ಬಾಗಲಕೋಟೆ: ದೇಶದಲ್ಲಿ ರೈಲ್ವೆ ಯೋಜನೆಗಳನ್ನು ಪೂರ್ಣಗೊಳಿಸಲು ಪ್ರಧಾನಿ ನರೇಂದ್ರ ಮೋದಿ ಒತ್ತು ನೀಡಿದ್ದು, ಈಗಾಗಲೇ ಘೋಷಿಸಿರುವ ಹಾಗೂ ಅರ್ಧಕ್ಕೆ ನಿಂತಿರುವ ಎಲ್ಲ ಯೋಜನೆಗಳನ್ನು 2021ರ ವೇಳೆಗೆ ಪೂರ್ಣಗೊಳಿಸಲಾಗುವುದು ಎಂದು ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ಹೇಳಿದರು.
ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆ ಶನಿವಾರ ಹಮ್ಮಿಕೊಂಡಿದ್ದ ರೈಲ್ವೆ ಸೌಲಭ್ಯಗಳ ಕುರಿತು ಜನಪ್ರತಿನಿಧಿಗಳು, ಅಧಿಕಾರಿಗಳು ಹಾಗೂ ಹೋರಾಟಗಾರರೊಂದಿಗಿನ ಸಭೆಯಲ್ಲಿ ಮಾತನಾಡಿ, ಘೋಷಣೆಗೊಂಡು ಪೂರ್ಣಗೊಳ್ಳದ ಯೋಜನೆಗಳನ್ನು ಮುಕ್ತಾಯಗೊಳಿಸಲು ಹೆಚ್ಚು ಆದ್ಯತೆ ನೀಡಲಾಗುತ್ತಿದೆ ಎಂದರು.
ಕರ್ನಾಟಕದ ರೈಲ್ವೆ ಯೋಜನೆಗಳಿಗೆ ಈಗ ಸುವರ್ಣಯುಗ. ಬಾಗಲಕೋಟೆ-ಕುಡಚಿ ರೈಲ್ವೆ ಮಾರ್ಗ, ಗದಗ-ಹುಟಗಿ ಡಬ್ಲಿಂಗ್ ನಿರ್ಮಾಣ ಕಾರ್ಯಗಳು ನಡೆದಿದ್ದು, ಇವುಗಳಿಗೆ ವೇಗ ನೀಡಲಾಗುವುದು ಎಂದರು.
ಚರಂತಿಮಠರ ಕಾಲಿಗೆ ಬಿದ್ದು ಆಶೀರ್ವಾದ ಪಡೆದ ಸಚಿವ: ರಾಜ್ಯದ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳರು ಕಳೆದ ವಾರ ಜಿಲ್ಲಾಡಳಿತ ಭವನದಲ್ಲಿ ತಮ್ಮ ಪಕ್ಷದ ಶಾಸಕ ಡಾ|ವೀರಣ್ಣ ಚರಂತಿಮಠರ ಕಾಲಿಗೆ ಬಿದ್ದು ನಮಸ್ಕರಿಸಿದ್ದರು. ಶನಿವಾರ ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿಯವರು ಚರಂತಿಮಠರ ಕಾಲಿಗೆ ಬಿದ್ದು ಆಶೀರ್ವಾದ ಪಡೆದಿದ್ದಾರೆ.
ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆ ಹಮ್ಮಿಕೊಂಡಿದ್ದ ರೈಲ್ವೆ ಸೌಲಭ್ಯಗಳ ಕುರಿತು ಚರ್ಚೆ ಹಾಗೂ ಅಹವಾಲು ಸ್ವೀಕಾರ ಕಾರ್ಯಕ್ರಮದ ವೇದಿಕೆಯಲ್ಲೇ ಸಚಿವ ಸುರೇಶ ಅಂಗಡಿಯವರು ಡಾ|ಚರಂತಿಮಠರ ಕಾಲಿಗೆ ನಮಸ್ಕರಿಸಿದರು. ನೀವು ಸ್ವಾಮಿಗಳು, ಆಶೀರ್ವಾದ ಮಾಡಿ ಎಂದು ಹೇಳಿ ನಮಸ್ಕರಿಸಿದರು. ಅಷ್ಟರಲ್ಲೇ ಚರಂತಿಮಠರು ಸಚಿವ ಅಂಗಡಿಯವರ ಕೈ ಹಿಡಿದರು.