ನವದೆಹಲಿ: ಉನ್ನಾವ್ ಹಾಗೂ ಹೈದರಾಬಾದ್ ಪಶುವೈದ್ಯೆಯ ಮೇಲಿನ ಅತ್ಯಾಚಾರ, ಕೊಲೆ ಘಟನೆಗೆ ಇಡೀ ದೇಶವೇ ಬೆಚ್ಚಿ ಬಿದ್ದಿತ್ತು. ಇದೀಗ ಕೇಂದ್ರ ಸರ್ಕಾರ ಈ ನಿಟ್ಟಿನಲ್ಲಿ ಶೀಘ್ರ ನ್ಯಾಯಕೊಡಿಸುವ ನಿಟ್ಟಿನಲ್ಲಿ ಮಹತ್ವದ ನಿರ್ಧಾರವನ್ನು ಕೈಗೊಂಡಿದೆ.
“ಅತ್ಯಾಚಾರ ಹಾಗೂ ಪೋಕ್ಸೋ ಕಾಯ್ದೆಯಡಿ ದಾಖಲಾದ ಎಲ್ಲಾ ಪ್ರಕರಣಗಳ ವಿಚಾರಣೆಯನ್ನು ಆರು ತಿಂಗಳೊಳಗೆ ಪೂರ್ಣಗೊಳಿಸುವಂತೆ” ಕೇಂದ್ರ ಕಾನೂನು ಸಚಿವ ರವಿಶಂಕರ್ ಪ್ರಸಾದ್ ದೇಶದ ಎಲ್ಲಾ ಹೈಕೋರ್ಟ್ ಗಳ ಮುಖ್ಯ ನ್ಯಾಯಾಧೀಶರಿಗೆ ಪತ್ರ ಮುಖೇನ ತಿಳಿಸಿರುವುದಾಗಿ ವರದಿ ಹೇಳಿದೆ.
ಅಲ್ಲದೇ ಇಂತಹ ಪ್ರಕರಣಗಳ ತನಿಖೆಯನ್ನು ಎರಡು ತಿಂಗಳೊಳಗೆ ಪೂರ್ಣಗೊಳಿಸುವಂತೆ ಎಲ್ಲಾ ರಾಜ್ಯದ ಮುಖ್ಯಮಂತ್ರಿಗಳಿಗೂ ಈ ಸಂದರ್ಭದಲ್ಲಿ ನಿರ್ದೇಶನ ನೀಡಿದ್ದಾರೆ.
ಅತ್ಯಾಚಾರ, ಪೋಕ್ಸೋ ಪ್ರಕರಣದ ವಿಚಾರಣೆಯನ್ನು ಶೀಘ್ರ ಹಾಗೂ ದಕ್ಷವಾಗಿ ನಿಭಾಯಿಸುವ ನೆಲೆಯಲ್ಲಿ ದೇಶಾದ್ಯಂತ 1023 ಫಾಸ್ಟ್ ಟ್ರ್ಯಾಕ್ (ಶೀಘ್ರ ವಿಚಾರಣಾ) ನ್ಯಾಯಾಲಗಳನ್ನು ಸ್ಥಾಪಿಸುವುದಾಗಿ ರವಿಶಂಕರ್ ಪ್ರಸಾದ್ ಈ ಸಂದರ್ಭದಲ್ಲಿ ಮಾಹಿತಿ ನೀಡಿದರು.
ಪ್ರಸ್ತುತ ದೇಶದಲ್ಲಿ 700 ಫಾಸ್ಟ್ ಟ್ರ್ಯಾಕ್ ಕೋರ್ಟ್ ಗಳಿವೆ. ಹೆಚ್ಚುವರಿ ಸೇರ್ಪಡೆಯಿಂದ ಫಾಸ್ಟ್ ಟ್ರ್ಯಾಕ್ ಕೋರ್ಟ್ ಗಳ ಸಂಖ್ಯೆ 1,723ಕ್ಕೆ ಏರಿಕೆಯಾಗಲಿದೆ ಎಂದರು.