Advertisement

ಮಕ್ಕಳಿಗೆ ಕಂಪ್ಯೂಟರ್ ಜ್ಞಾನ ಅನಿವಾರ್ಯ

01:03 PM Sep 23, 2019 | Suhan S |

ಹಾವೇರಿ: ಅಕ್ಷರ ಜ್ಞಾನದ ಜತೆಗೆ ಇಂದಿನ ಕಂಪ್ಯೂಟರ್‌ ಯುಗದಲ್ಲಿ ಪ್ರತಿಯೊಬ್ಬರಿಗೂ ಕಂಪ್ಯೂಟರ್‌ ಜ್ಞಾನ ಮುಖ್ಯವಾಗಿದೆ. ಈ ನಿಟ್ಟಿನಲ್ಲಿ ಸಾಕ್ಷರತಾ ಮಿಷನ್‌ ಗಮನಹರಿಸಬೇಕು ಎಂದು ಜಿಪಂ ಅಧ್ಯಕ್ಷ ಎಸ್‌.ಕೆ.ಕರಿಯಣ್ಣನವರ ಹೇಳಿದರು.

Advertisement

ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಲೋಕಶಿಕ್ಷಣ ನಿರ್ದೇಶನಾಲಯ, ರಾಜ್ಯ ಸಾಕ್ಷರತಾ ಮಿಷನ್‌ ಪ್ರಾಧಿಕಾರ, ಜಿಪಂ, ಜಿಲ್ಲಾ ಲೋಕ ಶಿಕ್ಷಣ ಸಮಿತಿ, ಜಿಲ್ಲಾ ಸಾಕ್ಷರ ಸಮಿತಿ ಸಹಯೋಗದಲ್ಲಿ ಪ್ರಸಕ್ತ ಸಾಲಿನ ಸಾಕ್ಷರತಾ ಕಾರ್ಯಕ್ರಮದ ಅನುಷ್ಠಾನದ ಮುಖ್ಯ ತರಬೇತಿದಾರರಿಗೆ ಆಯೋಜಿಸಲಾಗಿದ್ದ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಅಕ್ಷರದಿಂದ ದೂರ ಉಳಿದವರಿಗೆ ಸರ್ಕಾರವು ಸಾಕ್ಷರರನ್ನಾಗಿ ಮಾಡಲು ಅನೇಕ ಸೌಲಭ್ಯ ಹಾಗೂ ಕಾರ್ಯಕ್ರಮಗಳನ್ನು ಜಾರಿಗೊಳಿಸಿದೆ. ಈ ಕಾರ್ಯಕ್ರಮಗಳನ್ನು ಸಮರ್ಪಕವಾಗಿ ಅನುಷ್ಠಾನಕ್ಕೆ ತರಬೇಕಾಗಿದೆ. ಶಿಕ್ಷಣ ವಂಚಿತ ಗ್ರಾಮೀಣ ಜನತೆ, ಅಕ್ಷರ ಕಲಿತರೆ ದೇಶದ ಪ್ರಗತಿ ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಅನಕ್ಷರಸ್ಥರನ್ನು ಸಾಕ್ಷರರನ್ನಾಗಿ ಮಾಡುವ ಕೆಲಸ ಮಹತ್ವದ್ದಾಗಿದೆ ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾಧಿಕಾರಿ ಕೃಷ್ಣ ಭಾಜಪೇಯಿ ಮಾತನಾಡಿ, ನಿಮ್ಮ ಸುತ್ತಮುತ್ತಲಿನ ಅನಕ್ಷರಸ್ಥರಿಗೆ ಅಕ್ಷರ ಕಲಿಯುವ ಹಾಗೂ ಓದುವ ಹವ್ಯಾಸ ಬೆಳೆಸಿ. ಶಿಕ್ಷಣದ ಮಹತ್ವ ಕುರಿತಂತೆ ಅವರಿಗೆ ಮನವರಿಕೆ ಮಾಡಿಕೊಡಿ. ಈ ಕೆಲಸ ಅತ್ಯಂತ ಶ್ರೇಷ್ಠ ಕಾರ್ಯವಾಗಿದೆ ಎಂದು ಹೇಳಿದರು.

ರಾಜ್ಯದಲ್ಲಿ ರೂಪಿಸಲಾದ ಸಾಕ್ಷರತಾ ಕಾರ್ಯಕ್ರಮವನ್ನು ಮೊದಲು ಕಾರ್ಯಗತಗೊಳಿಸಿದ ಜಿಲ್ಲೆ ಹಾವೇರಿ. ಈ ಜಿಲ್ಲೆ ಮುಂದಿನ ದಿನಮಾನಗಳಲ್ಲಿ ನೂರಕ್ಕೆ ನೂರರಷ್ಟು ಸಾಕ್ಷರತೆ ಸಾಧಿಸಲಿ. ಈ ಗುರಿಯೊಂದಿಗೆ ತಾವೆಲ್ಲರೂ ಕಾರ್ಯನಿರ್ವಹಿಸಿ ಎಂದು ಕರೆ ನೀಡಿದರು.

Advertisement

ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿ ಎಂ.ಎಸ್‌. ಪಾಟೀಲ, 2021ರ ವೇಳೆಗೆ ರಾಜ್ಯದ ಸಾಕ್ಷರತಾ ಪ್ರಮಾಣವನ್ನು ಶೇ.90ಕ್ಕೆ ಹೆಚ್ಚಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ನಾಲ್ಕು ಸಾಕ್ಷರತಾ ಕಾರ್ಯಕ್ರಮಗಳನ್ನು ರೂಪಿಸಿದೆ. 15 ವರ್ಷ ವಯೋಮಾನಕ್ಕಿಂತ ಹೆಚ್ಚಿನ ಗ್ರಾಮೀಣ ಪ್ರದೇಶದ ಮಹಿಳೆಯರು, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಅಲ್ಪಸಂಖ್ಯಾತರು, ನಗರ ಕೊಳಚೆ ಪ್ರದೇಶದ ಅನಕ್ಷರಸ್ಥರ ಕಲಿಗೆ ಆದ್ಯತೆ ನೀಡಿ ಕಾರ್ಯಕ್ರಮ ರೂಪಿಸಲಾಗಿದೆ.

ಬೋಧಕರು ಅನಕ್ಷರಸ್ಥರಿಗೆ ಬರಹ, ಓದು ಹಾಗೂ ಸರಳ ಲೆಕ್ಕಾಚಾರ ಕಲಿಸುವ ಮೂಲಕ ಸಾಕ್ಷರನ್ನಾಗಿ ಮಾಡಲು ಶ್ರಮಿಸಬೇಕು ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಸಾಕ್ಷರತಾ ಬೋಧಕರಿಗಾಗಿ ರೂಪಿಸಲಾದ “ಬಾಳಿಗೆ ಬೆಳಕು’ ಕೈಪಿಡಿ ಹಾಗೂ ಲೋಕ ಶಿಕ್ಷಣ ಸಂಸ್ಥೆ ಹೊರತಂದಿರುವ ವಿವಿಧ ಮಡಿಕೆಪತ್ರಗಳು ಹಾಗೂ ಪ್ರಚಾರ ಸಾಮಗ್ರಿಗಳನ್ನು ಬಿಡುಗಡೆಗೊಳಿಸಲಾಯಿತು.

ಕಾರ್ಯಕ್ರಮದಲ್ಲಿ ಜಿಪಂ ಉಪಾಧ್ಯಕ್ಷ ಗಿರಿಜಿವ್ವ ಬ್ಯಾಲದಹಳ್ಳಿ, ಜಿಪಂ ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ರಮೇಶ ದುಗ್ಗತ್ತಿ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಅಂದಾನೆಪ್ಪ ವಡಗೇರಿ, ಪರಿಸರ ತಜ್ಞೆ ಮಾಧುರಿ ದೇವಧರ, ತರಬೇತುದಾರ ಎನ್‌. ಎಸ್‌.ತುಪ್ಪದ, ವೈ.ಟಿ.ಹೆಬ್ಬಳ್ಳಿ ಹಾಗೂ ಇತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next