ಹಿರೇಕೆರೂರ: ಮಾಸೂರು ಗ್ರಾಮದ ಸಮಗ್ರ ಅಭಿವೃದ್ಧಿಗೆ ನಿರ್ಲಕ್ಷ್ಯ ತೋರಲಾಗಿದೆ ಎಂದು ಆರೋಪಿಸಿ, ಚುನಾವಣಾ ಪ್ರಚಾರಕ್ಕೆ ಬರುವ ರಾಜಕೀಯ ಮುಖಂಡರಿಗೆ ದಿಗ್ಬಂಧನ ವಿಧಿಸಿ, ಘೇರಾವು ಹಾಕಿ, ಕಪ್ಪುಪಟ್ಟಿ ಪ್ರದರ್ಶನ ಮಾಡಲು ಹಾಗೂ ನೋಟಾ ಮತ ಚಲಾಯಿಸಲು ಶನಿವಾರ ಗ್ರಾಮಸ್ಥರು ತೀರ್ಮಾನ ಕೈಗೊಂಡರು.
ಈ ಹಿಂದೆ ಲೋಕಸಭೆ ಹಾಗೂ ವಿಧಾನ ಸಭೆ ಚುನಾವಣೆ ಬಹಿಷ್ಕಾರ ಮಾಡುವುದಾಗಿ ತಿಳಿಸಿದ್ದ ಸಂದರ್ಭದಲ್ಲಿ ಅಧಿಕಾರಿಗಳು ಬೇಡಿಕೆ ಈಡೇರಿಸುವ ಭರವಸೆ ನೀಡಿದ್ದರು. ಆದರೆ, ಈ ವರೆಗೆ ಯಾವುದೇ ಬೇಡಿಕೆಗಳು ಈಡೇರಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು. ಗ್ರಾಮದ ಬಗ್ಗೆ ಆಳುವವರು ಮಲತಾಯಿ ಧೋರಣೆ ಅನುಸರಿಸುತ್ತಿದ್ದಾರೆ.
ಮಾಸೂರು ಗ್ರಾಮದ ಕುಂಬಾರ ಹೊಳೆ ಸಮೀಪ ಕುಮದ್ವತಿ ನದಿಗೆ ಸೇತುವೆ ನಿರ್ಮಿಸುವಂತೆ ಹಲವಾರು ವರ್ಷಗಳಿಂದ ಹೋರಾಟ ನಡೆಸುತ್ತಿದ್ದರೂ ಇಲ್ಲಿಯವರೆಗೆ ಕಾರ್ಯರೂಪಕ್ಕೆ ಬಂದಿಲ್ಲ. ಇಲ್ಲಿ ಅನೇಕ ರೈತರು ತಮ್ಮ ಜೀವ ಕಳೆದುಕೊಂಡಿದ್ದಾರೆ. ಮಾಸೂರು ದೊಡ್ಡ ಗ್ರಾಮವಾಗಿದ್ದರೂಅಧಿಕೃತ ಸ್ಮಶಾನ ಇಲ್ಲದೇ ಶವ ಸಂಸ್ಕಾರಕ್ಕೆ ಸಾಕಷ್ಟು ತೊಂದರೆ ಅನುಭವಿಸುವಂತಾಗಿದೆ.
ಕಳೆದ ಬಜೆಟ್‌ನಲ್ಲಿ ಮದಗ ಮಾಸೂರು ಕೆರೆ ಮತ್ತು ಕಾಲುವೆ ಅಭಿವೃದ್ಧಿಗೆ 28 ಕೋಟಿ ರೂ. ಅನುದಾನ ಘೋಷಣೆ ಮಾಡಿದ್ದರೂ ಕಾಮಗಾರಿ ಮಾತ್ರ ಆರಂಭವಾಗಲಿಲ್ಲ. ಮದಗ ಮಾಸೂರು ಕೆರೆಯನ್ನು ಪ್ರವಾಸೋದ್ಯಮ ತಾಣವಾಗಿಸುವಘೋಷಣೆ ಕೂಡ ಜಾರಿಯಾಗಲಿಲ್ಲ, ಸರ್ವಜ್ಞ ಅಭಿವೃದ್ಧಿ ಪ್ರಾಧಿಕಾರ 2012ರಿಂದ ಘೋಷಣೆಯಾಗಿಯೇ ಉಳಿದಿದೆ ಎಂದು ಗ್ರಾಮಸ್ಥರು ಆರೋಪಿಸಿದರು.
ಈ ವರೆಗೆ ನೀಡಿರುವ ಘೋಷಣೆಗಳನ್ನು ಕೂಡಲೇ ಅನುಷ್ಠಾನಗೊಳಿಸಬೇಕು. ಕುಮದ್ವತಿ ನದಿ ನೀರಿನ ಪ್ರವಾಹ ತಡೆಗಟ್ಟಲು ಸುರಕ್ಷತೆಗೆ ತಡೆಗೋಡೆ ನಿರ್ಮಿಸಬೇಕು. ಹಳೆಯ ಕಾಲುವೆಗಳ ಹೂಳು ತೆಗೆಸಿ, ನೀರು ಹರಿದು ಹೋಗುವಂತೆ ಸಮರ್ಪಕ ವ್ಯವಸ್ಥೆ ಕಲ್ಪಿಸಬೇಕು ಎಂದು ಆಗ್ರಹಿಸಿದರು.
ಗ್ರಾಮದ ಗಂಗೆ-ಗೌರಿ ಮಹಿಳಾ ಸಂಘ, ಆಂಜನೇಯ ಮಹಿಳಾ ಸಂಘ, ಪ್ರೇರಣಾ ಮಹಿಳಾ ಸಂಘ, ರಾಘವೇಂದ್ರ ಮಹಿಳಾ ಸಂಘ, ಅಂಬಾಭವಾನಿ ಮಹಿಳಾ ಸಂಘದ ಪದಾಧಿಕಾರಿಗಳು ಹಾಗೂ ಗ್ರಾಮಸ್ಥರು ಇದ್ದರು.