ಲಂಡನ್:ಕೋವಿಡ್ 19 ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ಜಗತ್ತಿನ ಬಹುತೇಕ ದೇಶಗಳಲ್ಲಿ ಲಾಕ್ ಡೌನ್ ಸೇರಿದಂತೆ ವಿವಿಧ ನಿರ್ಬಂಧಗಳನ್ನು ಜಾರಿಗೊಳಿಸಲಾಗಿತ್ತು. ಅಷ್ಟೇ ಕೋವಿಡ್ ಮನುಷ್ಯನ ಜೀವನದಲ್ಲಿ ಹಲವಾರು ಬದಲಾವಣೆ ಮಾಡಿಕೊಳ್ಳುವಂತೆ ಮಾಡಿದೆ. ಆ ನಿಟ್ಟಿನಲ್ಲಿ ಇಂಗ್ಲೆಂಡ್ ಇದೀಗ ವಿಚಿತ್ರ ನಿಯಮ ಜಾರಿಗೊಳಿಸಿದೆ!
ಕೋವಿಡ್ 19 ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ಇಂಗ್ಲೆಂಡ್ ಸರ್ಕಾರ ಜಾರಿಗೆ ತಂದಿರುವ ಹೊಸ ನಿರ್ಬಂಧದ ಪ್ರಕಾರ, ಮನೆಯೊಳಗೆ ಹೊರಗಿನ ವ್ಯಕ್ತಿಯ ಜತೆಗೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿಕೊಳ್ಳಬಾರದು ಎಂದು ಸೂಚಿಸಿರುವುದಾಗಿ ವರದಿ ತಿಳಿಸಿದೆ.
ಒಂದು ವೇಳೆ ಒಂದಕ್ಕಿಂತ ಹೆಚ್ಚು ಜನರ ಜತೆ ಸೇರಬಾರದು. ಅಲ್ಲದೇ ಹಲವು ಮಂದಿ ಒಟ್ಟುಗೂಡಿ ವಾಸ್ತವ್ಯ ಹೂಡಬಾರದು. ಒಂದು ಫ್ಲ್ಯಾಟ್ ಅಥವಾ ಮನೆಯೊಳಗೆ ಹೊರಗಿನ ವ್ಯಕ್ತಿಯ ಜತೆ ಲೈಂಗಿಕ ಕ್ರಿಯೆ ನಡೆಸುವುದು ಕಾನೂನು ವಿರೋಧಿ ಎಂದು ಎಚ್ಚರಿಸಿದೆ.
ಈಗಾಗಲೇ ಇಂಗ್ಲೆಂಡ್ ನಲ್ಲಿ ಲಿವಿಂಗ್ ರಿಲೇಷನ್ ಶಿಪ್ ಮತ್ತು ಸಮ್ಮತಿಯ ಸೆಕ್ಸ್ ಅಪರಾಧವಲ್ಲ. ಆದರೆ ಇದೀಗ ಲಾಕ್ ಡೌನ್ ನೆಪದಲ್ಲಿ ಈ ನಿರ್ಬಂಧ ವಿಧಿಸಿರುವುದು ಚರ್ಚೆಗೆ ಗ್ರಾಸವಾಗಿದೆ ಎಂದು ವರದಿ ಹೇಳಿದೆ.
ಇದಕ್ಕೂ ಮೊದಲು ಸಮರ್ಪಕ ಕಾರಣವಿಲ್ಲದೆ ಸಂಚರಿಸುವುದು ಕೂಡಾ ಶಿಕ್ಷಾರ್ಹ ಅಪರಾಧ, ಅಷ್ಟೇ ಅಲ್ಲ ಮತ್ತೊಬ್ಬರ ಮನೆಗೆ ಹೋಗಿ ಮಾತನಾಡುವುದು ಕೂಡಾ ಅಪರಾಧ ಎಂದು ಇಂಗ್ಲೆಂಡ್ ಸರ್ಕಾರ ನಿರ್ಬಂಧ ವಿಧಿಸಿತ್ತು.