Advertisement
ಸ್ವಸ್ಥ, ಸಮೃದ್ಧ ಆರೋಗ್ಯವಂತ ಸಮಾಜ ನಿರ್ಮಾ ಣವನ್ನು ಗುರಿಯಾಗಿರಿಸಿಕೊಂಡು ನೋಡಿದಾಗ, ಯಾವುದೇ ಚಿಕಿತ್ಸಾ ಪದ್ಧತಿ ಇರಲಿ ಅದರಲ್ಲಿನ ಒಳಿತನ್ನು ಬಳಸಿ ಕೆಡುಕನ್ನು ನಿವಾರಿಸಿ ಮುನ್ನಡೆಯಬೇಕಾದುದು ಇಂದಿನ ಅನಿವಾರ್ಯ ಮತ್ತು ಅಗತ್ಯ. ಹಿಂದಿನ ಕಾಲದಲ್ಲಿ ಒಂದು ಪ್ರದೇಶಕ್ಕೆ ಸೀಮಿತವಾಗಿದ್ದ ರೋಗ ಗಳು ಕೂಡ, ಇಂದು ಜಾಗತೀಕರಣದ ಪರಿಣಾಮದಿಂದ ವಿಶ್ವವ್ಯಾಪಿಯಾಗುತ್ತಿರುವುದನ್ನು ನಾವು ಕಾಣಬಹುದು. ವಿಶ್ವಾದ್ಯಂತ ವಿಶಿಷ್ಟ ಸಂಸ್ಕೃತಿ, ಸಂಪ್ರದಾಯಗಳು, ಜೀವನ ಪದ್ಧತಿಗಳು ಒಂದಕ್ಕೊಂದು ಬೆರೆತು ಹೋಗಿ ರುವ ಈ ಕಾಲಮಾನದಲ್ಲಿ ರೋಗರುಜಿನಗಳು ಕೂಡ ವಿಶಿಷ್ಟವಾಗಿಯೇ ವಕ್ಕರಿಸುತ್ತಿವೆ. ಇದೇ ಕಾರಣದಿಂದ ತಮ್ಮದೇ ಪ್ರದೇಶಗಳಿಗೆ ಮಾತ್ರ ಸೀಮಿತ ವಾಗಿದ್ದ ವೈದ್ಯ ಪದ್ಧತಿಗಳು, ಈಗ ಒಂದಕ್ಕೊಂದು ಬೆರೆತು ಒಂದುಗೂಡಿ ಸುಸ್ಪಷ್ಟ, ಸಮಗ್ರ ವೈದ್ಯಕೀಯ ಪದ್ಧತಿಯೊಂದು ರೂಪುಗೊಳ್ಳಬೇಕಿದೆ.
Related Articles
Advertisement
ಆಯುರ್ವೇದ, ಹೋಮಿಯೋಪತಿ ಮುಖೇನ ಸುಲಭವಾಗಿ ಗುಣಪಡಿಸಬಹುದಾದ ಕೆಲವು ರೋಗಗಳನ್ನು, ಕ್ಲಿಷ್ಟಕರ ರಾಸಾಯನಿಕಯುಕ್ತ ಮದ್ದು ಅಥವಾ ಸರ್ಜರಿಗೆ ಒಳಪಡಿಸಿ, ರೋಗಿ ನರಳುವಂತಹ, ಹಣ ಕಳೆದುಕೊಂಡಂತಹ ಉದಾಹರಣೆಗಳು ನಮ್ಮ ಕಣ್ಣ ಮುಂದಿವೆ. ಭಾರತೀಯ ಅಥವಾ ಪುರಾತನ ಎನ್ನುವುದು ಅವೈಜ್ಞಾನಿಕ ಮತ್ತು ವಿದೇಶದಿಂದ ಬಂದಿ ರುವಂತದ್ದು ಮಾತ್ರ ಶ್ರೇಷ್ಠ ಮತ್ತು ವೈಜ್ಞಾನಿಕ ಎಂಬ ತಪ್ಪು ಭಾವನೆಗಳೇ ಇದಕ್ಕೆ ಕಾರಣ. ಪುರಾತನ ಅಥವಾ ಭಾರತೀಯ ವೈದ್ಯ ಪದ್ಧತಿಯಲ್ಲಿನ ವಿಜ್ಞಾನವನ್ನು ಸ್ಪಷ್ಟವಾಗಿ ಸರಳೀಕರಣಗೊಳಿಸಿ, ಒಂದು ನಿರ್ದಿಷ್ಟ ರೂಪರೇಖೆಯನ್ನು ನಾವು ಮತ್ತು ನಮ್ಮ ಹಿರಿಯರು ನಿರ್ಮಿಸದಿರುವುದು ಇದಕ್ಕೆ ಕಾರಣವಲ್ಲವೇ? “ಗುಬ್ಬಿಯ ಮೇಲೆ ಬ್ರಹ್ಮಾಸ್ತ್ರ ‘ ಎಂಬಂತೆ ಸಣ್ಣ ಪುಟ್ಟ ಕಾಯಿಲೆಗಳಿಗೆ ರಾಸಾಯನಿಕಗಳಿಂದ, ಶಸ್ತ್ರಚಿಕಿತ್ಸೆಯಿಂದ ನೊಂದಿರುವ ಸಾಕಷ್ಟು ಮಂದಿ ನಮ್ಮ ಮುಂದೆ ಇದ್ದಾರೆ.
ಅದೇ ರೀತಿಯಲ್ಲಿ ತಮ್ಮದೆನ್ನುವ ವೈದ್ಯಕೀಯ ಪದ್ಧತಿಯಲ್ಲಿ ಸ್ಪಷ್ಟತೆ ಇಲ್ಲದೆ ನರಳುತ್ತಿರುವ ಕೆಲವು ಆಯುರ್ವೇದ ವೈದ್ಯರು, ಸುಲಭ ದಾರಿ ಎನ್ನುವಂತೆ ಅಲೋಪತಿ ಪದ್ಧತಿಯನ್ನು ಅಡ್ಡ ಸಂಪಾದನೆಯ ಮಾರ್ಗವಾಗಿ ಕದ್ದುಮುಚ್ಚಿ, ಅರೆಬರೆ ಅನುಸರಿಸಿ ರೋಗಿಗಳನ್ನು ಅಪಾಯಕ್ಕೆ, ಗೊಂದಲಕ್ಕೆ ದೂಡುವುದನ್ನು ಇಂದು ಕಾಣಬಹುದು. ಇಂತಹ ವೈದ್ಯರು, ವೈದ್ಯಕೀಯ ಸಂಸ್ಥೆಗಳು ಸ್ಪಷ್ಟವಾದ ಸಂಶೋಧನೆಯೊಂದಿಗೆ ರೋಗ ಮತ್ತು ಪರಿಹಾರಕ್ಕೆ ನೇರಾನೇರ ಹೊಂದಾಣಿಕೆಯಾಗುವಂತೆ ಸಾಕ್ಷ್ಯಾಧಾರಿತ ರೂಪರೇಖೆಗಳೊಂದಿಗೆ ಸಂಶೋಧನೆಗಳನ್ನು ಮಾಡಿ, ದಾಖಲೀಕರಣ ಮಾಡಿದ್ದರೆ ಇಂದು ಆಯುರ್ವೇದ ಇನ್ನಷ್ಟು ಶ್ರೇಷ್ಠವಾಗುತ್ತಿತ್ತು. ಇಂದು ಹಲವು ಆಧುನಿಕ ಕಾಯಿಲೆಗಳಿಗೆ ಆಯುರ್ವೇದದಲ್ಲಿ ಮದ್ದು ಇಲ್ಲದೆ ಇರುವುದು ಕೂಡ ತಂತ್ರಜ್ಞಾನದ ಕೊರತೆಯಿಂದ.
ಹಾಗೆಯೇ ಅಲೋಪತಿ ವೈದ್ಯರು ಕೂಡ ನೀವು ಆಯುರ್ವೇದ ಮದ್ದು ಮಾಡಿ, ಸ್ವಲ್ಪ ಯೋಗ ಮಾಡಿ, ಧ್ಯಾನ ಮಾಡಿ ಅಥವಾ ಇದಕ್ಕೆ ನಿಮಗೆ ಹೋಮಿಯೋಪತಿಯಲ್ಲಿ ಪರಿಹಾರ ಸಿಗಬಹುದು – ಇತ್ಯಾದಿ ಸಲಹೆಗಳನ್ನು ಕೊಡುವುದು ಗುಟ್ಟಾಗಿ ಉಳಿದಿಲ್ಲ.ಕೊರೊನಾ, ಡೆಂಗ್ಯೂ, ಜಾಂಡಿಸ್ ಬಂದಾಗ ಆಯುರ್ವೇದದ ಮೊರೆ ಹೋದದ್ದು, ಚಿಕೂನ್‌ಗುನ್ಯಾ ಬಂದಾಗ ಅಲೋಪತಿಯೂ ಹೋಮಿಯೋಪತಿಗೆ ಶರಣಾದದ್ದು, ಮಲೇರಿಯಾದಂತಹ ಕಾಯಿಲೆ ಬಂದಾಗ ಆಯುರ್ವೇದದವರು ಅಲೋಪತಿಯತ್ತ ದಾರಿ ತೋರಿಸುವುದು ಕೂಡ ಸುಳ್ಳಲ್ಲ. ಕೊನೆಗೆ ಎಲ್ಲಿಯೂ ಪರಿಹಾರ ಕಾಣದೇ ರೋಗಿಗಳು ಯೋಗ, ಧ್ಯಾನ ತಜ್ಞರನ್ನು ಕಂಡು ಚೇತರಿಸಿಕೊಂಡಿರುವುದು ಕೂಡ ಸುಳ್ಳಲ್ಲ. ಇವಲ್ಲದೆ ಹಲವಾರು ರೋಗಿಗಳು ವಿವಿಧ ಪದ್ಧತಿಗಳಿಂದ ಚಿಕಿತ್ಸೆಯನ್ನು ಪಡೆದು, ತಮ್ಮಷ್ಟಕ್ಕೆ ತಾವೇ ಫಲಿತಾಂಶ ಕಂಡು ಗುಣಮುಖರಾದ ಹಲವಾರು ನಿದರ್ಶನಗಳಿವೆ. ರೋಗಿಯ ಮಟ್ಟದಲ್ಲಿಯೇ ಉಳಿದುಹೋಗುವ ಈ ರೀತಿಯ ಪ್ರಯೋಗಗಳು, ದಾಖಲೀಕರಣಗೊಳ್ಳದೆ ಮುಂದೆ ಯಾರಿಗೂ ಅದರ ಪ್ರಯೋಜನ ಸಿಗುವುದಿಲ್ಲ. ಎಕ್ಸರೇ, ಎಂಆರ್‌ಐ, ಸಿಟಿ ಸ್ಕ್ಯಾನ್ ಇತ್ಯಾದಿ ರೋಗಪತ್ತೆ ವಿಧಾನಗಳನ್ನು ಎಲ್ಲ ತಜ್ಞರು ಕಲಿತು ಬಳಸುವಂತಾಗಿ, ಸೂಕ್ತ ಪದ್ಧತಿಯ ಚಿಕಿತ್ಸೆಗೆ ಮಾರ್ಗದರ್ಶನ ನೀಡುವಂತಹ ವೈದ್ಯಕೀಯ ಕೋರ್ಸ್‌ಗಳು ಇಂದಿನ ಅಗತ್ಯ. ಹಾಗಾದಾಗ ವಿವಿಧ ವೈದ್ಯಕೀಯ ಪದ್ಧತಿಗಳ ಮುಸುಕಿನ ಗುದ್ದಾಟ, ಆರೋಪ-ಪ್ರತ್ಯಾರೋಪ ಕೊನೆಗೊಂಡು ರೋಗಿಯ ಆರೋಗ್ಯ ಸುಧಾರಣೆ ಹಾಗೂ ವೈದ್ಯಲೋಕದ ಉದ್ದೇಶ ಮತ್ತು ಆಶಯ ಈಡೇರುವುದು ಸುಲಭಸಾಧ್ಯ. – ಡಾ|ಆಕಾಶ್ ರಾಜ್ ಜೈನ್, ಉಡುಪಿ