ಜೇವರ್ಗಿ: ಇಂದಿನ ತಾಂತ್ರಿಕ ಯುಗದಲ್ಲಿ ನಮ್ಮ ಕ್ರಿಯಾಶೀಲತೆ ಹೆಚ್ಚಿಸಿಕೊಳ್ಳಬೇಕಾದರೆ ಹಾಗೂ ಸರಕಾರದ ವಿವಿಧ ಯೋಜನೆಗಳ ಮಾಹಿತಿ ಪಡೆಯಬೇಕಾದರೆ ಕಂಪ್ಯೂಟರ್ ಶಿಕ್ಷಣ ಅಗತ್ಯವಾಗಿದೆ ಎಂದು ಪ್ರಗತಿಪರ ಚಿಂತಕ ಹಾಗೂ ಉಪನ್ಯಾಸಕ ಜೆಡ್.ಎಂ. ಜಹಾಗೀರದಾರ ಹೇಳಿದರು. ಪಟ್ಟಣದ ಸರಕಾರಿ ಪ್ರಥಮ ದರ್ಜೇ ಕಾಲೇಜಿನ ಆವರಣದಲ್ಲಿ ಸಾಹೇಬಾ ಶಿಕ್ಷಣ ಮತ್ತು ಗ್ರಾಮೀಣ ಅಭಿವೃದ್ಧಿ ಟ್ರಸ್ಟ್ ವತಿಯಿಂದ ಆಯೋಜಿಸಲಾಗಿದ್ದ ಉಚಿತ ಕಂಪ್ಯೂಟರ್ ತರಬೇತಿ ಶಿಬಿರದ ಪ್ರಮಾಣ ಪತ್ರ ವಿತರಿಸುವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಮಕ್ಕಳಲ್ಲಿ ಒಳ್ಳೆಯ ಸಂಸ್ಕಾರ ಬೆಳೆಸಬೇಕು. ಮಾನವೀಯತೆ ಇಲ್ಲದ ಶಿಕ್ಷಣ ಯಾರಿಗೂ ಬೇಡ. ಮಾನವೀಯ ಮೌಲ್ಯಗಳು ಮತ್ತು ಸೌಹಾರ್ದ ಬದುಕು ಕಲಿಸುವ ಶಿಕ್ಷಣ ಈಗ ಅಗತ್ಯವಾಗಿದೆ ಎಂದು ಹೇಳಿದರು. ಜಿಪಂ ಸದಸ್ಯ ಶಾಂತಪ್ಪ ಕೂಡಲಗಿ ಮಾತನಾಡಿ, ವಿದ್ಯಾರ್ಥಿಗಳು ಜೀವನದಲ್ಲಿ ಶಿಸ್ತು ರೂಢಿಸಿಕೊಳ್ಳಬೇಕು ಮತ್ತು ದೇಶದ ಏಕತೆ ಹಾಗೂ ಸಮಗ್ರತೆಗೆ ಶ್ರಮಿಸಬೇಕು ಎಂದು ಕರೆ ನೀಡಿದರು. ಅಧ್ಯಕ್ಷತೆ ವಹಿಸಿದ್ದ ಸಾಹೇಬಾ ಶಿಕ್ಷಣ ಮತ್ತು ಗ್ರಾಮೀಣ ಅಭಿವೃದ್ಧಿ ಟ್ರಸ್ಟ್ ಅಧ್ಯಕ್ಷ ಶೌಕತ್ ಅಲಿ ಆಲೂರ ಮಾತನಾಡಿ, ಸಾಹೇಬಾ ಟ್ರಸ್ಟ್ ಯಾವುದೇ ಆಸೆಗಳಿಗಾಗಿ ಹುಟ್ಟಿಕೊಂಡಿಲ್ಲ. ಶಿಕ್ಷಣದಿಂದ ವಂಚಿತರಾದ ಮಕ್ಕಳಿಗೆ ಶಿಕ್ಷಣ ನೀಡುವ ಮಹತ್ವದ ಗುರಿ ಹೊಂದಿದೆ. ಮುಂದಿನ ದಿನಗಳಲ್ಲಿ ಕೌಶಲ ಆಧಾರಿತ ತರಬೇತಿಗಳು ಮತ್ತು ಗ್ರಾಮೀಣ ಪ್ರದೇಶದ ಜನರ ಜೀವನಾಡಿಯಾಗಿ ಟ್ರಸ್ಟ್ ಕಾರ್ಯನಿರ್ವಹಿಸಲಿದೆ ಎಂದು ಹೇಳಿದರು. ಯಡ್ರಾಮಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರುಕುಂ ಪಟೇಲ ಇಜೇರಿ, ಕಾಲೇಜಿನ ಪ್ರಾಚಾರ್ಯ ಬಸವರಾಜ ಕೊಂಬಿನ್, ಡಾ| ಕರಿಗೂಳೇಶ್ವರ, ಗುಡುಲಾಲ ಶೇಖ್, ಮಹಿಬೂಬಸಾಬ್ ಕೆಂಬಾವಿ, ನಾಗೇಂದ್ರ ಚನ್ನೂರ, ಕಾಶಿಂಸಾಬ ಕೂಡಿ, ಬೈಲಪ್ಪ ಸೊನ್ನ, ಶಕೀಲ್ ಪಟೇಲ ಭಾಗವಹಿಸಿದ್ದರು.