Advertisement

ಸಂಪೂರ್ಣ ಹದಗೆಟ್ಟ ಹೊದ್ರಾಳಿ-ಕೋಟೇಶ್ವರ ಸಂಪರ್ಕ ರಸ್ತೆ

10:51 PM Jul 21, 2019 | Team Udayavani |

ಕೋಟೇಶ್ವರ: ಇಲ್ಲಿನ ಕೋಟಿಲಿಂಗೇಶ್ವರ ದೇಗುಲದ ಹಿಂಭಾಗದ ಹೊದ್ರಾಳಿ ಸಂಪರ್ಕ ಕಲ್ಪಿಸುವ ರಸ್ತೆ ಸಂಪೂರ್ಣವಾಗಿ ಹದಗೆಟ್ಟಿದ್ದು ಪಾದಚಾರಿಗಳಿಗೂ ನಡೆದಾಡುವುದಕ್ಕೆ ಸಾಧ್ಯವಾಗದಷ್ಟು ದುಸ್ಥಿತಿಯಲ್ಲಿದೆ.

Advertisement

ಕರಾವಳಿಯ ಅನೇಕ ಮೀನುಗಾರಿಕಾ ಸಂಪರ್ಕ ರಸ್ತೆಯು ಅಭಿವೃದ್ಧಿಗೊಂಡಿದ್ದರು ಹೊದ್ರಾಳಿ ಅಮವಾಸ್ಯೆ ಕಡು ಮುಖ್ಯರಸ್ತೆಯು ಹೊಂಡಮಯವಾಗಿದ್ದು ಆ ಬಗ್ಗೆ ಇಲಾಖೆಗಳು ಯಾವುದೇ ಕ್ರಮಕೈಗೊಳ್ಳದಿರುವುದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.

ಸರಕಾರದ ಅನುದಾನವಿಲ್ಲ
ಗ್ರಾಮಾಂತರ ಪ್ರದೇಶದ ರಸ್ತೆಗಳ ಅಭಿವೃದ್ಧಿಗೆ ಪೂರಕವಾದ ವ್ಯವಸ್ಥೆ ಕಲ್ಪಿಸಬೇಕು, ಆ ಮೂಲಕ ಸಂಚಾರ ವ್ಯವಸ್ಥೆಯಲ್ಲಿನ ತೊಡಕನ್ನು ನಿಭಾಯಿಸಬೇಕು. ಜನಸಾಮಾನ್ಯರ ಭವಣೆಗೊಂದು ಶಾಶ್ವತ ಪರಿಹಾರ ಒದಗಿಸಬೇಕು ಎಂಬಿತ್ಯಾದಿ ವಿಚಾರಗಳ ಬಗ್ಗೆ ಬೀಜಾಡಿ ಗ್ರಾ.ಪಂ.ನಲ್ಲಿ ಚರ್ಚೆ ನಡೆದಿತ್ತು. ಆದರೆ ಸರಕಾರ ಹಾಗೂ ಇಲಾಖೆ ಈ ಭಾಗದ ರಸ್ತೆಯ ಅಭಿವೃದ್ಧಿಗೆ ಅನುದಾನ ಬಿಡುಗಡೆ ಮಾಡದಿರುವುದು ರಸ್ತೆ ಹದಗೆಡಲು ಕಾರಣವಾಗಿದೆ.

ವ್ಯಾಪಾರ ವ್ಯವಹಾರ ಕೇಂದ್ರವಾಗಿ ಬೆಳೆಯುತ್ತಿರುವ ಕೋಟೇಶ್ವರದ ಸನಿಹದ ಸಂಪರ್ಕ ರಸ್ತೆಯಾಗಿರುವ ಹೊದ್ರಾಳಿ ಅಮವಾಸ್ಯೆ ಕಡು ನೇರ ಮಾರ್ಗದ ಸುಮಾರು 2.5 ಕಿ.ಮೀ. ದೂರ ವ್ಯಾಪ್ತಿಯ ಈ ರಸ್ತೆಯಲ್ಲಿ ಪಾದಚಾರಿ ಸಹಿತ ದ್ವಿಚಕ್ರ ವಾಹನಗಳು ಸಾಗದಷ್ಟು ಹೊಂಡಗಳು ನಿರ್ಮಾಣವಾಗಿವೆೆ. ನೀರಿನ ಹೊರ ಹರಿವಿಗೆ ವ್ಯವಸ್ಥೆಯಲ್ಲದೇ ನಿಂತ ನೀರಿನಿಂದ ರಸ್ತೆ ಸಂಪೂರ್ಣ ಕೆಸರುಮಯವಾಗಿದ್ದು ನಡೆದುಕೊಂಡು ಸಾಗುವ ಮಂದಿಗೆ ಕೆಸರು ನೀರಿನ ಪ್ರೋಕ್ಷಣೆಯಾಗುತ್ತಿರುವುದು ನಿತ್ಯ ದರ್ಶನವಾಗಿದೆ.

ಪಂ. ಸಂಪನ್ಮೂಲದ ಕೊರತೆ,
ಇಲಾಖೆಗೆ ಮಾಹಿತಿ ಇಲ್ಲ
ಗ್ರಾಮೀಣ ಪ್ರದೇಶದ ಹೊಸ ಗ್ರಾ.ಪಂ. ಆಗಿ ರೂಪುಗೊಂಡಿರುವ ಬೀಜಾಡಿ ಗ್ರಾಮ ಪಂಚಾಯತ್‌ನಲ್ಲಿ ಸಂಪನ್ಮೂಲದ ಕೊರತೆ ಎದುರಾಗಿದ್ದು ಹೊದ್ರಾಳಿ ರಸ್ತೆ ಡಾಮರೀಕರಣಕ್ಕೆ ಹಣವಿಲ್ಲದೇ ಕೈಚಲ್ಲಿ ಕುಳಿತುಕೊಳ್ಳಬೇಕಾಗಿದೆ.

Advertisement

ಈ ಬಗ್ಗೆ ಲೋಕೋಪಯೋಗಿ ಇಲಾಖೆಯನ್ನು ಸಂಪರ್ಕಿಸಿದರೆ ರಸ್ತೆ ಡಾಮರೀಕರಣಕ್ಕೆ ಅನುದಾನ ಬಿಡುಗಡೆಯಾಗಿಲ್ಲವೆಂಬ ಸಬೂಬು ಕೇಳಿ ಬರುತ್ತಿರುವುದು ಸಾರ್ವಜನಿಕರನ್ನು ಪೇಚಿಗೆ ಸಿಲುಕಿಸಿದೆ.

ಜನಪ್ರತಿನಿಧಿಗಳಿಗೆ ಮನವಿ
ಬೀಜಾಡಿ ಗ್ರಾ.ಪಂ.ನಲ್ಲಿ ಆರ್ಥಿಕ ಸಂಪನ್ಮೂಲದ ಕೊರತೆಯಿದೆ. ಹೊದ್ರಾಳಿ ರಸ್ತೆ ಡಾಮರೀಕರಣಕ್ಕೆ ಇಲಾಖೆ ಹಾಗೂ ಜನಪ್ರತಿನಿಧಿಗಳ ಮೊರೆ ಹೋಗಲಾಗಿದೆ.
-ಗಣೇಶ,
ಪಿಡಿಒ, ಬೀಜಾಡಿ ಗ್ರಾ.ಪಂ.

ಅನುದಾನ ಸಿಕ್ಕಲ್ಲಿ ಅಭಿವೃದ್ಧಿ
ಹೊದ್ರಾಳಿ ರಸ್ತೆಯ ಡಾಮರೀಕರಣಕ್ಕೆ ಸರಕಾರದಿಂದ ಯಾವುದೇ ಅನುದಾನ ಬಿಡುಗಡೆಯಾಗಿಲ್ಲ. ಕರಾವಳಿಯ ಮೀನುಗಾರಿಕಾ ರಸ್ತೆಗೆ ಬಿಡುಗಡೆಯಾದ ಅನುದಾನದಿಂದ ಈಗಾಗಲೇ ಕಾಂಕ್ರೀಟ್‌ ರಸ್ತೆಯ ನಿರ್ಮಾಣ ಕಾರ್ಯ ಪೂರ್ಣಗೊಂಡಿದೆ. ಸರಕಾರ ಅನುದಾನ ಬಿಡುಗಡೆಗೊಳಿಸಿದಲ್ಲಿ ಈ ಭಾಗದ ರಸ್ತೆಯ ಅಭಿವೃದ್ಧಿಗೊಳಿಸಲಾಗುವುದು.
-ದುರ್ಗಾದಾಸ್‌,
ಎಂಜಿನಿಯರ್‌, ಲೋಕೋಪಯೋಗಿ ಇಲಾಖೆ

– ಡಾ| ಸುಧಾಕರ ನಂಬಿಯಾರ್‌

Advertisement

Udayavani is now on Telegram. Click here to join our channel and stay updated with the latest news.

Next