Advertisement

ಸಂಪೂರ್ಣ ಹದಗೆಟ್ಟ ಹೆಬ್ರಿ ಕಾಲೇಜು ರಸ್ತೆ

09:52 PM Nov 02, 2020 | mahesh |

ಹೆಬ್ರಿ: ಉಡುಪಿಗೆ ಸಂಪರ್ಕಿಸುವ ಹೆಬ್ರಿ ಕಾಲೇಜು ರಸ್ತೆ ಸಂಪೂರ್ಣ ಹದಗೆಟ್ಟಿದ್ದು ಹೊಂಡ ಗುಂಡಿಗಳ ನಡುವೆ ರಸ್ತೆ ಹುಡುಕುವ ಪರಿಸ್ಥಿತಿ ನಿರ್ಮಾಣವಾಗಿದೆ.

Advertisement

ಜಿ.ಪಂ. ರಸ್ತೆ ಇದಾಗಿದ್ದು ಕಳೆದ ಒಂದೂವರೆ ವರ್ಷಗಳಿಂದ ಈ ಬಗ್ಗೆ ಸಂಬಂಧಪಟ್ಟವರ ಗಮನಕ್ಕೆ ತಂದರೂ ಯಾವುದೇ ಪ್ರಯೋಜವಾಗಿಲ್ಲ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಮಾರ್ಗದಲ್ಲಿ ದಿನನಿತ್ಯ ನೂರಾರು ವಾಹನಗಳು ಸಂಚರಿಸುತ್ತಿದ್ದು, ಹೊಂಡಗಳ ನಡುವೆ ಚಲಿಸುವಾಗ ನಿಯಂತ್ರಣ ತಪ್ಪಿ ಹಲವಾರು ಬಾರಿ ಅನಾಹುತಗಳು ಸಂಭವಿಸಿವೆ. ಅಲ್ಲದೆ ಸಮೀಪದಲ್ಲಿ ಸರಕಾರಿ ಆಸ್ಪತ್ರೆ ಇದ್ದು ದಿನನಿತ್ಯ ರೋಗಿಗಳು ಈ ರಸ್ತೆಯಲ್ಲಿ ಸಂಚರಿಸುತ್ತಾರೆ. ಈ ಹಿಂದೆ ಸಂಪೂರ್ಣ ಹದಗೆಟ್ಟ ರಸ್ತೆಗೆ ಸ್ವಲ್ಪ ಭಾಗದವರೆಗೆ ಮಾತ್ರ ಅಸಮರ್ಪಕ ಕಾಂಕ್ರೀಟ್‌ ಕಾಮಗಾರಿ ಮಾಡಿದ್ದು ಅದು ಕೂಡ ಸಂಪೂರ್ಣ ಹಾನಿಗೊಂಡಿದೆ ಎಂದು ಇಲ್ಲಿನ ಸ್ಥಳೀಯರು ಹೇಳುತ್ತಾರೆ. ಇನ್ನಾದರೂ ಸಂಬಂಧಪಟ್ಟ ಇಲಾಖೆ ಕೂಡಲೇ ಸಮಸ್ಯೆ ಬಗೆಹರಿಸಿ. ಇಲ್ಲದಿದ್ದಲ್ಲಿ ಪ್ರತಿಭಟನೆ ಮಾಡಲಾಗುವುದು ಎಂದು ಸ್ಥಳೀಯರು ತಿಳಿಸಿದ್ದಾರೆ.

ಸಮೀಪದಲ್ಲಿಯೇ ಹೆಬ್ರಿ ತಾಲೂಕು ಕಚೇರಿ ನಿರ್ಮಾಣ
ಕಾಲೇಜು ರಸ್ತೆ ಸಮೀಪದಲ್ಲಿಯೇ ಹೆಬ್ರಿ ತಾಲೂಕು ಕಚೇರಿ ಕಟ್ಟಡ ನಿರ್ಮಾಣವಾಗುತ್ತಿದ್ದು, ಬ್ರಹ್ಮಾವರ ಮಾರ್ಗ, ಕುಚ್ಚಾರು ಮಾರ್ಗದಿಂದ ಬಂದವರು ಮೂರು ರಸ್ತೆಯಲ್ಲಿ ಇಳಿದು ಇದೇ ಕಾಲೇಜು ಮಾರ್ಗದಲ್ಲಿ ಮುಂದೆ ತಾಲೂಕು ಕಚೇರಿಗೆ ಬರಬೇಕಾಗುತ್ತದೆ. ರಸ್ತೆ ತುಂಬ ಕಿರಿದಾಗಿರುವುದರಿಂದ ಇದನ್ನು ದ್ವಿಪಥ ರಸ್ತೆಯನ್ನಾಗಿ ಅಭಿವೃದ್ಧಿಪಡಿಸಿದಲ್ಲಿ ಜನರಿಗೆ ಅನುಕೂಲವಾಗಲಿದೆ ಎಂದು ಸಾರ್ವಜನಿಕರು ತಿಳಿಸಿದ್ದಾರೆ.

ಸಮಸ್ಯೆ ಬಗ್ಗೆ ವರದಿ ಪ್ರಕಟ
ಕಳೆದ ಮಳೆಗಾಲದಲ್ಲಿ ಈ ರಸ್ತೆ ದುರಸ್ತಿಯ ಬಗ್ಗೆ ಉದಯವಾಣಿ ಸಮರ್ಪಕ ವರದಿ ಪ್ರಕಟಿಸಿತ್ತು. ಆ ಸಂದರ್ಭ ಸಂಬಂಧಪಟ್ಟ ಜನಪ್ರತಿನಿಧಿಗಳು, ಪ್ರಕೃತಿ ವಿಕೋಪ ನಿಧಿ ಅಡಿಯಲ್ಲಿ ಈ ಮಾರ್ಗಕ್ಕೆ 5 ಲಕ್ಷ ರೂ. ಅನುದಾನ ಮಂಜೂರಾಗಿದೆ. ಅಲ್ಲದೆ ಬೇರೆ ಅನುದಾನದ ಪ್ರಯತ್ನದೊಂದಿಗೆ ಮಳೆಗಾಲ ಮುಗಿದ ಅನಂತರ ಶೀಘ್ರ ರಸ್ತೆ ಕಾಮಗಾರಿ ಆರಂಭವಾಗುವುದು ಎಂದು ಕಳೆದ ಮಳೆಗಾಲದಲ್ಲಿ ಪ್ರತಿಕ್ರಿಯೆ ನೀಡಿದ್ದರು. ಆದರೆ ಯಾವುದೇ ಕಾಮಗಾರಿ ಆರಂಭವಾಗದಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.

ಅನುದಾನ ಬಿಡುಗಡೆಯಾಗಿದೆ
ಪಿಡಬ್ಲ್ಯುಡಿ ಬಜೆಟ್‌ ವರ್ಕ್‌ ಅಡಿಯಲ್ಲಿ 25 ಲಕ್ಷ ರೂ.ಅನುದಾನ ಬಿಡುಗಡೆಯಾಗಿದೆ. ಹೆಬ್ರಿ ಸಮುದಾಯ ಆರೋಗ್ಯ ಕೇಂದ್ರದ ಸಮೀಪವಿರುವ ರಸ್ತೆಯಿಂದ ಪ್ರಥಮ ದರ್ಜೆ ಕಾಲೇಜಿನ ತನಕ 5.5 ಅಡಿ ಅಗಲದಲ್ಲಿ ಡಾಮರು ಕಾಮಗಾರಿ ನವೆಂಬರ್‌ ತಿಂಗಳ ಮೊದಲ ವಾರದಲ್ಲಿ ಆರಂಭಗೊಳ್ಳಲಿದ್ದು, ಡಿ. 25ರ ಒಳಗೆ ರಸ್ತೆ ಕಾಮಗಾರಿ ಪೂರ್ಣಗೊಳ್ಳಲಿದೆ.
-ಲಾಯ್ಡ ಸಂದೀಪ್‌ ಡಿ’ಸಿಲ್ವ,  ಕಿರಿಯ ಅಭಿಯಂತರರು, ಲೋಕೋಪಯೋಗಿ ಇಲಾಖೆ

Advertisement
Advertisement

Udayavani is now on Telegram. Click here to join our channel and stay updated with the latest news.

Next