Advertisement

ಕಾಮಗಾರಿ ಮಳೆಗಾಲದೊಳಗೆ ಪೂರ್ಣಗೊಳಿಸಿ

01:30 PM Apr 23, 2017 | Team Udayavani |

ಹುಬ್ಬಳ್ಳಿ: ಕಿತ್ತೂರ ಚನ್ನಮ್ಮ ವೃತ್ತ ಬಳಿಯ ಈದ್ಗಾ ಮೈದಾನದಲ್ಲಿ ಪಾಲಿಕೆಯಿಂದ ಕೈಗೊಳ್ಳಲಾಗುತ್ತಿರುವ ಸೌಂದಯೀìಕರಣ ಕಾಮಗಾರಿಯನ್ನು ಮಳೆಗಾಲ ಬರುವುದರೊಳಗೆ ಪೂರ್ಣಗೊಳಿಸಬೇಕು. ಮೈದಾನವನ್ನು ಮೊದಲಿನಂತೆ ಯಥಾವತ್ತು ಕಾಯ್ದುಕೊಳ್ಳಬೇಕೆಂದು ಮಹಾಪೌರ ಡಿ.ಕೆ. ಚವ್ಹಾಣ ಪಾಲಿಕೆ ಅಧಿಕಾರಿಗಳಿಗೆ ಸೂಚಿಸಿದರು. 

Advertisement

ಈದ್ಗಾ ಮೈದಾನದಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿಯನ್ನು ಶನಿವಾರ ಆಯುಕ್ತರೊಂದಿಗೆ ವೀಕ್ಷಿಸಿ ಪರಿಶೀಲಿಸಿದ ಅವರು, ಕಾಮಗಾರಿಯ ವರ್ಕ್‌ ಆರ್ಡರ್‌ ಕೊಟ್ಟು ಮೂರು ತಿಂಗಳಾದರೂ ಏಕೆ ಇನ್ನು ವಿಳಂಬ ಮಾಡಲಾಗುತ್ತಿದೆ. ಮೈದಾನ ಸುತ್ತಲು ಗಟಾರವನ್ನು ಏಕೆ ನಿರ್ಮಿಸಿಲ್ಲ. 

ಮುಂದಿನ ದಿನಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಮಳೆಯಾದರೆ ಸಾರ್ವಜನಿಕರಿಗೆ, ಬೀದಿಬದಿ ವ್ಯಾಪಾರಿಗಳಿಗೆ ಹಾಗೂ ವಾಹನ ಸವಾರರಿಗೆ ತುಂಬಾ ತೊಂದರೆಯಾಗುತ್ತದೆ. ಆದ್ದರಿಂದ ಇನ್ನು ತಡಮಾಡದೆ ಸೋಮವಾರದಿಂದಲೇ ಹಗಲು- ರಾತ್ರಿ ಎನ್ನದೆ ಸುರಕ್ಷತಾ ಕ್ರಮಗಳನ್ನು ಕೈಗೊಂಡು ಕಾಮಗಾರಿ ಬೇಗನೆ ಪೂರ್ಣಗೊಳಿಸಬೇಕೆಂದು ಗುತ್ತಿಗೆದಾರರಿಗೆ ಸೂಚಿಸಿದರು.

ಅಲ್ಲದೆ ಕಾಮಗಾರಿ ವಿಳಂಬ ಮಾಡಿದ್ದಕ್ಕೆ ಗುತ್ತಿಗೆದಾರರಿಗೆ ನೋಟಿಸ್‌ ಕೊಡಿ ಎಂದು ಪಾಲಿಕೆ ಅಧಿಕಾರಿಗಳಿಗೆ ಆದೇಶಿಸಿದರು. ಹಣ್ಣಿನ ವ್ಯಾಪಾರಿಗಳಿಗೆ ರಸ್ತೆಯ ಮೇಲೆ ಮಾರಾಟ ಮಾಡಲು ಅವಕಾಶ ಕೊಟ್ಟಿದ್ದರಿಂದ ವಾಹನಗಳ ಸಂಚಾರಕ್ಕೆ ತೀವ್ರ ಅಡಚಣೆ ಆಗುತ್ತಿದೆ.

ಆದ್ದರಿಂದ ಅವರಿಗೆ ಮೈದಾನದಲ್ಲಿಯೇ ಮೊದಲಿದ್ದ ಸ್ಥಾನದಲ್ಲಿ ಅವಕಾಶ ಕಲ್ಪಿಸಿಕೊಡಬೇಕು. ಟ್ಯಾಕ್ಸಿ ಚಾಲಕರಿಗೂ ವಾಹನಗಳ ನಿಲುಗಡೆಗೆ ಸ್ಥಳಾವಕಾಶ ನೀಡಬೇಕು ಎಂದರು. ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಆಯುಕ್ತ ಸಿದ್ಧಲಿಂಗಯ್ಯ ಹಿರೇಮಠ, ಈದ್ಗಾ ಮೈದಾನವು ನಗರದ ಹೃದಯಭಾಗದಲ್ಲಿದೆ.

Advertisement

ಹೀಗಾಗಿ ಅದನ್ನು ರಾಜ್ಯ ಸರಕಾರದ ವಿಶೇಷ 100 ಕೋಟಿ ರೂ. ಅನುದಾನದಡಿ 1 ಕೋಟಿ ರೂ. ವೆಚ್ಚದಲ್ಲಿ ಉನ್ನತೀಕರಿಸಲಾಗುತ್ತಿದೆ. ಸ್ವತ್ಛತೆ ಕಾಪಾಡಲಾಗುತ್ತಿದೆ. ಮೈದಾನ ಸುತ್ತಲೂ ಗಟಾರ, ಒಂದು ಅಡಿ ಎತ್ತರದ ಗೋಡೆ ನಿರ್ಮಿಸಿ ಗ್ರಿಲ್‌ ಅಳವಡಿಸಲಾಗುತ್ತಿದೆ. ಸುತ್ತಲೂ ಆಕರ್ಷಕ ವಿದ್ಯುತ್‌ ಕಂಬಗಳನ್ನು ಹಾಗೂ ಮೈದಾನದೊಳಗೆ ಕಲರ್‌ ಫೇವರ್ ಫ್ಲೋರಿಂಗ್‌ ಹಾಕಲಾಗುವುದು.

ಇದರ ಕಾಮಗಾರಿಯ ಗುತ್ತಿಗೆಯನ್ನು ಅಶೋಕ ಸುರೇಬಾನ ಎಂಬುವವರಿಗೆ ನೀಡಲಾಗಿದೆ. ಮೈದಾನವನ್ನು ಮೊದಲಿನ ರೀತಿ ಯಥಾವತ್ತಾಗಿ ಕಾಯ್ದುಕೊಳ್ಳಲಾಗುತ್ತದೆ ಎಂದರು. 15 ದಿನದೊಳಗೆ ಗಟಾರ ಕಾಮಗಾರಿ ಪೂರ್ಣಗೊಳಿಸುವಂತೆ ಗುತ್ತಿಗೆದಾರರಿಗೆ ಸೂಚಿಸಲಾಗಿದೆ. ಒಟ್ಟಾರೆ ಕಾಮಗಾರಿಗೂ ಇನ್ನೆರಡು ತಿಂಗಳಲ್ಲಿ ಪೂರ್ಣಗೊಳ್ಳಲಿದೆ. 

ಮೈದಾನದಲ್ಲಿ ಮೊದಲಿನಂತೆ ಬೀದಿಬದಿ ವ್ಯಾಪಾರಿಗಳಿಗೆ ವ್ಯಾಪಾರ ಮಾಡಲು ಅನುಕೂಲ ಕಲ್ಪಿಸಲಾಗುವುದು. ಅವರಿಗೆ ಜಾಗ ಗುರುತಿಸಿಕೊಡಲಾಗುವುದು. ಅವರು ಅಲ್ಲಿಯೆ ತಳ್ಳುವಗಾಡಿ ಇಲ್ಲವೆ ನೆಲದ ಮೇಲೆ ವ್ಯಾಪಾರ ಮಾಡಬಹುದು. ಆದರೆ ಟೆಂಟ್‌ ಹಾಕಲು ಅವಕಾಶ ಕೊಡುವುದಿಲ್ಲ. ಟ್ಯಾಕ್ಸಿಗಳ ನಿಲುಗಡೆಗೂ ಅವಕಾಶ ಮಾಡಿಕೊಡಲಾಗುವುದು ಎಂದರು. ಈ ಸಂದರ್ಭದಲ್ಲಿ ಪಾಲಿಕೆಯ ಅಧಿಕಾರಿಗಳು ಮೊದಲಾದವರು ಇದ್ದರು.   

Advertisement

Udayavani is now on Telegram. Click here to join our channel and stay updated with the latest news.

Next