ಲಾಕ್ ಡೌನ್ ಹಿನ್ನೆಲೆಯಲ್ಲಿ ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ಹೋಗುವುದು ಈಗ ದುಸ್ತರ. ಮೊದಲನೆಯದಾಗಿ ಅನುಮತಿ ಪತ್ರ ಪಡೆದುಕೊಳ್ಳ ಬೇಕಾಗುತ್ತದೆ.
ಎರಡನೆಯದಾಗಿ ಜೇಬಲ್ಲಿ ದುಡ್ಡು, ಸ್ವಂತ ವಾಹನ ಇರಬೇಕಾಗುತ್ತದೆ. ಇವ್ಯಾವುದೂ ಇಲ್ಲದೆ ವ್ಯಕ್ತಿಯೋರ್ವ 900 ಕಿ. ಮೀ ದೂರವನ್ನು ಕಾಲ್ನಡಿಗೆಯಲ್ಲಿ ಕ್ರಮಿಸಿ ತನ್ನ ಊರನ್ನು ಅನ್ನು ತಲುಪಿರುವ ಘಟನೆ ಎಲ್ಲರನ್ನೂ ಅಚ್ಚರಿಗೆ ನೂಕಿದೆ.
32 ವರ್ಷದ ಅಜಯ್ ಬಂಧೂಜಿ ಸಾತೋರ್ಕರ್ ಎಂಬಾತ ಪನ್ವೇಲ್ ನಲ್ಲಿ ಕಂಪ್ಯೂಟರ್ ಆಪರೇಟರ್ ಉದ್ಯೋಗ ನಿರ್ವಹಿಸುತ್ತಿದ್ದ. ಮೂರು ನಾಲ್ಕು ಮಂದಿ ಗೆಳೆಯರೊಂದಿಗೆ ಒಂದೇ ರೂಮಿನಲ್ಲಿ ಅವನ ವಾಸ್ತವ್ಯ. ಲಾಕ್ ಡೌನ್ ಘೋಷಣೆಯಾದಾಗ ಅವನ ಸ್ನೇಹಿತರು ಒಬ್ಬೊಬ್ಬರಾಗಿ ತಮ್ಮ ಊರಿಗೆ ಮರಳಿದರು.
ಜೇಬಿನಲ್ಲಿ ಸಾಕಷ್ಟು ದುಡ್ಡಿಲ್ಲದೆ ನಡೆದು ಹೋಗುವ ನಿರ್ಧಾರ ಕೈಗೊಂಡ. ಪೊಲೀಸರಿಂದ ಬಚಾವಾಗಲು ಗ್ರಾಮಗಳನ್ನು ದಾಟಿದ. ಸಹ್ಯಾದ್ರಿ ಪರ್ವತ ಶ್ರೇಣಿಯನ್ನು ಹಾಯ್ದು, ದಾರಿಯಲಿ ಸಿಕ್ಕ ನದಿಗಳಲ್ಲಿ ಸ್ನಾನ ಮಾಡಿ, ಬಿಸ್ಕತ್ತು ತಿಂದು ಹೊಟ್ಟೆ ತುಂಬಿಸಿಕೊಂಡಿದ್ದಾನೆ.
ತನ್ನ ಊರಿಗೆ ಹೋಗಲೇಬೇಕೇಂದು ಅಜಯ್ ನಿರ್ಧರಿಸಿದ ಸಂದರ್ಭಲ್ಲಿ ಆತನ ಬಳಿಯಲ್ಲಿದ್ದಿದ್ದು ಕೇವಲ 300 ರೂಪಾಯಿಗಳು ಮಾತ್ರ. ಆದರೆ ಆತನ ಆತ್ಮವಿಶ್ವಾಸ ಮಾತ್ರ ಇದರ ನೂರುಪಟ್ಟಿನಷ್ಟಿತ್ತು. ಹಾಗಾಗಿಯೇ ಈತ ನಿರಂತರ 15 ದಿನಗಳ ಕಾಲ ನಡೆದು ಬಂದು ತನ್ನೂರಿಗೆ ಸೇರಿಕೊಂಡಿದ್ದಾನೆ.
ರಾಯ್ ಗಢದ ಪನ್ವೇಲ್ ನಿಂದ ಚಂದ್ರಾಪುರದ ಘೂಗುಸ್ ಗ್ರಾಮಕ್ಕೆ ನಡೆದುಕೊಂಡೇ ಬಂದಿದ್ದ ಅಜಯ್ ಬಂಧೂಜಿ ಸಾತೋರ್ಕರ್ ನ ಸಾಹಸಕ್ಕೆ ಆ ಊರಿನ ಗ್ರಾಮಸ್ಥರು ಮಾತ್ರವಲ್ಲದೇ ಸ್ಥಳೀಯ ಅಧಿಕಾರಿಗಳೂ ಸಹ ಭೇಷ್ ಅಂದಿದ್ದಾರೆ. ಏಪ್ರಿಲ್ 2ರಂದು ಹೊರಟಾತ, ಏಪ್ರಿಲ್ 16 ರಂದು ತನ್ನೂರನ್ನು ತಲುಪಿದ್ದ. ಸದ್ಯ ಅಜಯ್ ನನ್ನು ಸನಿಹದ ಚಂದ್ರಾಪುರ ಪಟ್ಟಣದಲ್ಲಿ ಕ್ವಾರಂಟೈನ್‌ನಲ್ಲಿ ಇಡಲಾಗಿದೆ.