Advertisement

CID: ಬೆರಳ ತುದಿಯಲ್ಲಿ ಸಿಐಡಿ ಪ್ರಕರಣಗಳ ಸಮಗ್ರ ಮಾಹಿತಿ

10:52 PM Sep 10, 2023 | Team Udayavani |

ಬೆಂಗಳೂರು: ರಾಜ್ಯ ಸರಕಾರದಿಂದ ಶಿಫಾರಸುಗೊಂಡ ಪ್ರಕರಣಗಳ ಸಮಗ್ರ ಮಾಹಿತಿಯನ್ನು ಬೆರಳ ತುದಿಯಲ್ಲಿ ಪಡೆಯಲು ರಾಜ್ಯ ಅಪರಾಧ ತನಿಖಾ ಇಲಾಖೆ (ಸಿಐಡಿ) ಡಿಜಿಟಲ್‌ ತಂತ್ರಜ್ಞಾನದ ಮೊರೆ ಹೋಗಿದ್ದು, ಕೇಸ್‌ ಮ್ಯಾನೇಜ್‌ಮೆಂಟ್‌ ಸಿಸ್ಟ್‌ಂ (ಸಿಎಂಎಸ್‌) ಎಂಬ ನೂತನ ಆ್ಯಪ್‌ ಅನ್ನು ಆವಿಷ್ಕರಿಸಿಕೊಂಡಿದೆ.

Advertisement

ಪೊಲೀಸ್‌ ಸುಪರ್ದಿಯಲ್ಲಿ ನಡೆಯುವ ಕಸ್ಟಡಿ ಸಾವುಗಳು, ಗಂಭೀರ ಸ್ವರೂಪದ ಕೊಲೆಗಳು, ಆರ್ಥಿಕ ಅಪರಾಧಗಳು, ಪರೀಕ್ಷಾ ಅಕ್ರಮ ಹಗರಣ, ಮಾನವ ಕಳ್ಳಸಾಗಣೆ, ಭಾರೀ ಪ್ರಮಾಣದ ಸೈಬರ್‌ ವಂಚನೆ ಸೇರಿ ರಾಜ್ಯ ಸರಕಾರದಿಂದ ಶಿಫಾರಸು ಆಗುವ ಎಲ್ಲ ಮಾದರಿಯ ಸಾವಿರಾರು ಪ್ರಕರಣಗಳನ್ನು ಸಿಐಡಿ ತನಿಖೆ ನಡೆಸುತ್ತದೆ. ಈ ಪ್ರಕರಣಗಳ ಮಾಹಿತಿ ಪಡೆಯಲು ಹಿರಿಯ ಅಧಿಕಾರಿಗಳು, ಆಗಾಗ್ಗೆ ತನಿಖಾಧಿಕಾರಿ ಅಥವಾ ವಿಭಾಗದ ಮುಖ್ಯಸ್ಥರನ್ನು ಕರೆದು ನೇರವಾಗಿ ಮಾಹಿತಿ ಪಡೆಯಬೇಕಿತ್ತು. ಆದರೆ ಸಿಎಂಎಸ್‌ ಆ್ಯಪ್‌ನಿಂದ ಈ ಒತ್ತಡ ತಪ್ಪಿದಂತಾಗಿದ್ದು, ಬೆರಳ ತುದಿಯಲ್ಲೇ ಎಲ್ಲ ಮಾಹಿತಿ ಪಡೆಯಬಹುದಾಗಿದೆ. ಈ ಆ್ಯಪ್‌ ಸಿಐಡಿಯ ಕೆಲ ಹಂತದ ಅಧಿಕಾರಿಗಳಿಗೆ ಮಾತ್ರ ಲಭ್ಯವಿದ್ದು, ಯೂಸರ್‌ ನೇಮ್‌ ಮತ್ತು ಪಾಸ್‌ವರ್ಡ್‌ ನೀಡಲಾಗಿದೆ.

ಸಿಎಂಎಸ್‌ನಲ್ಲಿ ಏನಿರಲಿದೆ?
ಪ್ರಕರಣ ಯಾವಾಗ, ಎಲ್ಲಿ, ಯಾವ ಠಾಣೆಯಲ್ಲಿ ದಾಖಲಾಗಿದೆ? ಸಿಐಡಿಗೆ ವರ್ಗಾವಣೆಗೊಂಡ ದಿನಾಂಕ, ತನಿಖಾಧಿಕಾರಿ ಯಾರು? ಅನುಮಾನಾಸ್ಪದ ವ್ಯಕ್ತಿ ಅಥವಾ ಆರೋಪಿ ಯಾರು? ಎಷ್ಟು ವಂಚನೆ? ವಂಚಕ ಕಂಪೆನಿ ಹೆಸರು, ಒಂದು ವೇಳೆ ತನಿಖಾಧಿಕಾರಿ ಬದಲಾದರೆ, ಹೊಸ ತನಿಖಾಧಿಕಾರಿ ಹೆಸರು, ಸಾಕ್ಷಿಗಳು, ಸಾಕ್ಷ್ಯಾಧಾರಗಳು ಏನಿವೆ? ತನಿಖಾಧಿಕಾರಿಗಳು ಯಾವ ಸ್ಥಳಕ್ಕೆ ಹೋಗಿ ಮಹಜರು ಮಾಡಿದ್ದಾರೆ? ಯಾರನ್ನು ಸಂಪರ್ಕಿಸಿದ್ದಾರೆ? ಪ್ರಕರಣ ಯಾವ ಹಂತದಲ್ಲಿದೆ? ಕೋರ್ಟ್‌ನಿಂದ ಬರುವ ಸಮನ್ಸ್‌ಗಳು, ಮುಂದಿನ ಮತ್ತು ಹಿಂದಿನ ಕಲಾಪದ ದಿನಾಂಕ ಸಹಿತ ಪ್ರಕರಣ ಸಮಗ್ರ ಮಾಹಿತಿಯನ್ನು ಆ್ಯಪ್‌ನಲ್ಲಿ ನೋಂದಾಯಿಸಲಾಗಿದೆ.

ಆ್ಯಪ್‌ನಲ್ಲಿ ಪ್ರತಿ ಮಾಹಿತಿಯನ್ನು ಸಂಬಂಧಪಟ್ಟ ವಿಭಾಗದ ಅಧಿಕಾರಿಗಳು ದಾಖಲಿಸಬೇಕೆಂದು ಸಿಐಡಿ ಮೂಲಗಳು ತಿಳಿಸಿವೆ.

ಸಿಐಡಿಯಲ್ಲಿ ಇದುವರೆಗೆ ಸಾವಿರಾರು ಪ್ರಕರಣಗಳು ದಾಖಲಾಗಿವೆ. ಕಳೆದ ಹತ್ತು ವರ್ಷಗಳಿಂದ 973 ಪ್ರಕರಣಗಳ ತನಿಖೆ ಅಪೂರ್ಣಗೊಂಡಿದ್ದು, ಈ ಪೈಕಿ 190ಕ್ಕೂ ಹೆಚ್ಚು ಪ್ರಕರಣಗಳ ತನಿಖೆಯನ್ನು ಕಳೆದ ಐದಾರು ತಿಂಗಳಲ್ಲೇ ಪೂರ್ಣಗೊಳಿಸಲಾಗಿದೆ. ಬಾಕಿ 780 ಪ್ರಕರಣಗಳ ತನಿಖೆ ತ್ವರಿತಗತಿಯಲ್ಲಿ ನಡೆಯುತ್ತಿದೆ. ತನಿಖಾಧಿಕಾರಿಗಳು ವರ್ಗಾವಣೆಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ತನಿಖೆ ಮಂದಗತಿಯಲ್ಲಿದೆ. ಹತ್ತಾರು ಕೇಸ್‌ಗಳು ನ್ಯಾಯಾಲಯದಿಂದ ತಡೆಯಾಜ್ಞೆಯಿದೆ. ತಡೆಯಾಜ್ಞೆ ತೆರವು ಸಹಿತ ಹಲವು ಅಡೆತಡೆ ದಾಟಿ ಪ್ರಕರಣಗಳನ್ನು ತಾರ್ಕಿಕ ಅಂತ್ಯ ಕಾಣಿಸುವವರೆಗೂ ಫಾಲೋಅಪ್‌ ಮಾಡುವ ಉದ್ದೇಶದಿಂದ ಮೊಬೈಲ್‌ ಆ್ಯಪ್‌ ಸಿದ್ಧಪಡಿಸಲಾಗಿದೆ. ಇದು ಸಾರ್ವಜನಿಕರ ವೀಕ್ಷಣೆಗೆ ಲಭ್ಯವಿಲ್ಲ ಎಂದು ಮೂಲಗಳು ತಿಳಿಸಿವೆ.

Advertisement

ಯಾಕೆ ಸಿಎಂಎಸ್‌ ಆ್ಯಪ್‌?
ಸಿಐಡಿಯಲ್ಲಿ ಆರ್ಥಿಕ ಅಪರಾಧಗಳು, ವಿಶೇಷ ತನಿಖಾ ತಂಡಗಳು, ಹೈಪ್ರೊಫೈಲ್‌ ಕೊಲೆ, ವಂಚನೆ, ಹಗರಣಗಳು, ಮಾನವ ಕಳ್ಳ ಸಾಗಣೆ ಸಹಿತ ಆರೇಳು ವಿಭಾಗಗಳಿವೆ. ಪ್ರತಿ ವಿಭಾಗಕ್ಕೆ ಎಸ್ಪಿ ಹಂತದ ಅಧಿಕಾರಿಗಳು ಮುಖ್ಯಸ್ಥರಾಗಿದ್ದಾರೆ. ಪ್ರತಿ ವಿಭಾಗದಲ್ಲಿ ಕನಿಷ್ಠ 100 ಪ್ರಕರಣಗಳ ತನಿಖೆ ನಡೆಯುತ್ತಿದೆ. ಹೀಗೆ ಸಿಐಡಿಯಲ್ಲಿ ಸುಮಾರು ಸಾವಿರಕ್ಕೂ ಅಧಿಕ ಪ್ರಕರಣಗಳಿವೆ. ಹೀಗಾಗಿ ಪ್ರತಿ ಪ್ರಕರಣಗಳ ಮಾಹಿತಿ ಪಡೆಯಲು ಎಸ್ಪಿ ಹಂತದಿಂದ ಡಿಜಿಪಿವರೆಗಿನ ಅಧಿಕಾರಿಗಳು ತನಿಖಾಧಿಕಾರಿಯನ್ನು ಕರೆದು ಗಂಟೆಗಟ್ಟಲೇ ಚರ್ಚಿಸಬೇಕಿತ್ತು. ಹಲವು ಪ್ರಕರಣಗಳಲ್ಲಿ ತನಿಖಾಧಿಕಾರಿಗಳು ಪ್ರಕರಣ ಸಂಬಂಧ ಪೂರಕ ಮಾಹಿತಿ ಹಾಗೂ ಮಹತ್ವದ ಸಾಕ್ಷಿಗಳು, ಸಾಕ್ಷಿಧಾರರ ಹೇಳಿಕೆ ದಾಖಲಿಸಿಕೊಂಡಿರುತ್ತಾರೆ. ಆದರೆ ಕೋರ್ಟ್‌ನಲ್ಲಿ ಪ್ರಕರಣ ವಿಚಾರಣೆ ಬಂದಾಗ ಸಾಕ್ಷಿಧಾರರ ಅಥವಾ ಪ್ರತ್ಯಕ್ಷದರ್ಶಿಗಳ ಹೇಳಿಕೆ ಅದಲು-ಬದಲಾಗುವ ಸಾಧ್ಯತೆಯಿದೆ. ಅಲ್ಲದೆ ಆಗಾಗ್ಗೆ ಡಿವೈಎಸ್ಪಿ, ಇನ್‌ಸ್ಪೆಕ್ಟರ್‌ ವರ್ಗಾವಣೆಯಾದಾಗ ನೂತನವಾಗಿ ಆ ಜಾಗಕ್ಕೆ ಬರುವ ಅಧಿಕಾರಿಗಳು ಪ್ರಕರಣದ ಗಂಭೀರತೆ ಅರ್ಥಮಾಡಿಕೊಳ್ಳಲು ದಿನಗಟ್ಟಲೇ ಫೈಲ್‌ ಜಾಲಾಡಬೇಕು. ಆದರೆ ಸಿಎಂಎಸ್‌ ಆ್ಯಪ್‌ನಿಂದ ಈ ಎಲ್ಲ ಮಾಹಿತಿಯನ್ನು ಸ್ವಲ್ಪ ಹೊತ್ತಿನಲ್ಲೇ ಪಡೆಯಬಹುದು.

 ಮೋಹನ್‌ ಭದ್ರಾವತಿ

 

Advertisement

Udayavani is now on Telegram. Click here to join our channel and stay updated with the latest news.

Next