Advertisement

ಬಜೆಟ್‌ನಲ್ಲಿ ಸಮಗ್ರ ಮೀನುಗಾರಿಕಾ ನೀತಿ

01:41 AM Feb 13, 2020 | Team Udayavani |

ಮಂಗಳೂರು: ಮತ್ಸ್ಯ ಸಂಪತ್ತು ಸಂರಕ್ಷಣೆಯ ಸದುದ್ದೇಶ ದಿಂದ ಸರ್ವ ಮೀನುಗಾರರ ಹಿತ ಕಾಯಲು ಕರ್ನಾಟಕ ಸಮಗ್ರ ಮೀನುಗಾರಿಕಾ ನೀತಿಯನ್ನು ರಾಜ್ಯ ಬಜೆಟ್‌ನಲ್ಲಿ ಪ್ರಕಟಿಸಲಾಗುವುದು ಎಂದು ಮೀನುಗಾರಿಕೆ ಹಾಗೂ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.

Advertisement

ಜಿಲ್ಲಾ ಮೀನುಗಾರಿಕಾ ಇಲಾಖೆ ಆಶ್ರಯದಲ್ಲಿ ನಗರದ ಬಂದರಿನಲ್ಲಿ ಬುಧವಾರ ನಡೆದ ಇಲಾಖಾ ಮಾಹಿತಿ ಕಾರ್ಯಾಗಾರ ಹಾಗೂ ಸವಲತ್ತು ವಿತರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

2017-18ರಲ್ಲಿ 5 ಲಕ್ಷ ಟನ್‌ ಬೂತಾಯಿ ಸಿಕ್ಕಿದ್ದರೆ ಮುಂದಿನ ವರ್ಷ ದಲ್ಲಿ ಕೇವಲ 1.50 ಲಕ್ಷ ಟನ್‌ ಮಾತ್ರ ಸಿಗುವಂತಾಗಿದೆ. ಮೀನಿನ ಸಂಪತ್ತು ನಮ್ಮಿಂದ ದೂರವಾಗುತ್ತಿರುವ ಸ್ಪಷ್ಟ ಸೂಚನೆ ಇದು. ಹೀಗಾಗಿ ಮುಂದಿನ ಜನಾಂಗಕ್ಕೆ ಸಮುದ್ರ ಸಂಪತ್ತು ಕಾಪಾಡುವ ಕಾರಣದಿಂದ ಸಮಗ್ರ ಮೀನುಗಾರಿಕಾ ನೀತಿ ಜಾರಿಗೊಳಿಸಲಾಗುವುದು ಎಂದರು.

ಮಂಗಳೂರು ಹಾಗೂ ಉಡುಪಿ ಯಲ್ಲಿ ತಲಾ 6.50 ಕೋ.ರೂ ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸಿರುವ ತೇಲುವ ಜೆಟ್ಟಿ ಯೋಜನೆ ಬಗ್ಗೆ ತಜ್ಞರಿಂದ ಪರಾಮರ್ಶೆ ನಡೆಸಲಾ ಗಿದೆ. ಹೆಚ್ಚಿನ ಅಧ್ಯಯನಕ್ಕೆ ಮೀನು ಗಾರರನ್ನೊಳಗೊಂಡ 15 ತಜ್ಞರ ನಿಯೋಗವನ್ನು ಗೋವಾಕ್ಕೆ ಕರೆದುಕೊಂಡು ಹೋಗಿ ಅಲ್ಲಿನ ಪರಿಸ್ಥಿತಿಯನ್ನು ಪರಾಮರ್ಶಿಸಿ ಮುಂದಿನ ಹೆಜ್ಜೆ ಇಡಲಾಗುವುದು ಎಂದರು.

2017-18ರಲ್ಲಿ ಮೀನುಗಾರ ಮಹಿಳೆಯರು ಪಡೆದ ಸಾಲದ ಪೈಕಿ ತಲಾ 50,000 ರೂ. ಮನ್ನಾ ಮಾಡುವ ಸಂಬಂಧ ಕ್ರಮ ಕೈಗೊಳ್ಳಲಾಗಿದೆ. ಮನ್ನಾ ಹಣ ಖಾತೆಗೆ ಬೀಳುವಾಗ ತಡವಾಗಿದೆ. ಆ ಕಾರಣಕ್ಕೆ ಮೀನುಗಾರ ಮಹಿಳೆಯರಿಗೆ ಕಿರುಕುಳ ನೀಡದಂತೆ ಬ್ಯಾಂಕ್‌ಗಳಿಗೆ ಸೂಚಿಸಲಾಗಿದೆ ಎಂದರು.

Advertisement

ಶಾಸಕ ವೇದವ್ಯಾಸ ಕಾಮತ್‌ ಅಧ್ಯಕ್ಷತೆ ವಹಿಸಿದ್ದರು. ಅಬ್ದುಲ್‌ ಲತೀಫ್‌, ನಿತಿನ್‌ ಕುಮಾರ್‌, ಮೋಹನ್‌
ಬೆಂಗ್ರೆ, ಉಮೇಶ್‌ ಕರ್ಕೇರಾ, ಹರೀಶ್‌ ಕುಮಾರ್‌ ಉಪಸ್ಥಿತರಿದ್ದರು. ಡಿ. ತಿಪ್ಪೇಸ್ವಾಮಿ ಸ್ವಾಗತಿಸಿದರು.

2.30 ಕೋ.ರೂ. ಸವಲತ್ತು ವಿತರಣೆ
ಟ್ರಾಲ್‌ ಬಲೆಗಳಿಗೆ 35 ಎಂಎಂ ಅಳತೆಯ ಚೌಕಾಕಾರದ ಕಾಡ್‌ ಆ್ಯಂಡ್‌ ಬಲೆಗಳನ್ನು ಉಚಿತವಾಗಿ ನೀಡುವ ಯೋಜನೆಯಡಿ ಪ್ರತೀ ಫಲಾನುಭವಿಗಳಿಗೆ ತಲಾ 10,000 ರೂ.ಗಳಂತೆ 800 ಫಲಾನುಭವಿಗಳಿಗೆ 80 ಲಕ್ಷ ರೂ. ಸಹಾಯಧನ, 50 ಫಲಾನುಭವಿಗಳಿಗೆ ತಲಾ 10,000 ರೂ.ಗಳ ಒಟ್ಟು 5 ಲಕ್ಷ ರೂ. ಮೀನುಗಾರಿಕಾ ಸಲಕರಣೆ ಕಿಟ್‌ ವಿತರಿಸಲಾಯಿತು.

ಒಳನಾಡು ಮೀನುಗಾರಿಕಾ ಅಭಿವೃದ್ಧಿ ಯೋಜನೆಯಡಿ ತಲಾ 10,000 ರೂ.ಗಳಂತೆ 10 ಫಲಾನುಭವಿಗಳಿಗೆ 1 ಲಕ್ಷ ರೂ. ಸಹಾಯಧನ, 53 ಫಲಾನುಭವಿಗಳಿಗೆ ಎಂಜಿನ್‌ ಖರೀದಿಗೆ 26.71 ಲಕ್ಷ ರೂ., 96 ಫಲಾನುಭವಿಗಳಿಗೆ ಮೀನುಗಾರಿಕಾ ಸುರಕ್ಷತಾ ಸಾಧನಗಳ ಖರೀದಿಗಾಗಿ 69 ಲಕ್ಷ ರೂ., ಓರ್ವ ಫಲಾನುಭವಿಗೆ ಐಸ್‌, ಕೋಲ್ಡ್‌ ಸ್ಟೋರೇಜ್‌ಗೆ 50 ಲಕ್ಷ ರೂ. ಸಹಾಯಧನ, ಅಕ್ವೇರಿಯಂ ಘಟಕಗಳ ಸ್ಥಾಪನೆಗೆ ಹಾಗೂ ಫಲಾನುಭವಿಗಳಿಗೆ ಕಿಸಾನ್‌ ಕ್ರೆಡಿಟ್‌ ಕಾರ್ಡ್‌ಗಳನ್ನು ಸಚಿವರು ಹಸ್ತಾಂತರಿಸಿದರು.

3 ಇಲಾಖೆಗಳಿಗೆ
ಇ-ಕಚೇರಿ ಸ್ವರೂಪ
ಮೀನುಗಾರಿಕೆ, ಬಂದರು ಹಾಗೂ ಮುಜರಾಯಿ ಇಲಾಖೆ ಯನ್ನು ಇನ್ನಷ್ಟು ಪಾರದರ್ಶಕ ಮಾಡುವ ನಿಟ್ಟಿನಲ್ಲಿ ಮೂರು ಇಲಾಖೆಗಳನ್ನು ಇ-ಕಚೇರಿ ಮಾಡಲಾಗುವುದು. ತಿಂಗಳೊಳಗೆ ಇದು ಪೂರ್ಣಗೊಳ್ಳಲಿದ್ದು, ಬಳಿಕ ಅವು ಸಕಾಲದಡಿ ಸೇರ್ಪಡೆ ಗೊಂಡು ಎಲ್ಲ ಸೇವೆಗಳು ನಿಗದಿತ ಅವಧಿಯಲ್ಲಿ ದೊರೆಯಲಿವೆ ಎಂದು ಸಚಿವರು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next