Advertisement

ಇಸ್ರೋದಿಂದ ಭೂಮಂಡಲದ ಸಮಗ್ರ ಅಧ್ಯಯನ

09:07 AM Jul 21, 2019 | Suhan S |

ಧಾರವಾಡ: ಭೂಮಂಡಲದ ಮೇಲಿನ ಹಿಮಾಲಯ, ಮರಭೂಮಿ, ಸಮುದ್ರ, ಪರ್ವತ ಶ್ರೇಣಿಯ ಅಧ್ಯಯನ ಮಾಡುತ್ತಿದ್ದು, ಅದಕ್ಕಾಗಿ 11 ಸ್ಯಾಟ್ಲೈಟ್ ಇಸ್ರೋ ನಭಕ್ಕೆ ಹಾರಿಸಿದ್ದು ಸಮಗ್ರ ಮಾಹಿತಿ ಸಂಗ್ರಹಿಸಲು ಪ್ರಯತ್ನಿಸುತ್ತಿದ್ದೇವೆ ಎಂದು ಇಸ್ರೋ ವಿಪತ್ತು ನಿರ್ವಹಣೆ ವಿಭಾಗದ ವಿಜ್ಞಾನಿ ಡಾ| ಪಿ.ಜಿ.ದಿವಾಕರ್‌ ಹೇಳಿದರು.

Advertisement

ನಗರದ ಸನ್ನಿಧಿ ಸಭಾಭವನದಲ್ಲಿ ವಿದ್ಯಾ ಪಿ. ಹಂಚಿನಮನಿ ಕಾಲೇಜಿನ ವಿದ್ಯಾರ್ಥಿಗಳ ಸಂಘ, ಕ್ರೀಡಾ ಹಾಗೂ ಸಾಂಸ್ಕೃತಿಕ ವಿಭಾಗಗಳ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.

ಕೃಷಿಯಿಂದ ಪ್ರತಿ ವರ್ಷ ಎಷ್ಟು ಆಹಾರ ಉತ್ಪಾದನೆಯಾಗುತ್ತಿದೆ. ಯಾವೆಲ್ಲ ಧಾನ್ಯಗಳು ಮಾರುಕಟ್ಟೆಗೆ ಲಭಿಸಬಹುದು ಎಂಬುದರ ಬಗ್ಗೆ ಮಾಹಿತಿ ಸಂಗ್ರಹಿಸಲು ಸ್ಯಾಟ್ಲೈಟ್ ಲಾಂಚ್ ಮಾಡಲಾಗಿದೆ. ಆಹಾರ ಪದಾರ್ಥ ಸಿದ್ಧವಾಗುವ ಒಂದು ತಿಂಗಳ ಮುಂಚೆಯೇ ಮಾಹಿತಿ ಸಂಗ್ರಹಿಸಿ ಕೇಂದ್ರ ಸರಕಾರಕ್ಕೆ ನೀಡುತ್ತೇವೆ. ಅದೇ ರೀತಿ ಅರಣ್ಯ ಪ್ರದೇಶ ಮೇಲೂ ಕಣ್ಣಿಟ್ಟಿದ್ದೇವೆ. ಅಗ್ನಿ ದುರಂತ, ಸುನಾಮಿ ಬಗ್ಗೆಯೂ ನಿಗಾ ವಹಿಸಿ ಮುಂಚಿತವಾಗಿಯೇ ಎಚ್ಚರಿಸುವ ಕೆಲಸ ಮಾಡುತ್ತೇವೆ ಎಂದರು.

13 ರಾಜ್ಯದ ಮೀನುಗಾರಿಕೆ ಮೇಲೆ ವಿಶೇಷ ಸ್ಯಾಟ್ಲೈಟ್ ಲಾಂಚ್ ಮಾಡಿ ಮೀನುಗಾರರಿಗೆ ಹೆಚ್ಚು ಮೀನು ಸಿಗುವ ಸ್ಥಳ ಕುರಿತು ಮಾಹಿತಿ ನೀಡಲಾಗುತ್ತದೆ. ರಸ್ತೆ ಮೇಲೆ ಜಿಪಿಎಸ್‌ ಅಳವಡಿಸಿದ ಹಾಗೆ ಸಮುದ್ರ ಮೇಲೂ ನಿಗಾ ವಹಿಸಲಾಗಿದೆ. ಜನರ ಜೀವನಮಟ್ಟ ಸುಧಾರಣೆಗೆ ಶ್ರಮಿಸುತ್ತಿದೆ. ಕುಡಿಯುವ ನೀರಿನ ಕೊರತೆ ನಿವಾರಿಸುವ ಪ್ರಾಮಾಣಿಕ ಪ್ರಯತ್ನ ನಡೆಯುತ್ತಿದೆ. ಅದೇ ರೀತಿ ಅಂತರ್ಜಲ ಮಟ್ಟವೂ ಕಡಿಮೆ ಆಗಿರುವ ಬಗ್ಗೆ ಎಚ್ಚರಿಕೆ ನೀಡಲಾಗಿದೆ ಎಂದರು.

ವಿವಿಧ ಆಯಾಮ ಮೂಲಕ ಇಸ್ರೋ ದೇಶಕ್ಕೆ ನೆರವು ನೀಡುತ್ತಿದೆ. ಇಸ್ರೋ ಸಂಸ್ಥೆಯು ವಿಜ್ಞಾನ-ತಂತಜ್ಞಾನ ಸಮರ್ಥವಾಗಿ ಬಳಸಿಕೊಂಡು ಸಾಕಷ್ಟು ದೊಡ್ಡ ಪ್ರಮಾಣದಲ್ಲಿ ಸಾಧನೆ ಮಾಡಿದೆ. ವಿದೇಶದ 300ಕ್ಕೂ ಹೆಚ್ಚು ಸ್ಯಾಟ್ಲೈಟ್‌ಗಳನ್ನು ಇಸ್ರೋ ಉಡಾವಣೆ ಮಾಡಿರುವುದು ಹೆಮ್ಮೆಯ ಸಂಗತಿ ಎಂದರು.

Advertisement

ಜಾಗತಿಕ ತಾಪಮಾನ, ಸೈಕ್ಲೋನ್‌, ಸುನಾಮಿ ಕುರಿತು ಮಾಹಿತಿ ಸಂಗ್ರಹಿಸಿ ಈ ಕುರಿತು ಮುಂಚಿತವಾಗಿ ಮಾಹಿತಿ ಒದಗಿಸುತ್ತಿದ್ದೇವೆ. ಆ ಮೂಲಕ ಲಕ್ಷಾಂತರ ಜನರ ಜೀವ ರಕ್ಷಿಸಲು ವಿಪತ್ತಿನ ನಿರ್ವಹಣೆಯನ್ನು ಇಸ್ರೋ ಮಾಡುತ್ತಿದೆ. ತಕ್ಷಣ ಸಂಬಂಧಿಸಿದ ಜಿಲ್ಲಾಡಳಿತಕ್ಕೆ ಮಾಹಿತಿ ರವಾನಿಸಿ ಜನ-ಜಾನುವಾರುಗಳ ಸ್ಥಳಾಂತರದಿಂದ ಜೀವ ಉಳಿಸುವ ಕೆಲಸ ಮಾಡಿರುವ ಸಮಾಧಾನವಿದೆ ಎಂದರು.

ಇಸ್ರೋ ವಿಶ್ವದ ಐದು ಪ್ರಮುಖ ಕೇಂದ್ರಗಳಲ್ಲಿ ಒಂದಾಗಿದೆ. ಚಂದ್ರಯಾನ ಯಶಸ್ಸಿಗೆ ಶ್ರಮಿಸುತ್ತಿವೆ. ಎಲ್ಲರೂ ಕೂಡಿ ಒಟ್ಟಿಗೆ ಪ್ರಯತ್ನಿಸುತ್ತಿದ್ದೇವೆ. ಕನಸು ನನಸು ಮಾಡಲು ಕಠಿಣ ಪರಿಶ್ರಮ ಬೇಕು. ನಾವು ತಂತ್ರಜ್ಞಾನದಲ್ಲಿ ಸಾಕಷ್ಟು ಮುಂದುವರಿದಿದ್ದೇವೆ. ಎರಡು ಟನ್‌, ನಾಲ್ಕು ಟನ್‌ ಸ್ಯಾಟ್ಲೈಟ್ ಲಾಂಚ್ ಮಾಡಿದ್ದೇವೆ. ಕಲಿತು ಕಡಿಮೆ ಸಮಯದಲ್ಲಿ ಸಾಧನೆ ಮಾಡಿದ ಗರಿಮೆ ಇಸ್ರೋಗೆ ಸಲ್ಲುತ್ತದೆ ಎಂದರು.

ತಂತಜ್ಞಾನದಿಂದ ಜೀವನ ಸರಳವಾಗಿದೆ. ಸುಂದರವಾಗಿದೆ. ಅದರ ಯಶಸ್ಸು ಮುಂದಿನ ದಿನಗಳಲ್ಲಿ ಮಕ್ಕಳ ಕೈಯಲ್ಲಿದೆ. ಅದನ್ನು ಇನ್ನಷ್ಟು ಯಶಸ್ವಿಗೊಳಿಸಲು ಇಸ್ರೋ ಸಂಸ್ಥೆಯತ್ತ ಹೆಜ್ಜೆ ಹಾಕಬೇಕು, ವಿಜ್ಞಾನಿಗಳಾಗಿ ದೇಶಕ್ಕೆ ಮರಳಿ ಕೊಡುಗೆ ನೀಡುವಂತಾಗಬೇಕು. ನನ್ನ ಕಡೆಯಿಂದ ದೇಶಕ್ಕೆ ಏನು ಮಾಡಬೇಕೆಂದು ಯೋಚಿಸಿ ವಿಜ್ಞಾನ ಕುರಿತು ಆಳವಾಗಿ ಓದಿ ಆನಂತರ ಮರಳಿ ಅದನ್ನು ದೇಶಕ್ಕೆ ಕೊಡುವ ಕೆಲಸ ನಿಮ್ಮಿಂದಾಗಲಿ ಎಂದರು.

ಓಜೋನ್‌ ಪದರದ ಮೇಲೆ ಹಾನಿಯಾಗದಂತೆ ರಕ್ಷಿಸಲು ನಾವೆಲ್ಲರೂ ಪ್ರಾಮಾಣಿಕ ಪ್ರಯತ್ನ ಮಾಡಬೇಕಿದೆ. ಭೂಮಿಯಂತಹ ಸ್ಥಳ ಬೇರೆ ಯಾವುದೂ ಸಿಗಲ್ಲ, ಅದನ್ನು ಕಾಪಾಡಲು ಪರಿಸರ ಸ್ವಚ್ಛತೆ ಉಳಿಸಿಕೊಳ್ಳಬೇಕಿದೆ ಎಂದರು.

ಕಾಲೇಜಿನ ಪ್ರಾಚಾರ್ಯ ಡಾ|ಎಸ್‌.ಎ.ಜೋಶಿ ಅಧ್ಯಕ್ಷತೆ ವಹಿಸಿದ್ದರು. ಶಾಂತೇಶ ಎಜ್ಯುಕೇಷನ್‌ ಸೊಸೈಟಿ ಕಾರ್ಯಾಧ್ಯಕ್ಷ ಪ್ರೊ|ಪಿ.ಆರ್‌. ಹಂಚಿನಮನಿ, ಮನೋಜ ಹಂಚಿನಮನಿ, ವಿದ್ಯಾರ್ಥಿ ಪ್ರತಿನಿಧಿಗಳಾದ ಪ್ರೇರಣಾ ನಾಡಗೌಡರ, ಅವಿನಾಶ ಹೆಗಡೆ, ಪ್ರದೀಪ ಚೌಗಲಾ ಇದ್ದರು. ಗಣೇಶ ಪ್ರಾರ್ಥಿಸಿದರು. ಅಂಕಿತಾ ಮತ್ತು ವಿಂದ್ಯಾ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next