Advertisement

Puttur; ಪುತ್ತೂರಿನ ಸಮಗ್ರ ಅಭಿವೃದ್ಧಿಯೇ ನನ್ನ ಮೊದಲ ಗುರಿ : ಅಶೋಕ್‌ ಕುಮಾರ್‌ ರೈ

11:00 AM May 01, 2023 | Team Udayavani |

ಪುತ್ತೂರು:ಪುತ್ತೂರನ್ನು ಗ್ರಾಮಾಂತರ ಜಿಲ್ಲಾ ಕೇಂದ್ರವನ್ನಾಗಿಸುವುದು, ಸರಕಾರಿ ಮೆಡಿಕಲ್‌ ಕಾಲೇಜು ನಿರ್ಮಾಣ ಸೇರಿದಂತೆ ಕ್ಷೇತ್ರದ ಸಮಗ್ರ ಅಭಿವೃದ್ಧಿಯೇ ನನ್ನ ಪ್ರಥಮ ಗುರಿ ಎಂದು ಪುತ್ತೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಅಶೋಕ್‌ ಕುಮಾರ್‌ ರೈ ಅವರು ತನ್ನ ಹತ್ತಾರು ಕಾರ್ಯಸೂಚಿಗಳನ್ನು ಘೋಷಿಸಿದ್ದಾರೆ.

Advertisement

ಪುತ್ತೂರು ವಿಧಾನಸಭಾ ಕ್ಷೇತ್ರದ ವಿವಿಧ ಭಾಗಗಳಲ್ಲಿ ರವಿವಾರ ಬಿರುಸಿನ ಪ್ರಚಾರ ಮಾಡಿ ಕಾರ್ಯಕರ್ತರನ್ನು ಉದ್ದೇಶಿಸಿ ಅವರು ಮಾತನಾಡಿದರು. ನಗರದ ಬಹುಬೇಡಿಕೆಯಾಗಿರುವ ಒಳಚರಂಡಿ ಯೋಜನೆ ಅನುಷ್ಠಾನ ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸಲು ತಾನು ಬದ್ಧನಾಗಿದ್ದು ಮತದಾರರು ಗೆಲ್ಲಿಸುವ ಮೂಲಕ ಅವಕಾಶ ಮಾಡಿಕೊಡಬೇಕು ಎಂದರು.

ಮಂಗಳೂರಿನಲ್ಲಿರುವ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕಚೇರಿಯನ್ನು ಕಾರ್ಯವ್ಯಾಪ್ತಿ ಹೊಂದಿರುವ ಪುತ್ತೂರಿಗೆ ಸ್ಥಳಾಂತರಗೊಳಿಸುವುದು, ಪುತ್ತೂರಿನಲ್ಲಿ ಉದ್ಯೋಗ ಸೃಷ್ಟಿಗೆ ಪೂರಕವಾಗಿ ಕೈಗಾರಿಕಾ ವಲಯ ಸ್ಥಾಪನೆ, ಅಂತಾರಾಷ್ಟ್ರೀಯ ದರ್ಜೆಯ ಕ್ರೀಡಾಂಗಣ ನಿರ್ಮಾಣ, ನಗರದ ವಾಹನದ ದಟ್ಟಣೆ ನಿಯಂತ್ರಣಕ್ಕೆ ನಗರ ಮತ್ತು ಗ್ರಾಮಾಂತರ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣ, ಪಾರ್ಕಿಂಗ್‌ ಮೊದಲಾದ ಯೋಜನೆಗಳ ಅನುಷ್ಠಾನದ ಗುರಿ ಹೊಂದಿದ್ದೇನೆ ಎಂದವರು ವಿವರಿಸಿದರು.

ತಾಲೂಕು ಸರಕಾರಿ ಆಸ್ಪತ್ರೆಯನ್ನು 300 ಬೆಡ್‌ಗೆ ಮೇಲ್ದರ್ಜೆಗೆ ಏರಿಸಿ ಸರಕಾರಿ ಮೆಡಿಕಲ್‌ ಕಾಲೇಜು ಮಂಜೂರಾತಿಗೆ ಬಲ ನೀಡುವುದು. ತಾಲೂಕಿನ ಧಾರ್ಮಿಕ ಹಿನ್ನೆಲೆಯ ಹಲವು ಕ್ಷೇತ್ರಗಳಿದ್ದು ಇವುಗಳನ್ನು ಪ್ರವಾಸಿ ತಾಣಗಳಾಗಿ ಅಭಿವೃದ್ಧಿಪಡಿಸುವಿಕೆ, ಉಪ್ಪಿನಂಗಡಿ, ವಿಟ್ಲದಲ್ಲಿ ಅಗ್ನಿಶಾಮಕದಳದ ಠಾಣೆ ಸ್ಥಾಪಿಸುವುದು ಮೊದಲಾದ ಉದ್ದೇಶ ಹೊಂದಿದ್ದೇನೆ ಎಂದರು.

ವಿವಿಧೆಡೆ ಪ್ರಚಾರ ಕಾರ್ಯದಲ್ಲಿ ಮಾಜಿ ಶಾಸಕಿ ಶಕುಂತಳಾ ಟಿ. ಶೆಟ್ಟಿ, ಕಾಂಗ್ರೆಸ್‌ ಮುಖಂಡೆ ಪ್ರತಿಭಾ ಕುಳಾಯಿ, ಕೆಪಿಸಿಸಿ ಸಂಯೋಜಕ ಕಾವು ಹೇಮನಾಥ ಶೆಟ್ಟಿ, ಪುತ್ತೂರು ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಎಂ.ಬಿ.ವಿಶ್ವನಾಥ ರೈ, ವಿಟ್ಲ ಉಪ್ಪಿನಂಗಡಿ ಬ್ಲಾಕ್‌ ಅಧ್ಯಕ್ಷರಾದ ಡಾ| ರಾಜಾರಾಂ ಕೆ.ಬಿ., ನಝೀರ್‌ ಮಠ, ಎಂ.ಎಸ್‌. ಮಹಮ್ಮದ್‌ ಮೊದಲಾದವರು ಉಪಸ್ಥಿತರಿದ್ದರು.

Advertisement

ಉತ್ಸಾಹದಿಂದ ಪ್ರಚಾರ ನಿರತ ಕಾರ್ಯಕರ್ತರು..!
ಚುನಾವಣೆಗೆ ಹತ್ತೇ ದಿನ ಇದ್ದು ಕಾಂಗ್ರೆಸ್‌ ಅಭ್ಯರ್ಥಿ ಅಶೋಕ್‌ ಕುಮಾರ್‌ ರೈ ಅವರ ಪರವಾಗಿ ರವಿವಾರ ಕಾರ್ಯಕರ್ತರು ಮನೆ-ಮನೆ ಭೇಟಿ ಮಾಡಿ ಮತಯಾಚನೆ ಮಾಡಿದರು. ಎಲ್ಲ ಬೂತ್‌ಗಳಲ್ಲಿ ಉತ್ಸಾಹದಿಂದ ಪಾಲ್ಗೊಂಡ ಕಾರ್ಯಕರ್ತರು ಅಭ್ಯರ್ಥಿ ಅಶೋಕ್‌ ಕುಮಾರ್‌ ರೈ ಅವರು ಮಾಡುತ್ತಿರುವ ಜನಸೇವೆ, ಕಾಂಗ್ರೆಸ್‌ ಸರಕಾರದ ಕೊಡುಗೆಗಳ ಬಗ್ಗೆ ವಿವರಿಸಿದರು. ಕಳೆದ ಎರಡು ದಿನಗಳಿಂದ ಸುಮಾರು 65 ಸಾವಿರಕ್ಕೂ ಅಧಿಕ ಮತದಾರರನ್ನು ಭೇಟಿ ಮಾಡಿ ಮತಯಾಚನೆ ನಡೆಸಲಾಯಿತು.

ಶಾಸಕನಾದರೆ ವೇತನ ಬಡವರಿಗೆ ಮೀಸಲು : ಘೋಷಣೆ..!
ಪುತ್ತೂರಿನ ಜನತೆಯ ಆಶೀರ್ವಾದದಿಂದ ನಾನು ಈ ಬಾರಿಯ ಚುನಾವಣೆಯಲ್ಲಿ ಗೆದ್ದು ಶಾಸಕನಾಗಿ ಆಯ್ಕೆಯಾದಲ್ಲಿ ಶಾಸಕನಿಗೆ ಸಿಗುವ ಸರಕಾರಿ ವೇತನ ಹಾಗೂ ಎಲ್ಲಾ ಭತ್ಯೆಯನ್ನು ನನ್ನ ಸ್ವಂತಕ್ಕೆ ಬಳಸದೆ ಪೂರ್ಣವಾಗಿ ಸಮಾಜ ಸೇವೆಗೆ ಬಳಸುತ್ತೇನೆ. ಬಡವರ ಕಷ್ಟ ಕಾರ್ಪಣ್ಯಗಳಿಗಾಗಿಯೇ ಈ ಹಣ ಬಳಕೆ ಮಾಡುತ್ತೇನೆ ಎಂದು ಅಶೋಕ್‌ ಕುಮಾರ್‌ ರೈ ಘೋಷಿಸಿದರು.

 

Advertisement

Udayavani is now on Telegram. Click here to join our channel and stay updated with the latest news.

Next