Advertisement

ಸಂಪೂರ್ಣ ಸ್ತಬ್ಧಗೊಂಡ ಬಂದರು: ಬೋಟ್‌ನಲ್ಲೇ ಉಳಿದ ಕಾರ್ಮಿಕರು

09:45 PM Mar 27, 2020 | Sriram |

ಮಲ್ಪೆ: ಕೋವಿಡ್‌ 19 ಭೀತಿಯ ಹಿನ್ನೆಲೆಯಲ್ಲಿ ಇಡೀ ದೇಶವನ್ನೇ ಲಾಕ್‌ಡೌನ್‌ ಮಾಡಿದ್ದು ಪ್ರಮುಖ ವಾಣಿಜ್ಯ ಕೇಂದ್ರ ಮಲ್ಪೆ ಮೀನುಗಾರಿಕೆ ಬಂದರು ಸಂಪೂರ್ಣ ಸ್ತಬ್ದಗೊಂಡಿದೆ.

Advertisement

ಮಲ್ಪೆ ಬಂದರಿನಲ್ಲಿ ಸುಮಾರು 2,000ಕ್ಕೂ ಅಧಿಕ ಯಾಂತ್ರಿಕೃತ ಬೋಟು ಗಳು ಇದ್ದು ಅವೆಲ್ಲವೂ ಮೀನುಗಾರಿಕೆಯನ್ನು ಸ್ಥಗಿತ ಗೊಳಿಸಿ ಬಂದರಿನಲ್ಲಿ ಲಂಗರು ಹಾಕಿವೆ. ಇಲ್ಲಿ ಯಾರೂ ತಿರುಗಾಡದಂತೆ ಪೊಲೀಸರು ಎಚ್ಚರವನ್ನು ವಹಿಸುತ್ತಿದ್ದಾರೆ.

ಸರಕಾರ ಬಂದ್‌ಗೆ ಕರೆ ನೀಡಿದ ಹಿನ್ನೆಲೆಯಲ್ಲಿ ಈ ಮೊದಲೇ ಮಹಾರಾಷ್ಟ್ರದ ರತ್ನಾಗಿರಿ ಗೋವಾ ಸಮುದ್ರದಲ್ಲಿ ಮೀನುಗಾರಿಕೆ ನಡೆಸುತ್ತಿದ್ದ ಬೋಟ್‌ಗಳಿಗೆ ತಡವಾಗಿ ಮಾಹಿತಿ ದೊರೆತಿದ್ದರಿಂದ ವಾಪಾಸು ಬರಲು ಎರಡು ದಿನಗಳು ವಿಳಂಬವಾಗಿತ್ತು. ಆ ಬಳಿಕ ಬಂದರು ಪ್ರವೇಶಿದ ಸುಮಾರು 200ರಷ್ಟು ಬೋಟುಗಳಿಗೆ ಬಂದರಿನಲ್ಲಿ ಮೀನು ಖಾಲಿ ಮಾಡಲು ಅವಕಾಶ ಸಿಗದ ಕಾರಣ ಸಮಸ್ಯೆಯಾಗಿತ್ತು. ಮೀನುಗಾರರ ಸಂಘವು ಪೂರ್ಣ ಜವಾಬ್ದಾರಿಯನ್ನು ವಹಿಸಿಕೊಂಡು, ಪೊಲೀಸರ ಸಹಕಾರದಿಂದ ಹೊರಗಿನ ಜನರನ್ನು ಬಂದರು ಪ್ರವೇಶಿಸದಂತೆ ತಡೆದು, ಎಲ್ಲೂ ಸುರಕ್ಷೆಗೆ ಧಕ್ಕೆಯಾಗದ ರೀತಿಯಲ್ಲಿ ಮೀನು ವಿಲೇವಾರಿಗೆ ಅವಕಾಶವನ್ನು ಮಾಡಿಕೊಟ್ಟಿತ್ತು ಎಂದು ಮಲ್ಪೆ ಮೀನುಗಾರರ ಸಂಘದ ಅಧ್ಯಕ್ಷ ಕೃಷ್ಣ ಎಸ್‌. ಸುವರ್ಣ ತಿಳಿಸಿದ್ದಾರೆ.

ದಡ ಸೇರಿದರೂ ಮನೆ ಸೇರುವಂತಿಲ್ಲ
ಲಾಕ್‌ಡೌನ್‌ ಆದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳ ಆದೇಶದಂತೆ ಮೀನುಗಾರರು ಅರ್ಧದಲ್ಲೇ ಮೀನುಗಾರಿಕೆಯನ್ನು ಮೊಟುಕುಗೊಳಿಸಿ ಬಂದರಿಗೆ ವಾಪಾಸಾಗಿ ದಡ ಸೇರಿದ್ದರೂ, ಬೋಟಿನಲ್ಲಿ ದುಡಿಯುವ ಕಾರ್ಮಿಕರಿಗೆ ಮಾತ್ರ ತಾವು ಸಮುದ್ರದಿಂದ ದಡ ಸೇರಿದರೂ ತಮ್ಮ ಮನೆಗೂ ಹೋಗಲಾಗದೆ ಬೋಟಿನಲ್ಲಿ ಕಾಲ ಕಳೆಯುವ ಪರಿಸ್ಥಿತಿ ಬಂದೊದಗಿದೆ. ಬಹುತೇಕ ಮಂದಿ ಮೀನುಗಾರ ಕಾರ್ಮಿಕರು ಈಗಾಗಲೇ ತಮ್ಮ ಊರು ಸೇರಿ ಕೊಂಡಿದ್ದರೆ, ತಡವಾಗಿ ಬಂದ ಬೋಟಿನ ಸುಮಾರು 1,000ಕ್ಕೂ ಅಧಿಕ ಮಂದಿ ಕಾರ್ಮಿಕರಿಗೆ ಮನೆಗೆ ಹೋಗುವ ವ್ಯವಸ್ಥೆ ಇಲ್ಲದೆ ಬಂದರಿನಲ್ಲೇ ಉಳಿದುಕೊಂಡಿದ್ದಾರೆ. ಬೋಟ್‌ ಮಾಲಕರು ಈ ಕಾರ್ಮಿಕರಿಗೆ ಊಟ, ಉಪಹಾರವನ್ನು ಒದಗಿಸುತ್ತಿದ್ದರೆ, ಕೆಲವರು ರೇಶನ್‌ ವ್ಯವಸ್ಥೆಯನ್ನು ಮಾಡಿಕೊಡುತ್ತಿದ್ದಾರೆ. ಬಂದರಿನಲ್ಲೂ ಕಟ್ಟು ನಿಟ್ಟಿನ ವ್ಯವಸ್ಥೆ ಕೈಗೊಳ್ಳಲಾಗಿದ್ದು, ಬೋಟ್‌ ಮಾಲಕರಿಗೂ ಕೂಡ ಬಂದರಿನ ಒಳಗೆ ಪ್ರವೇಶಿಸಲು ಬೋಟಿನ ಆರ್‌.ಸಿ. ಇದ್ದರಷೇr ಮಾತ್ರ ಪೊಲೀಸರು ಅವಕಾಶವನ್ನು ನೀಡುತ್ತಿದ್ದಾರೆ.

ಮೇಲಿಂದ ಮೇಲೆ ಸಂಕಷ್ಟ
ಹವಾಮಾನದ ವೈಪರೀತ್ಯ, ಚಂಡಮಾರುತ, ಡೀಸೆಲ್‌ ಬೆಲೆ ಏರಿಕೆ, ಮೀನಿನ ಕ್ಷಾಮದಿಂದ ತತ್ತರಿಸಿದ ಮೀನುಗಾರರಿಗೆ ಇದೀಗ ಎರಗಿದ ಕೋವಿಡ್‌ 19 ವೈರಸ್‌ನಿಂದಾಗಿ ಅನಿರ್ದಿಷ್ಟಾವಧಿ ಲಾಕ್‌ಡೌನ್‌ ಮತ್ತಷ್ಟು ಅರ್ಥಿಕ ಸಂಕಷ್ಟಕ್ಕೆ ಸಿಲುಕುವಂತೆ ಮಾಡಿದೆ. ಸರಕಾರವೂ ಮೀನುಗಾರರ ಸಂಕಷ್ಟಕ್ಕೆ ಸ್ಪಂದಿಸಬೇಕಾಗಿದೆ ಎಂದು ಮೀನುಗಾರರು ಆಗ್ರಹಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next