Advertisement

ಮಿಶ್ರಬೆಳೆಯಲ್ಲಿ ಸಮ್ಮಿಶ್ರ ಲಾಭ

11:34 AM Jun 11, 2018 | Harsha Rao |

ಕೃಷಿ ಪಂಡಿತ ಮತ್ತು ಕೃಷಿ ರತ್ನ ಪ್ರಶಸ್ತಿ ಪಡೆದಿರುವ ಧನಪಾಲ್‌ ಯಲ್ಲಟ್ಟಿ ಓದಿರುವುದು ಕೆವಲ ಎಸ್ಸೆಸ್ಸೆಲ್ಸಿ. ಆದರೆ ಕೃಷಿಕನಾಗಿ ಅವರಿಗಿರುವ ತಿಳಿವಳಿಕೆ ದೊಡ್ಡದು. ತೆಂಡು ಹೂ ಮತ್ತು ಬದನೆ ಬೆಳೆಯಿಂದ ಲಕ್ಷಾಂತರ ರೂಪಾಯಿ ಸಂಪಾದಿಸಬಹುದು ಎಂದು ತೋರಿಸಿಕೊಟ್ಟಿರುವುದು ಇವರು ಹೆಗ್ಗಳಿಕೆ.

Advertisement

ರಬಕವಿ -ಬನಹಟ್ಟಿ ತಾಲೂಕಿನ ಹಳಿಂಗಳಿಯ ಧನಪಾಲ ಯಲ್ಲಟ್ಟಿ ಚಲೋ ಕೃಷಿಕ. ಏಕೆಂದರೆ ಕಡಿಮೆ ಭೂಮಿ ಮತ್ತು ಹಣದಲ್ಲಿ ವೈಜ್ಞಾನಿಕವಾಗಿ ಮಿಶ್ರ ಬೆಳೆ ಬೆಳೆದು ಹೆಚ್ಚಿನ ಪ್ರಮಾಣದಲ್ಲಿ ಲಾಭಗಳಿಸಬಹುದು ಎಂಬುದನ್ನು ತೋರಿಸಿಕೊಟ್ಟಿದ್ದಾರೆ.

2010ರಲ್ಲಿ ಕೃಷಿ ಪಂಡಿತ ಮತ್ತು 2012ರಲ್ಲಿ ಕೃಷಿರತ್ನ ಪ್ರಶಸ್ತಿ, 2014ರಲ್ಲಿ ರಾಷ್ಟ್ರ ಮಟ್ಟದ ಮಹಿಂದ್ರಾ ಸಮೃದ್ಧಿ ಪ್ರಶಸ್ತಿ ಪಡೆದಿರುವ ಧನಪಾಲ್‌ ಯಲ್ಲಟ್ಟಿ, ತಮ್ಮ ತೋಟದ 1 ಎಕರೆ 30 ಗುಂಟೆ ಪ್ರದೇಶದಲ್ಲಿ ಚೆಂಡು ಹೂ(ಆರಿ ಗೋಲ್ಡ್‌) ಹಾಕಿದ್ದಾರೆ. ಮಿಶ್ರ ಬೆಳೆಯಾಗಿ ಬದನೆಯನ್ನು ಬೆಳೆದು ಕಡಿಮೆ ಜಾಗದಲ್ಲೂ ಲಕ್ಷ ಲಕ್ಷ ರೂ. ಲಾಭ ಗಳಿಸಬಹುದು ಎಂಬುದನ್ನು ಸಾಧಿಸಿ ತೋರಿಸಿದ್ದಾರೆ.  ಧನಪಾಲ್‌ ಓದಿದ್ದು ಎಸ್‌ಎಸ್‌ಎಲ್‌ಸಿ. ಆದರೆ ಕೃಷಿಯಲ್ಲಿ ಹಲವು ಬಗೆಯ ವಿಭಿನ್ನ ಪ್ರಯೋಗಗಳನ್ನು ಮಾಡಿ ಇತರರಿಗೆ ಮಾದರಿಯಾಗಿದ್ದಾರೆ.

 ಮೊದಲು ಎಕರೆಗೆ 6 ಸಾವಿರ ಚೆಂಡು ಹೂವಿನ ಸಸಿಯನ್ನು ಸಾಲಿನಿಂದ ಸಾಲಿಗೆ ಐದೂವರೆ ಅಡಿ, ಸಸಿಯಿಂದ 1.5 ಅಡಿ ಡಬ್ಬಲ್‌ ರೋದಲ್ಲಿ ಜಿಗ್‌ ಜಾಗ್‌ ಮಾದರಿಯಲ್ಲಿ ನಾಟಿ ಮಾಡಿದರು.  ಇದಕ್ಕೆ ನೀರಾವರಿಗಾಗಿ ತಮ್ಮದೇ ಆದ ಬೋರವೆಲ್‌ ಮೂಲಕ ಹನಿ ನೀರಾವರಿಯ ವ್ಯವಸ್ಥೆ ಮಾಡಿಕೊಂಡಿದ್ದರು. ಅದಕ್ಕೆ ಮೂಲ ಗೊಬ್ಬರವಾಗಿ 10 ಟನ್‌ ಕೊಟ್ಟಿಗೆ ಗೊಬ್ಬರ, 75 ಕೆ.ಜಿ ಡಿ.ಎ.ಪಿ., 25 ಕೆ.ಜಿ ಪೋಟ್ಯಾಶ್‌, ಮೈಕ್ರೋ ನ್ಯೂಟ್ರೆಂಟ್‌ 15 ಕೆ.ಜಿ ಮಿಶ್ರಣ ಮಾಡಿ ಬೆಡ್‌ನ‌ಲ್ಲಿ ಹಾಕಿ ಬೆಡ್‌ಅನ್ನು° ನಿರ್ಮಿಸಿಕೊಂಡು ನಂತರ ಸಸಿ ಹಾಕಲಾಗಿದ್ದು, ವಾತಾವರಣಕ್ಕೆ ಅನುಗುಣವಾಗಿ ಸೂಕ್ಷ್ಮ ಪೋಷಕಾಂಶಕಗಳನ್ನು ಸಹ ಸಿಂಪರಣೆ ಮಾಡಲಾಗಿದೆ ಎನ್ನುತ್ತಾರೆ ಧನಪಾಲ್‌.

ಚೆಂಡು ಹೂ ನಾಟಿ ಮಾಡಿದ 30 ರಿಂದ 35 ದಿನಗಳ ನಂತರ ಮಿಶ್ರ ಬೆಳೆಯಾಗಿ, ಸಾಲಿನಿಂದ ಸಾಲಿಗೆ ಐದೂವರೆ ಅಡಿ, ಸಸಿಯಿಂದ ಸಸಿಗೆ 1.5 ಅಡಿ ಅಂತರದಲ್ಲಿ 4000 ಸಾವಿರ ಬದನೆ ಗಿಡಗಳಿವೆ.  ಚೆಂಡು ಹೂ, ನಾಲ್ಕೂವರೆ ತಿಂಗಳ ಬೆಳೆಯಾದರೆ ಬದನೆ 50 ದಿನಗಳಲ್ಲಿ ಹೂ ಬಿಟ್ಟು ಫ‌ಲ ಕೊಡಲು ಆರಂಭಿಸುತ್ತದೆ.  ಅಂದಾಜು ಒಂದು ಎಕರೆಗೆ 10 ಟನ್‌ ಚೆಂಡು ಹೂವಿನ ಇಳುವರಿ ಸಿಗುತ್ತದೆ.  ಸದ್ಯದ ಬೆಲೆಯ ಪ್ರಕಾರ  ಕೆ.ಜಿಗೆ 40ರೂ. ಹಿಡಿದರೆ ಅಂದಾಜು ಚೆಂಡು ಹೂವಿನಿಂದಲೇ 4 ಲಕ್ಷ ಆದಾಯ ಗಳಿಸಬಹುದು. ಸದ್ಯ ಹಬ್ಬಗಳಿರುವುದರಿಂದ ಇದು ಇನ್ನೂ ಹೆಚ್ಚಿಗೆ ಆಗಬಹುದು. ಅಲ್ಲದೆ ಬದನೆಯಿಂದ 1 ಎಕರೆಗೆ 15ಟನ್‌ ಇಳುವರಿಯಿಂದ 3ಲಕ್ಷ ಆದಾಯ.

Advertisement

ಎರಡೂ ಸೇರಿ ಒಟ್ಟು ಐದೂವರೆ ತಿಂಗಳಲ್ಲಿ ಸುಮಾರು 7ಲಕ್ಷ ಆದಾಯ ಕೈ ಸೇರಿದೆ. ಅದರಲ್ಲಿ ರಸಗೊಬ್ಬರ, ಸಿಂಪರಣಾ ಗೊಬ್ಬರಗಳು, ಸಸಿಗಳು, ಆಳಿನ ಇತರೆ ಖರ್ಚುಗಳು ಸೇರಿದರೆ 50 ಸಾವಿರ ಖರ್ಚಾಗುತ್ತದೆ ಎನ್ನುತ್ತಾರೆ ಧನಪಾಲ್‌ ಯಲ್ಲಟ್ಟಿ.
  ಮುಂಬಯಿ ನಮ್ಮ ಬೆಳೆಗಳ ಪ್ರಮುಖ ಮಾರುಕಟ್ಟೆಯಾಗಿದೆ. ಹಬ್ಬ ಹರಿದಿನಗಳಲ್ಲಿ ಸ್ಥಳೀಯ ಮಾರುಕಟ್ಟೆಗಳಿಗೂ ಪೂರೈಸುತ್ತೇನೆ ಎನ್ನುತ್ತಾರೆ ಯಲ್ಲಟ್ಟಿ.

ಕಡಿಮೆ ಹೂಡಿಕೆ ಮತ್ತು ಹೆಚ್ಚು ಆದಾಯ ಪಡೆಯಲು ಹರಸಾಹಸ ಪಡುವ ವಾಣಿಜ್ಯೋದ್ಯಮಿಗಳಿಗಿಂತ ಭೂತಾಯಿಯ ಮಡಿಲಲ್ಲಿ ಕಡಿಮೆ ಕಾಲಾವಧಿ ಮತ್ತು ವೆಚ್ಚದಲ್ಲಿ ಹೆಚ್ಚಿನ ಇಳುವರಿ ಹಾಗೂ ಲಾಭವನ್ನು ಮಿಶ್ರ ಬೆಳೆ ಪದ್ದತಿ ಮೂಲಕ ಪಡೆಯಬಹುದು ಎಂದು ಧನಪಾಲ  ತೋರಿಸಿಕೊಟ್ಟಿದ್ದಾರೆ.

ಮಾಹಿತಿಗೆ- 9900030678

– ಕಿರಣ ಶ್ರೀಶೈಲ ಆಳಗಿ

Advertisement

Udayavani is now on Telegram. Click here to join our channel and stay updated with the latest news.