Advertisement

ಕಾಲಮಿತಿಯಲ್ಲಿ ಕಾಮಗಾರಿ ಮುಗಿಸಿ

04:02 PM May 13, 2019 | pallavi |

ರಾಣಿಬೆನ್ನೂರ: ‘ಕಾಲಮಿತಿಯಲ್ಲಿ ಕೆರೆ ಅಭಿವೃದ್ಧಿ ಅನುಮಾನ’ ಎಂಬ ತಲೆ ಬರಹದಡಿ ಏ. 27 ರಂದು ಉದಯವಾಣಿಯಲ್ಲಿ ಸುದ್ದಿ ಪ್ರಕಟವಾಗಿದ್ದ ಹಿನ್ನೆಲೆ ಮಾಜಿ ಸಭಾಪತಿ ಕೆ.ಬಿ.ಕೋಳಿವಾಡ ಅವರು ಇಲ್ಲಿನ ದೊಡ್ಡಕೆರೆ ಕಾಮಗಾರಿ ವೀಕ್ಷಿಸಿ, ನಿಗದಿತ ಸಮಯದಲ್ಲಿ ಕಾಮಗಾರಿ ಪೂರ್ಣಗೊಳಿಸುವಂತೆ ಅಧಿಕಾರಿ ಮಾರುತಿ ಗುಜ್ಜರ ಅವರಿಗೆ ಸೂಚಿಸಿದರು.

Advertisement

ಕೇಂದ್ರ ಪುರಸ್ಕೃತ ಅಮೃತ್‌ ಯೋಜನೆಯಡಿ 29.82 ಕೋಟಿ ರೂ.ಗಳಲ್ಲಿ ಕಾಮಗಾರಿ ಪ್ರಾರಂಭವಾಗಿ 6 ತಿಂಗಳು ಗತಿಸಿದರೂ ಕೇವಲ ಶೇ.20 ರಷ್ಟು ಕಾಮಗಾರಿಯಾಗಿದೆ. ಕೆಲವು ದಿನಗಳಿಂದ ಕಾಮಗಾರಿಯೂ ಸ್ಥಗಿತಗೊಂಡಿದೆ. ಈ ರೀತಿ ಸಾಗಿದರೆ 24 ತಿಂಗಳ ಅವಧಿಯೊಳಗೆ ಕಾಮಗಾರಿ ಪೂರ್ಣಗೊಳ್ಳುವುದು ಅಸಾಧ್ಯ. ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನ ಹರಿಸುವುದು ಸೂಕ್ತ ಎಂಬ ಸುದ್ದಿ ಪ್ರಕಟವಾಗಿತ್ತು.

ಕೆರೆ ವೀಕ್ಷಣೆ ಮಾಡಿ ಮಾತನಾಡಿದ ಮಾಜಿ ಸಭಾಪತಿ ಕೆ.ಬಿ.ಕೋಳಿವಾಡ ಅವರು, ನಗರದ ಜನರು ಕುಡಿಯುವ ನೀರಿಗೆ ಪರಿತಪಿಸಬಾರದು ಎಂಬ ಉದ್ದೇಶದಿಂದ ನಗರದ ಗಂಗಾಜಲ ದೊಡ್ಡ ಕೆರೆ ಹಾಗೂ ತಾಲೂಕಿನ ಕರೂರ, ಚಳಗೇರಿ, ಕಮದೋಡ ಕೆರೆಗಳಿಗೆ ಅಪ್ಪರ ತುಂಗಾ ಕಾಲುವೆಯ ಮೂಲಕ ನೀರು ತುಂಬಿಸುವ 100 ಕೋಟಿ ರೂ.ಗಳ ಕ್ರೀಯಾ ಯೋಜನೆ ತಯಾರಿಸಿ ಮಂಜೂರಾತಿಗಾಗಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಗಂಗಾಜಲ ದೊಡ್ಡ ಕೆರೆ ಅಭಿವೃದ್ಧಿಪಡಿಸುವ ಕನಸು ನನ್ನದಾಗಿತ್ತು. ಕಾರಣಾಂತರದಿಂದ ರಾಜಕೀಯ ಬೆಳವಣಿಗೆಯಿಂದ ಮುಂದುವರಿಸಲು ಸಾಧ್ಯವಾಗಲಿಲ್ಲ. ನಂತರ ಶಾಸಕ ಆರ್‌.ಶಂಕರ್‌ ಮತ್ತು ಸಂಸದ ಶಿವಕುಮಾರ ಉದಾಸಿ ಅವರು ಈ ಯೋಜನೆಗೆ 2018 ಅ. 5ರಂದು ಭೂಮಿಪೂಜೆ ನೆರವೇರಿಸುವ ಮೂಲಕ ಚಾಲನೆ ನೀಡಿದ್ದು ಸ್ವಾಗತಾರ್ಹ. ತಾಲೂಕಿನ ಅಭಿವೃದ್ಧಿ ಯಾರೇ ಮಾಡಿದರೂ ಸಂತೋಷದ ವಿಷಯ. ಆದರೆ, ಅಭಿವೃದ್ಧಿ ಕಾಮಗಾರಿಗಳತ್ತ ಗಮನ ಹರಿಸುವುದು ಸೂಕ್ತ ಎಂದರು.

ಈ ಸಂದರ್ಭದಲ್ಲಿ ನೀಲಕಂಠಪ್ಪ ಕುಸಗೂರ, ಬಸನಗೌಡ ಮರದ, ಪುಟ್ಟಪ್ಪ ಮರಿಯಮ್ಮನವರ, ಶೇಖಪ್ಪ ಹೊಸಗೌಡ್ರ, ಶೇರುಖಾನ್‌ ಕಾಬೂಲಿ, ಬಸವರಾಜ ಹುಚ್ಚಗೊಂಡರ, ಸಿದ್ದಣ್ಣ ಚಿಕ್ಕಬಿದರಿ, ಇಕ್ಬಾಲಸಾಬ್‌ ರಾಣೆಬೆನ್ನೂರ, ಗಂಗಾಧರ ಬಣಕಾರ, ಶಶಿಧರ ಬಸೇನಾಯ್ಕರ ಸೇರಿದಂತೆ ವಿವಿಧ ಅಧಿಕಾರಿಗಳು ಇದ್ದರು.

ಪ್ರಾರಂಭದಲ್ಲಿ ಚುರುಕುಗೊಂಡಿದ್ದ ಕಾಮಗಾರಿ ಪ್ರಸ್ತುತ ಮಂದಗತಿಯಲ್ಲಿ ಸಾಗಿದೆ ಎಂಬ ಸುದ್ದಿ ಉದಯವಾಣಿಯಲ್ಲಿ ಪ್ರಕಟವಾದ ವರದಿ ನೋಡಿ ಇಂದು ಕೆರೆ ವೀಕ್ಷಣೆ ಮಾಡಲು ಆಗಮಿಸಿದ್ದೇನೆ. ಸಮ್ಮಿಶ್ರ ಸರ್ಕಾರ ಜನಪರವಾಗಿ ಕೆಲಸ ಮಾಡುತ್ತದೆ. ಸಾರ್ವಜನಿಕರ ಅಭ್ಯುದಯಕ್ಕೆ ನಾನು ಸದಾಸಿದ್ಧನಾಗಿದ್ದು, ಅಧಿಕಾರಿಗಳ ಮೇಲೆ ಒತ್ತಡ ತಂದು ಕೆರೆ ಅಭಿವೃದ್ಧಿ ಕಾಮಗಾರಿ ಕಾಲ ಮಿತಿಯಲ್ಲಿ ಪೂರ್ಣಗೊಳಿಸಲು ಶ್ರಮಿಸುವೆ.
•ಕೆ.ಬಿ.ಕೋಳಿವಾಡ,ಮಾಜಿ ಸಭಾಪತಿ

Advertisement
Advertisement

Udayavani is now on Telegram. Click here to join our channel and stay updated with the latest news.

Next