Advertisement
ಸಾರಿಗೆ ಸಂಸ್ಥೆ ನೌಕರರ ಸಂಘಟನೆಗಳು ಮುಷ್ಕರಕ್ಕೆ ಕರೆ ನೀಡಿದ್ದ ಹಿನ್ನೆಲೆಯಲ್ಲಿ ಕಾರ್ಮಿಕ ಇಲಾಖೆ ಆಯುಕ್ತರು ಶುಕ್ರವಾರ ಬನ್ನೇರುಘಟ್ಟ ರಸ್ತೆಯಲ್ಲಿರುವ ಕಾರ್ಮಿಕರ ಇಲಾಖೆ ಕಚೇರಿಯಲ್ಲಿ ಸಂಘಟನೆ ಮುಖಂಡರ ಸಭೆ ಕರೆದಿದ್ದರು. ಆದರೆ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ನಿಧನದ ಹಿನ್ನೆಲೆಯಲ್ಲಿ ಸಭೆಯನ್ನು ಮುಂದೂಡಿದ್ದಾರೆ.
38 ತಿಂಗಳ ವೇತನ ಹಿಂಬಾಕಿ ಪಾವತಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆ ಆಗ್ರಹಿಸಿ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ಡಿ. 31ರಿಂದ ಅನಿರ್ದಿಷ್ಟಾವಧಿ ಮುಷ್ಕರ ಮಾಡುವುದಾಗಿ ಘೋಷಿಸಿ ದ್ದ ರಿಂದ ಎಚ್ಚೆತ್ತುಕೊಂಡಿದ್ದ ಕಾರ್ಮಿಕ ಇಲಾಖೆ ಆಯುಕ್ತರು ಈ ಹಿಂದೆ ಸಂಧಾನ ಸಭೆಗೆ ಮುಂದಾಗಿದ್ದಾರೆ. ಕಾರ್ಮಿಕ ಸಂಘಟನೆಗಳ ಜಂಟಿಕ್ರಿಯಾ ಸಮಿತಿ ವಿವಿಧ ಬೇಡಿಕೆಗಳ ಈಡೇರಿಕೆ ಆಗ್ರಹಿಸಿ ಡಿ.31ರ ಬೆಳಗ್ಗೆ 6 ಗಂಟೆಗೆಯಿಂದ ಅನಿರ್ದಿಷ್ಟಾವಧಿಯ ಮುಷ್ಕರ ನಡೆಸುವುದಾಗಿ ಹೇಳಿವೆ. ಜತೆಗೆ ಈ ಸಂಬಂಧ ಸೂಕ್ತ ಕ್ರಮ ಕೈಗೊಳ್ಳುವಂತೆ ಕೆಎಸ್ಆರ್ಟಿಸಿ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರು ಪತ್ರದ ಮೂಲಕ ಕಾರ್ಮಿಕ ಇಲಾಖೆಯಲ್ಲಿ ಕೋರಿದ್ದಾರೆ. ಹಾಗೆಯೇ ಕಾರ್ಮಿಕ ಸಂಘ ಮುಖಂಡರೂ ಕೂಡ ಮುಷ್ಕರ ನೋಟಿಸ್ ನೀಡಿರುವ ಹಿನ್ನೆಲೆಯಲ್ಲಿ ಕಾರ್ಮಿಕ ಇಲಾಖೆ ಆಯುಕ್ತರು ಸಾರಿಗೆ ಸಂಸ್ಥೆ ನೌಕರರ ಸಂಘಟನೆ ಮುಖಂಡರೊಂದಿಗೆ ರಾಜೀ ಸಂಧಾನ ಸಭೆ ಕರೆದಿದ್ದಾರೆ. ಆ ಹಿನ್ನೆಲೆಯಲ್ಲಿ ಸಭೆ ತೀವ್ರ ಕುತೂಹಲ ಮೂಡಿಸಿದೆ.