Advertisement
ಜಿಲ್ಲೆಗೆ ಸಂಬಂಧಿಸಿದಂತೆ ಕರ್ನಾಟಕ ವಿಧಾನ ಪರಿಷತ್‌ನ ಅರ್ಜಿ ಸಮಿತಿಯಲ್ಲಿ ದಾಖಲಾಗಿ ರುವ ಅರ್ಜಿಯ ವಿಚಾರಣೆಯನ್ನು ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆಸಿದ ಅನಂತರ ಸಮಿತಿಯ ಸದಸ್ಯರೊಂದಿಗೆ ಯೋಜನೆಗೆ ಸಂಬಂಧಿಸಿದಂತೆ ಸ್ಥಳ ಪರಿಶೀಲನೆ ನಡೆಸಿ ಅವರು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಈ ಹಿಂದೆ ಪ್ರಸ್ತಾವಿಸಿದ್ದ ಯೋಜನೆಯಲ್ಲಿ, ವಾರಾಹಿಯಿಂದ ನೀರನ್ನು ಬಜೆ ಜಲಾಶಯಕ್ಕೆ ತಂದು ಶುದ್ಧೀಕರಿಸಿ ಉಡುಪಿ ನಗರಕ್ಕೆ ಕುಡಿಯುವ ನೀರು ಒದಗಿಸಲು ಯೋಜನೆ ರೂಪಿಸಲಾಗಿತ್ತು. ಆದರೆ ಆ ವಿಧಾನದಲ್ಲಿ ನೀರನ್ನು ತರುವುದರಿಂದ ಮಾರ್ಗಮಧ್ಯೆ ಇರುವ ಗ್ರಾಮಗಳಿಗೆ ಕುಡಿಯುವ ನೀರು ನೀಡಲು ಸಾಧ್ಯವಿಲ್ಲದಿರುವುದನ್ನು ಮನಗಂಡ ಸಮಿತಿಯು, ಹಾಲಾಡಿ ಬಳಿ ನೀರನ್ನು ಶುದ್ಧೀಕರಿಸಿ, ಬಜೆವರೆಗಿನ ಮಾರ್ಗ ಮಧ್ಯದ 13 ಗ್ರಾಮ ಪಂಚಾಯತ್‌ಗಳ 23 ಗ್ರಾಮಗಳಿಗೆ ಹಾಗೂ ಮೇಲ್ಭಾಗದ ಹಾಲಾಡಿ ಮತ್ತು ಶಂಕರನಾರಾಯಣ ಗ್ರಾಮಗಳಿಗೂ ಕುಡಿಯುವ ನೀರು ಒದಗಿಸುವ ರೀತಿಯಲ್ಲಿ ಯೋಜನೆ ಅನುಷ್ಠಾನಗೊಳಿಸಲು ಮತ್ತು ಈ ಗ್ರಾಮಗಳ ವ್ಯಾಪ್ತಿಯಲ್ಲಿ ಪೈಪ್‌ಲೈನ್ ಕಾಮಗಾರಿ ಮುಗಿದ ಬಳಿಕವೇ ರಸ್ತೆ ನಿರ್ಮಾಣ ಮಾಡುವಂತೆ ಸೂಚಿಸಿರುವುದಾಗಿ ತಿಳಿಸಿದರು.
300 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿರುವ ವಾರಾಹಿ ಯೋಜನೆಯ ಕಾಮಗಾರಿಯಲ್ಲಿ ಉನ್ನತ ಗುಣ ಮಟ್ಟದ ಯಂತ್ರೋಪಕರಣಗಳನ್ನು ಬಳಸಿ, ಯಾವುದೇ ಅಡ್ಡಿಗಳು ಬಾರದಂತೆ ಮುನ್ನೆಚ್ಚರಿಕೆ ವಹಿಸಿ ಕನಿಷ್ಠ 50 ವರ್ಷಗಳ ವರೆಗೆ ಉಡುಪಿಯ ಜನತೆಗೆ ಇದರ ಪ್ರಯೋಜನ ದೊರೆಯುವಂತೆ ಕಾಮಗಾರಿ ಅನುಷ್ಠಾನಗೊಳಿಸಿ ಎಂದು ಅಧಿಕಾರಿಗಳಿಗೆ ಸೂಚಿಸಿರುವುದಾಗಿ ತಿಳಿಸಿದರು. ಕಾಮಗಾರಿಯ ಪ್ರಗತಿ ಬಗ್ಗೆ ಪ್ರತಿ 3 ತಿಂಗಳಿಗೊಮ್ಮೆ ಸಮಿತಿಗೆ ವಿವರವಾದ ವರದಿ ಸಲ್ಲಿಸುವಂತೆ ಸೂಚಿಸಿದ ಅವರು ಯೋಜನೆಯ ಅನುಷ್ಠಾನದಲ್ಲಿ ವಿಳಂಬ ಮಾಡುವ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು. 2022ನೇ ಸಾಲಿನೊಳಗೆ ಶುದ್ದ ಕುಡಿಯುವ ನೀರನ್ನು ಒದಗಿಸಲಾಗುವುದು ಎಂದು ಅಧಿಕಾರಿಗಳು ಸಮಿತಿಗೆ ತಿಳಿಸಿದರು.
Related Articles
Advertisement
ವಿಧಾನ ಪರಿಷತ್‌ನ ಅರ್ಜಿ ಸಮಿತಿಯ ಸದಸ್ಯರಾದ ಶಾಸಕ ಎಸ್.ವಿ. ಸಂಕನೂರ್, ಮರಿ ತಿಬ್ಬೇಗೌಡ , ಪ್ರಕಾಶ್ ರಾಥೋಡ್, ರಘುನಾಥ್ ಮಲ್ಕಾಪುರ, ಪಿ.ಆರ್. ರಮೇಶ್, ಮೋಹನ್ ಕೊಂಡಾಜಿ, ಉಡುಪಿ ಶಾಸಕ ರಘುಪತಿ ಭಟ್, ಜಿಲ್ಲಾಧಿಕಾರಿ ಜಿ. ಜಗದೀಶ್, ಜಿ.ಪಂ. ಸಿಇಒ ಪ್ರೀತಿ ಗೆಹಲೋಟ್, ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು , ವಾರಾಹಿ, ನೀರಾವರಿ , ನಗರಾಭಿವೃದ್ಧಿ ಹಾಗೂ ಅರಣ್ಯ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.