Advertisement

ಪುಸ್ತಕ ಪ್ರೀತಿಗೆ ಕಡ್ಡಾಯ ಓದುವಿಕೆ ಇಂದಿನ ಅಗತ್ಯ

01:05 PM Oct 03, 2018 | |

. ಬೆಳೆಯುತ್ತಿರುವ ತಂತ್ರಜ್ಞಾನದಿಂದಾಗಿ ಗ್ರಂಥಾಲಯದಿಂದ ಜನರು ದೂರ ಸರಿಯುತ್ತಿದ್ದಾರೆ ಎಂಬ ಆರೋಪವಿದೆಯಲ್ಲ?
ತಂತ್ರಜ್ಞಾನಗಳ ಬಳಕೆ ಹೆಚ್ಚುತ್ತಿದ್ದಂತೆ ಜನರು ಗ್ರಂಥಾಲಯದಿಂದ ದೂರ ಸರಿಯುತ್ತಿರುವುದು ನಿಜ. ಇದಕ್ಕೆ ಮುಖ್ಯ ಕಾರಣ ಪ್ರಾಥಮಿಕ ಹಂತದಲ್ಲಿಯೇ ಮಕ್ಕಳಿಗೆ ಓದಿನ ಅಭಿರುಚಿಯನ್ನು ಕಲಿಸಿಕೊಡದಿರುವುದು. ಎಳವೆಯಲ್ಲಿಯೇ ಪುಸ್ತಕಗಳ ಓದುವಿಕೆಗೆ ಪ್ರೇರಣೆ ಮತ್ತು ಪ್ರೋತ್ಸಾಹ ನೀಡಿದಲ್ಲಿ ಮಕ್ಕಳನ್ನು ಓದಿನತ್ತ ಕರೆ ತರುವುದು ಸಾಧ್ಯವಿದೆ.

Advertisement

. ಡಿಜಿಟಲೀಕರಣದಿಂದಾಗಿ ಯುವಕರಲ್ಲಿ ಓದುವ ಆಸಕ್ತಿ ಕಡಿಮೆಯಾಗುತ್ತಿದೆ ಎಂದೆನಿಸುತ್ತಿದೆಯೇ?
ಡಿಜಿಟಲೀಕರಣವು ಓದಿನ ಆಸಕ್ತಿಯನ್ನು ಸಂಪೂರ್ಣ ಕಡಿಮೆ ಮಾಡುತ್ತಿದೆ ಎನ್ನಲಾಗದು. ನನ್ನ ಮೂವತ್ತು ವರ್ಷದ ಸೇವಾವಧಿಯಲ್ಲಿ ಮಕ್ಕಳಲ್ಲಿ ಓದಿನ ಆಸಕ್ತಿ ಅಷ್ಟೇನೂ ಕಡಿಮೆ ಆಗಿಲ್ಲ. ಪುಸ್ತಕಗಳ ಕಡ್ಡಾಯ ಓದುವಿಕೆಯಿಂದ ಡಿಜಿಟಲ್‌ ಆಗಲಿ, ತಂತ್ರಜ್ಞಾನಗಳ ಯುಗವಾಗಲಿ, ಮಕ್ಕಳು ಪುಸ್ತಕಗಳಿಂದ ವಿಮುಖರಾಗದಂತೆ ನೋಡಿಕೊಳ್ಳಲು ಸಹಕಾರಿಯಾಗುತ್ತದೆ.

. ಗ್ರಂಥಾಲಯದತ್ತ ಯುವ ಜನರನ್ನು ಆಕರ್ಷಿಸಲು ಏನು ಮಾಡಬಹುದು?ಯಾವುದೇ ಆಸಕ್ತಿ ಜನ್ಮ ತಳೆಯುವುದು ಬಾಲ್ಯದಲ್ಲೇ. ಈಗ ಮಕ್ಕಳಿಗೆ ಕಥೆ ಹೇಳುವ ಪರಿಕಲ್ಪನೆಗಳಿಲ್ಲ. ಏನಿದ್ದರೂ ಗೂಗಲ್‌ ಸರ್ಚ್‌. ಆದರೆ ಗೂಗಲ್‌ ಪ್ರಾಥಮಿಕ ಮೂಲ ಅಲ್ಲ ಎನ್ನುವುದನ್ನು ವಿದ್ಯಾರ್ಥಿಗಳು ತಿಳಿದುಕೊಳ್ಳಬೇಕು. ಯಾವುದೇ ಅಸೈನ್‌ಮೆಂಟ್‌ ಗಳನ್ನು ನೀಡಿದಾಗಲೂ, ಪುಟ ಸಮೇತ ಆಕರ ಗ್ರಂಥಗಳ ಬಗ್ಗೆ ಬರೆಯಲು ಕಡ್ಡಾಯ ಮಾಡಬೇಕು. ಇದರಿಂದ ಗ್ರಂಥಾಲಯದತ್ತ ಬರುವವರ ಸಂಖ್ಯೆ ಹೆಚ್ಚುತ್ತದೆ.

. ಗ್ರಂಥಾಲಯ ವಿಜ್ಞಾನ ಕಲಿಕೆ ಮತ್ತು ಉದ್ಯೋಗಾವಕಾಶ ಹೇಗಿದೆ?
ಎಂಎಲ್‌ಐಎಸ್‌ (ಮಾಸ್ಟರ್‌ ಆಫ್‌ ಲೈಬ್ರರಿ ಆ್ಯಂಡ್‌ ಇನ್‌ಫಾರ್ಮೇಶನ್‌ ಸೈನ್ಸ್‌), ಡಿಆರ್‌ಪಿಸಿನಂತಹ ಸ್ನಾತಕೋತ್ತರ ಪದವಿ ಅಭ್ಯಾಸ ಮಾಡಿದರೆ ಉತ್ತಮ ಉದ್ಯೋಗಾವಕಾಶಗಳಿವೆ. ಎಂಲಿಬ್‌ ಕಲಿತರೆ ಸಹಾಯಕ ಪ್ರಾಧ್ಯಾಪಕರ ಗ್ರೇಡ್‌ನ‌ಲ್ಲೇ ಸಂಬಳ ದೊರೆಯುತ್ತದೆ. ಆದರೆ ಗ್ರಂಥಾಲಯ ಪಾಲಕರು, ಅಧಿಕಾರಿಗಳಿಗಿರುವ ಸವಲತ್ತು, ವೇತನ ಹಾಗೂ ಈ ಕೋರ್ಸ್‌ಗಳ ಬಗ್ಗೆ ಅಷ್ಟೊಂದು ಮಾಹಿತಿ ಇಲ್ಲದ ಕಾರಣ, ವಿದ್ಯಾರ್ಥಿಗಳು ಇದರತ್ತ ಬರಲು ಹೆಚ್ಚು ಆಸಕ್ತಿ ತೋರಿಸುವುದಿಲ್ಲ. 

ಮಾದರಿ ಗ್ರಂಥಾಲಯದ ಕಲ್ಪನೆ ಹೇಗಿರಬೇಕು?
ಮಾದರಿ ಗ್ರಂಥಾಲಯ ಆಕರ್ಷಣೀಯವಾಗಿರಬೇಕು. ಓದಿಗೆ ಪೂರಕವಾದ ಪರಿಸರ, ಪರಿಶುದ್ಧ ಗಾಳಿ, ಬೆಳಕಿನ ವ್ಯವಸ್ಥೆ, ಉತ್ತಮ ಆಸನ ವ್ಯವಸ್ಥೆ ಮುಂತಾದವುಗಳೊಂದಿಗೆ ಓದುಗ ಸ್ನೇಹಿ ವಾತಾವರಣವನ್ನು ಕಲ್ಪಿಸಿಕೊಟ್ಟರೆ ಅದನ್ನು ಮಾದರಿ ಗ್ರಂಥಾಲಯ ಎನ್ನಬಹುದು. ಗ್ರಂಥಪಾಲಕರ ಜವಾಬ್ದಾರಿ ಈ ನಿಟ್ಟಿನಲ್ಲಿ ಹೆಚ್ಚಿದ್ದು, ಓದುಗರಿಗೆ ಸರಿಯಾದ ವ್ಯವಸ್ಥೆ ಕಲ್ಪಿಸಿಕೊಡಬೇಕು.

Advertisement

 ಧನ್ಯಾ ಬಾಳೆಕಜೆ

Advertisement

Udayavani is now on Telegram. Click here to join our channel and stay updated with the latest news.

Next