ಬೆಂಗಳೂರು: ರಾಜಧಾನಿ ಅಭಿವೃದ್ಧಿಗೆ ಕೈಗೊಂಡಿರುವ ಯೋಜನೆಗಳನ್ನು ಕಾಲ ಮಿತಿಯಲ್ಲಿ ಪೂರ್ಣಗೊಳಿಸುವುದಾಗಿ ಸಿಎಂ ಕುಮಾರಸ್ವಾಮಿ ಭರವಸೆ ನೀಡಿದ್ದಾರೆ.
ಬಯೋಕಾನ್ ಮುಖ್ಯಸ್ಥೆ ಕಿರಣ್ ಮಜುಂದಾರ್ ಷಾ ಹಾಗೂ ಬಿ-ಪ್ಯಾಕ್ ಸ್ವಯಂ ಸೇವಾ ಸಂಸ್ಥೆ ಪದಾಧಿಕಾರಿಗಳ ಜತೆ ಬೆಂಗಳೂರು ಅಭಿವೃದ್ಧಿ ಕುರಿತು ಚರ್ಚಿಸಿದ ನಂತರ ಮಾತನಾಡಿದ ಅವರು, ಡಿಸಿಎಂ ಡಾ.ಜಿ. ಪರಮೇಶ್ವರ್ ಹಾಗೂ ಹಿರಿಯ ಅಧಿಕಾರಿಗಳೊಂದಿಗೆ ಪ್ರತಿ ತಿಂಗಳು ಪ್ರಗತಿ ಪರಿಶೀಲನೆ ಸಭೆ ನಡೆಸಿ, ಎಲ್ಲ ಅಭಿವೃದ್ಧಿ ಕಾಮಗಾರಿಗಳನ್ನು ಚುರುಕುಗೊಳಿಸಲಾಗುವುದುಎಂದು ಹೇಳಿದರು.
ನಗರ ಎದುರಿಸುತ್ತಿರುವ ಸಂಚಾರ ದಟ್ಟಣೆ, ರಸ್ತೆ ಅಭಿವೃದ್ಧಿ, ತ್ಯಾಜ್ಯ ನಿರ್ವಹಣೆ, ಕೆರೆಗಳ ಒತ್ತುವರಿ ಯಂತಹ ಸಮಸ್ಯೆಗಳ ಪರಿಹಾರ, ಎಲ್ಲ ರೀತಿಯ ಅಭಿವೃದ್ಧಿ ಹಾಗೂ ಮೆಟ್ರೋ ಕಾಮಗಾರಿ ಬಗ್ಗೆ ಗಮನ ಹರಿಸುವ ಮೂಲಕ ಮುಂದಿನ ಆರು ತಿಂಗಳಲ್ಲಿ ನಗರದ ಅಭಿವೃದ್ಧಿಯಲ್ಲಿ ಸಾರ್ವಜನಿಕರಿಗೆ ಬದಲಾವಣೆ ಕಾಣುವಂತೆ ಮಾಡುತ್ತೇವೆ ಎಂದರು.
ನಗರದ ಸಂಚಾರ ದಟ್ಟಣೆ ಹಾಗೂ ಕಸದ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು, ಅಭಿವೃದ್ಧಿ ಕಾಮಗಾರಿಗಳನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಲು ಸಿಎಂಗೆ ಮನವಿ ಮಾಡಿದ್ದೇವೆ. ವೈಟ್‌ಪೀಲ್ಡ್, ಎಲೆಕ್ಟ್ರಾನಿಕ್ ಸಿಟಿ ಹಾಗೂ ಹೆಬ್ಬಗೋಡಿ ಭಾಗದಲ್ಲಿ ಸಂಚಾರ ದಟ್ಟಣೆ ನಿಯಂತ್ರಿಸಲು ಮೆಟ್ರೋ ಸಂಪರ್ಕ ಅತ್ಯಗತ್ಯ ಎಂಬುದನ್ನು ಮನದಟ್ಟು ಮಾಡಿದ್ದೇವೆ. ಆರು ತಿಂಗಳಲ್ಲಿ ಇದರ ಪರಿಣಾಮ
ಕಾಣುವ ವಿಶ್ವಾಸವಿದೆ.
ಕಿರಣ್ ಮಜುಂದಾರ್ ಷಾ, ಬಯೋಕಾನ್ ಮುಖ್ಯಸ್ಥೆ