Advertisement

ವಾಜಪೇಯಿ, ಅಡ್ವಾಣಿಯದ್ದು 7 ದಶಕಗಳ ಗೆಳೆತನ; ರಾಜಕೀಯ ಏಳುಬೀಳು

07:52 PM Aug 16, 2018 | Sharanya Alva |

ನವದೆಹಲಿ: ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಆರೋಗ್ಯ ಗುರುವಾರ ಮತ್ತಷ್ಟು ಕ್ಷೀಣಿಸಿರುವ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವಾರು ಗಣ್ಯರು ಏಮ್ಸ್ ಆಸ್ಪತ್ರೆಗೆ ಭೇಟಿ ನೀಡಿದ್ದರು. ಇದರಲ್ಲಿ 90 ವರ್ಷದ ಎಲ್ ಕೆ ಅಡ್ವಾಣಿ ಭೇಟಿ ನೀಡಿರುವುದು ತುಂಬಾ ವಿಶೇಷವಾದದ್ದು.

Advertisement

ಯಾಕೆಂದರೆ ಅಟಲ್ ಬಿಹಾರಿ ವಾಜಪೇಯಿ(93) ಅವರು ಅಡ್ವಾಣಿಗಿಂತ(90) ಮೂರು ವರ್ಷ ದೊಡ್ಡವರು. ಈ ಇಬ್ಬರು ಉತ್ತಮ ಗೆಳೆಯರು. ಅದೇ ರೀತಿ ರಾಜಕೀಯ ಸಹಪಾಠಿ ಮತ್ತು ಏಳು ದಶಕಗಳ ಕಾಲದ ಸಹಪಾಠಿಯಾಗಿದ್ದರು. ಇಬ್ಬರಿಗೂ ಪರಸ್ಪರ ತುಂಬಾ ಗೌರವ ಮತ್ತು ಅಭಿಮಾನ. ಅಟಲ್ ಮತ್ತು ಅಡ್ವಾಣಿಗೆ ಅವರದ್ದೇ ಆದ ಬೆಂಬಲಿಗರು ಮತ್ತು ಅಭಿಮಾನಿ ಬಳಗ ಹೊಂದಿದ್ದರು.

ಆದರೆ ಇಬ್ಬರ ರಾಜಕೀಯ ಜೀವನದಲ್ಲಿ  ನಿಲುವು, ಸಾಮಾಜಿಕ ಮತ್ತು ನಂಬಿಕೆಗಳ ವಿಚಾರದಲ್ಲಿ ಭಿನ್ನತೆಗಳಿದ್ದವು. ಹೀಗೆ ಅಟಲ್ ಬಿಹಾರಿ ವಾಜಪೇಯಿ ಮತ್ತು ಎಲ್ ಕೆ ಅಡ್ವಾಣಿ ಜೋಡಿಯ ಗೆಳೆತನ ಭಾರತೀಯ ರಾಜಕೀಯ ಇತಿಹಾಸದದಲ್ಲೊಂದು ಮಹತ್ವದ ಮೈಲಿಗಲ್ಲು.

ಇಬ್ಬರು ನಾಯಕರು ರಾಷ್ಟ್ರೀಯ ಸ್ವಯಂ ಸೇವಕ ಸಂಘಕ್ಕೆ ನಿಷ್ಠರಾಗಿದ್ದವರು.ಅಟಲ್ ಮತ್ತು ಅಡ್ವಾಣಿ ಸಾಹಿತ್ಯ, ಪತ್ರಿಕೋದ್ಯಮ ಹಾಗೂ ಸಿನಿಮಾ ಕ್ಷೇತ್ರದ ಬಗ್ಗೆ ಆಸಕ್ತಿ ಹೊಂದಿದ್ದರು. ಇವರು ಬಳಿಕ ಭಾರತೀಯ ಜನ ಸಂಘಕ್ಕೆ ಸೇರ್ಪಡೆಗೊಂಡಿದ್ದರು. ಆರ್ ಎಸ್ ಎಸ್ ನಲ್ಲಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿರುವ ಹಲವರನ್ನು 1951ರಲ್ಲಿ ರಾಜಕೀಯ ಪಕ್ಷವನ್ನು ಅಸ್ತಿತ್ವಕ್ಕೆ ತಂದಾಗ ಸೇರ್ಪಡೆಗೊಳಿಸಿತ್ತು. ಅವರು ಪಕ್ಷವನ್ನು ಸಂಘಟಿಸಲು ನೆರವು ನೀಡುವಂತೆ ಸೂಚಿಸಿತ್ತು.

ಈ ಹಿನ್ನೆಲೆಯಲ್ಲಿ ವಾಜಪೇಯಿ ಅವರು ಹಿರಿಯ ಮುಖಂಡರಾಗಿದ್ದರು. ಅಲ್ಲದೇ ಪಕ್ಷದ ಹಿರಿಯ ಸ್ಟಾರ್ ಸಂಸದರಾಗಿ ಹೊರಹೊಮ್ಮಿದ್ದರು. ದೀನ್ ದಯಾಳ್ ಉಪಾಧ್ಯಾಯ ಅವರ ನಿಧನದ ನಂತರ ಜನ ಸಂಘದ ಚುಕ್ಕಾಣಿ ಹಿಡಿದಿದ್ದರು. ಬಳಿಕ ಅಡ್ವಾಣಿ ಅವರು ಸಾಥ್ ನೀಡಿದ್ದರು. ಇಬ್ಬರೂ ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಜೈಲುವಾಸ ಅನುಭವಿಸಿದ್ದರು.

Advertisement

ತದನಂತರ ಕಾಂಗ್ರೆಸ್ ಪಕ್ಷಕ್ಕೆ ಸೆಡ್ಡು ಹೊಡೆಯಲು ಜನಸಂಘವನ್ನು ಜನತಾ ಪಕ್ಷವನ್ನಾಗಿ ಪರಿವರ್ತಿಸಲು ಇಬ್ಬರೂ ನಿರ್ಧರಿಸಿದ್ದರು. ರಾಜಕೀಯ ಪ್ರವೇಶದ ನಂತರ ವಾಜಪೇಯಿ ವಿದೇಶಾಂಗ ಸಚಿವರಾಗಿ ಕಾರ್ಯನಿರ್ವಹಿಸಿದ್ದರೆ, ಅಡ್ವಾಣಿ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವರಾಗಿದ್ದರು.

ಏತನ್ಮಧ್ಯೆ ಎರಡು ಸದಸ್ಯತ್ವ ಹೊಂದಿದ್ದ ಬಗ್ಗೆ ಪ್ರಶ್ನೆ ಎದ್ದಿತ್ತು. ಒಂದೋ ಆರ್ ಎಸ್ ಎಸ್ ಗೆ ಅಥವಾ ಜನತಾ ಪಕ್ಷಕ್ಕೆ ನಿಷ್ಠರಾಗಿರಬೇಕೆಂಬ ಜಿಜ್ಞಾಸೆ ಬಂದಾಗ..ವಾಜಪೇಯಿ ಮತ್ತು ಅಡ್ವಾಣಿ ಜನತಾ ಪಕ್ಷದಿಂದ ಹೊರಬಂದು ಭಾರತೀಯ ಜನತಾ ಪಕ್ಷವನ್ನು ಕಟ್ಟಿದ್ದರು. ವಾಜಪೇಯಿ ಪಕ್ಷದ ಮೊದಲ ಅಧ್ಯಕ್ಷರಾಗಿದ್ದರು. ಕೆಲವು ವರ್ಷಗಳ ಕಾಲ ಪಕ್ಷ ಚುನಾವಣೆಯಲ್ಲಿ ಮಹತ್ವದ ಸಾಧನೆ ಸಾಧಿಸಲಿಲ್ಲವಾಗಿತ್ತು.

1980ರಲ್ಲಿ ಲಾಲ್ ಕೃಷ್ಣ ಅಡ್ವಾಣಿ ಬಿಜೆಪಿ ಚುಕ್ಕಾಣಿ ಹಿಡಿದ ಮೇಲೆ ಹಿಂದುತ್ವದ ರಾಜಕಾರಣ ಪ್ರಬಲವಾಗಿ ಮುಂಚೂಣಿಗೆ ಬಂದಿತ್ತು. ಆಗ ವಾಜಪೇಯಿ ಅಡ್ವಾಣಿಗೆ ಸಾಥ್ ನೀಡಿದ್ದರು. ಅದಕ್ಕೆ ಕಾರಣವಾಗಿದ್ದು ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಿಸುವುದು ಪ್ರಮುಖ ಅಜೆಂಡಾವಾಗಿತ್ತು. ಆದರೆ 1992ರಲ್ಲಿ ನಡೆದ ಬಾಬ್ರಿ ಮಸೀದಿ ಧ್ವಂಸದ ಘಟನೆಯಿಂದ ಬಿಜೆಪಿ ಗುರಿಗೆ ಹೊಡೆತ ನೀಡಿತ್ತು. ಅಡ್ವಾಣಿಯ ಈ ಕಾಲಘಟ್ಟ ಬಿಜೆಪಿ ಮುಖಂಡರು ಮತ್ತು ಹೊಸಪೀಳಿಗೆಗೆ ಹೊಸ ಶಕ್ತಿಯನ್ನು ತುಂಬಿತ್ತು. ಇಬ್ಬರ ಗೆಳೆತನ, ಶಕ್ತಿ, ಯುಕ್ತಿಯಿಂದ ಒಂದೇ ಗುರಿಯನ್ನು ಹೊಂದಿತ್ತು. ಸ್ಪಷ್ಟ ನಿಲುವು ಹೊಂದಿದ್ದ ಅಡ್ವಾಣಿ ವಾಜಪೇಯಿ ಅವರು ಪ್ರಧಾನಿ ಅಭ್ಯರ್ಥಿ ಎಂದು ಘೋಷಿಸಿಬಿಟ್ಟಿದ್ದರು. ಇದರಿಂದಾಗಿ ಪಕ್ಷ ದೊಡ್ಡ ಮಟ್ಟದಲ್ಲಿ ಬೆಳೆಯಲು ಸಹಕಾರಿಯಾಯಿತು. ಬಳಿಕ ವಾಜಪೇಯಿ ಅವರಿಗೂ ರಾಷ್ಟ್ರ ರಾಜಕಾರಣದ ಹೊಣೆ ಹೊರುವ ಅವಕಾಶ ದೊರಕಿಸಿಕೊಟ್ಟಿತ್ತು.

ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿದ ಮೇಲೆ ವಾಜಪೇಯಿ ಮತ್ತು ಅಡ್ವಾಣಿ ಕೇಂದ್ರ ಸರ್ಕಾರದಲ್ಲಿ ಪ್ರಮುಖ ಪವರ್ ಸೆಂಟರ್ ಆಗಿಬಿಟ್ಟಿದ್ದರು. ಈ ಸಂದರ್ಭದಲ್ಲಿ ಇಬ್ಬರ ನಡುವಿನ ವಿಷಯಗಳ ಕುರಿತ ಭಿನ್ನ ಮನಸ್ಥಿತಿ ಕಾಣುವಂತಾಯಿತು. ಆದರೆ ಇಬ್ಬರು ಮುಖಂಡರು ಅದನ್ನು ಸಮರ್ಪಕವಾಗಿ ಪರಿಹರಿಸಿಕೊಂಡು ಪಕ್ಷವನ್ನು ಮುನ್ನಡೆಸಿದ್ದರು. 2004ರಲ್ಲಿ ಪಕ್ಷ ಸೋಲಿನ ರುಚಿ ಕಂಡಿದ್ದರಿಂದ ವಾಜಪೇಯಿ ಅವರು ರಾಜಕೀಯದಿಂದ ನಿವೃತ್ತಿಯಾಗಿದ್ದರು. 2009ರಲ್ಲಿ ತಮಗೆ ಪ್ರಧಾನಿ ಹುದ್ದೆಯ ಅವಕಾಶ ದೊರೆಯಬಹುದು ಎಂಬ ನಿರೀಕ್ಷೆಯಲ್ಲಿ ಅಡ್ವಾಣಿ ಹೊಸ ವರಸೆಯೊಂದಿಗೆ ಮುನ್ನುಗ್ಗಿದ್ದರು. ಆದರೆ ಅದು ಕೊನೆಗೂ ಸಾಕಾರಗೊಳ್ಳಲೇ ಇಲ್ಲ..2014ರಲ್ಲಿ ನರೇಂದ್ರ ಮೋದಿ ಪ್ರಧಾನಿ ಪಟ್ಟ ಅಲಂಕರಿಸಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು.

Advertisement

Udayavani is now on Telegram. Click here to join our channel and stay updated with the latest news.

Next