ಭಾಲ್ಕಿ: ತಾಲೂಕಿನಾದ್ಯಂತ ದಿಢೀರನೆ ಶಂಖು ಹುಳುಗಳ ಕಾಟದಿಂದ ರೈತರು ಬೆಳೆದ ಬೆಳೆಗಳು ಮೊಳಕೆಯೊಡೆಯುವ ಮುನ್ನವೆ ಕಮರಿ ಹೋಗುತ್ತಿರುವ ದೃಶ್ಯ ಸರ್ವೆಸಾಮಾನ್ಯವಾಗಿದೆ. ಇದರಿಂದ ತಾಲೂಕಿನ ರೈತಾಪಿ ವರ್ಗ ಚಿಂತೆಯಲ್ಲಿ ಮುಳುಗಿದೆ.
ಈ ಮೊದಲೇ ಮಳೆ ಬಾರದ ಕಾರಣ ಬಿತ್ತನೆ ಮಾಡಲು ತುಂಬಾ ತಡವಾಗಿತ್ತು. ಮಳೆ ಬಂದಿದೆ ಎಂದು ಸಾಲ ಸೂಲ ಮಾಡಿ ತಂದ ಬಿತ್ತನೆ ಬೀಜ ಮತ್ತು ಗೊಬ್ಬರ ಹಾಕಿ ಬೆಳೆದ ಬೆಳೆಯು ಶಂಕು ಹುಳಗಳ ಕಾಟದಿಂದ ಸಂಪೂರ್ಣವಾಗಿ ನಾಶವಾಗುತ್ತಿವೆ.
ಶಂಖು ಹುಳುಗಳು ಚಿಕ್ಕದಾದ ಬೆಳೆಯ ಸಾಲುಗಳಲ್ಲಿಯೇ ಜನಿಸಿ, ಮೊಳಕೆಯೊಡೆಯುವ ಮುನ್ನವೇ ಬೆಳೆ ತಿನ್ನುತ್ತಾ ಮುಂದೆ ಸಾಗುತ್ತವೆ. ಹಾಗೆಯೇ ಎಲ್ಲ ಬೆಳೆಗಳ ಮೊಳಕೆ ತಿಂದು ಮುಂದೆ ಸಾಗಿ ಮುಂದಿನ ಹೊಲಗಳಲ್ಲಿಯ ಬೆಳೆಗಳ ಮೊಳಕೆ ತಿನ್ನಲು ಪ್ರಾರಂಭಿಸುತ್ತಿವೆ. ಹೀಗಾಗಿ ರೈತರು ಬೆಳೆದ ಸೋಯಾ ಅವರೆ ಬೆಳೆಗಳು ಸಂಪೂರ್ಣ ನಾಶವಾಗಿ ಹೊಲವು ಬೆಳೆಗಳಿಲ್ಲದೇ ಕರಿ ಹೊಲವಾಗಿ ಪರಿವರ್ತನೆ ಹೊಂದುತ್ತಲಿದೆ.
ರೈತರು ಈ ಹುಳುಗಳನ್ನು ಒಂದೊಂದಾಗಿ ಆರಿಸಿ ಚೀಲದಲ್ಲಿ ತುಂಬಿ ನೀರಲ್ಲಿ ಬೀಸಾಡಿ ಬರುತ್ತಲಿದ್ದಾರೆ. ಆದರೂ ಬೆಳೆ ರಕ್ಷಿಸಲು ಆಗುತ್ತಿಲ್ಲ. ಈ ಕುರಿತು ಕೃಷಿ ಅಧಿಕಾರಿಗಳಿಗೆ ವಿಚಾರಿಸಿದರೆ ಸಮರ್ಪಕವಾದ ಉತ್ತರ ನೀಡುತ್ತಿಲ್ಲ. ಈ ಹುಳುಗಳು ಬೆಳೆ ತಿನ್ನುವ ಬಗ್ಗೆ ಯಾವುದೇ ರೀತಿಯ ಪರಿಹಾರ ಸೂಚಿಸುತ್ತಿಲ್ಲ. ಇದರಿಂದ ಇಲ್ಲಿಯ ರೈತರು ತುಂಬಾ ಆತಂಕಕ್ಕೆ ಒಳಗಾಗಿದ್ದಾರೆ.
ತಾಲೂಕಿನ ಭಾತಂಬ್ರಾ, ನಾವದಗಿ, ಡೊಣಗಾಪುರ, ಧನ್ನೂರ(ಎಸ್), ಹಲಬರ್ಗಾ, ಖಟಕಚಿಂಚೋಳಿ, ಕುರುಬ ಖೇಳಗಿ, ಕಪಲಾಪುರ, ಏಣಕೂರ, ಕುಂಟೆ ಸಿರಸಿ, ಕಲವಾಡಿ, ಮೆಹಕರ, ಸಾಯಿಗಾಂವ, ನಿಟ್ಟೂರ(ಬಿ) ಸೇರಿದಂತೆ ಹಲವಾರು ಗ್ರಾಮಗಳಲ್ಲಿ ಈ ಬಾಧೆ ಕಂಡುಬಂದಿದ್ದು, ಕೃಷಿ ಅಧಿಕಾರಿಗಳು ತಕ್ಷಣವೇ ತನಿಖೆ ನಡೆಸಿ, ಶೀಘ್ರ ಪರಿಹಾರ ಕಂಡುಕೊಳ್ಳಬೇಕು ಎನ್ನುವುದು ತಾಲೂಕಿನ ರೈತರ ಆಗ್ರಹವಾಗಿದೆ.