೇಶ ನೀಡದಂತೆ ಚೆಕ್‌ಪೋಸ್ಟ್ ಬಿಗಿಗೊಳಿಸಲಾಗುವುದು. ದಿನಕ್ಕೆ 160 ಲಾರಿ ಬರಲಿದ್ದು, ವಹಿವಾಟು 6 ವಾರ ನಡೆಯಲಿದೆ. ಬರುವ ಲಾರಿಗಳ ನಿಲುಗಡೆಗೆ 10 ಎಕರೆ ಪ್ರತ್ಯೇಕ ಜಾಗ ನೀಡಲಿದ್ದು,
ಬರುವ ಲಾರಿ ಚಾಲಕರು, ಕ್ಲೀನರ್‌ಗಳು ಅಲ್ಲೇ ಇರಬೇಕು, ಅವರಿಗೆ ಅಲ್ಲೇ ಊಟ, ಶೌಚಾಲಯ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಹೇಳಿದರು. ಮಾರುಕಟ್ಟೆಯಿಂದ ಯಾವ ಲಾರಿ ಬರ ಬೇಕು ಎಂದು ಧ್ವನಿವರ್ಧಕದ ಮೂಲಕ ಸೂಚಿಸಿ ದ ನಂತರ ಆ ಲಾರಿ ಮಾತ್ರ ಮಾರುಕಟ್ಟೆಗೆ ಬಂದು ಮಾವು ಲೋಡ್ ಮಾಡಿಕೊಂಡು ಸಾಗಬೇಕು ಎಂದು ತಿಳಿಸಿದರು.
ಹೊರರಾಜ್ಯಗಳ ಮಾವಿಗೂ ನಿಷೇಧ: ನಮ್ಮ ಜಿಲ್ಲೆಯ ಮಾರುಕಟ್ಟೆಗಳಿಗೆ ಹೊರ ರಾಜ್ಯದ ಮಾವು ಬರಲು ಅವಕಾಶ ನೀಡುವುದಿಲ್ಲ, ನಮ್ಮ ರೈತರ ತೋಟಗಳಿಂದ ಬರುವುದಕ್ಕೆ ಆದ್ಯತೆ ನೀಡಲಾಗುವುದು. ಬರುವ ಲಾರಿಗಳಿಗೆ ಸೋಂಕು ನಿವಾರಕ ಔಷಧಿ ಸಿಂಪಡಣೆ ಮಾಡಿಯೇ ಮಾರುಕಟ್ಟೆ ಒಳಕ್ಕೆ ಬಿಡಲಾಗುವುದು ಎಂದು ವಿವರಿಸಿದರು. ಸೋಂಕಿನ ಪ್ರಕರಣ ಮಾರುಕಟ್ಟೆ ವ್ಯಾಪ್ತಿ ಯಲ್ಲಿ ಕಂಡು ಬಂದರೆ 2 ದಿನ ವಹಿವಾಟು ಬಂದ್ ಮಾಡಿ ನಂತರ ಸೋಂಕು ನಿವಾರಕ ಔಷಧಿ ಸಿಂಪಡಿಸಿ ಮತ್ತೆ ಆರಂಭಿಸಲಾಗುವುದು ಎಂದು ತಿಳಿಸಿದರು.
ಜಿಲ್ಲಾಧಿಕಾರಿ ಸಿ.ಸತ್ಯಭಾಮ ಮಾತನಾಡಿ, ಟ್ರೇಡರ್ ಎಪಿಎಂಸಿ ಹಾಗೂ ತಾಲೂಕು ಆಡಳಿತದ ಬಳಿ ನೋಂದಣಿ ಮಾಡಿಸುವುದು ಕಡ್ಡಾಯವಾಗಿದೆ ಎಂದು ತಿಳಿಸಿದರು. ಸಭೆಯಲ್ಲಿ ಸಂಸದ ಎಸ್.ಮುನಿಸ್ವಾಮಿ, ಶಾಸಕ ಕೆ.ಶ್ರೀನಿವಾಸಗೌಡ, ಎಡೀಸಿ ಶಿವ ಸ್ವಾಮಿ, ಜಿಪಂ ಸಿಇಒ ಎಚ್.ವಿ.ದರ್ಶನ್, ಎಸ್ಪಿ ಕಾರ್ತಿಕ್‌ರೆಡ್ಡಿ, ಎಸಿ ಸೋಮ ಶೇಖರ್, ತೋಟಗಾರಿಕಾ ಇಲಾಖೆ ಉಪನಿರ್ದೇಶಕರು, ಮಾವು ಬೆಳೆಗಾರರ ಸಂಘದ ಅಧ್ಯಕ್ಷರು ಪಾಲ್ಗೊಂಡಿದ್ದರು.