ಬೀದರ: ಅಧಿಕಾರಿಗಳು ತಮ್ಮ ಜವಾಬ್ದಾರಿಯಿಂದ ತಪ್ಪಿಸಿಕೊಳ್ಳದೆ ತಮಗೆ ವಹಿಸಿದ ಕಾಮಗಾರಿಗಳನ್ನು ನಿಗದಿತ ಕಾಲಕಾಮಿತಿಯಲ್ಲಿ ಪೂರ್ಣಗೊಳಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ| ರಿಚರ್ಡ ವಿನ್ಸೆಂಟ್ ಡಿಸೋಜಾ ಹೇಳಿದರು.
ನಗರದ ಡಿಸಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಕೆಡಿಪಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಅಂಗನವಾಡಿ ಶಾಲೆ, ಇತರೆ ಯಾವುದೇ ಕಟ್ಟಡ ಮತ್ತು ಕಾಮಗಾರಿಗಳನ್ನು ನಿಗದಿತ ಕಾಲಮಿತಿಯಲ್ಲಿ ಪೂರ್ಣಗೊಳಿಸಬೇಕು. ಅಂದಾಗಲೇ ನಾವು ಹಾಕಿಕೊಂಡ ಗುರಿ ತಲುಪುತ್ತೇವೆ. ಇನ್ನು ಕೆಲವೊಂದು 2014-15 ಮತ್ತು 2016-17ನೇ ಸಾಲಿನ ಕಾಮಗಾರಿಗಳು ಬಾಕಿ ಉಳಿದಿದ್ದು, ಅವುಗಳನ್ನು ಕಾಲಮಿತಿಯಲ್ಲಿ ಮುಗಿಸಬೇಕು ಎಂದು ನಿರ್ದೇಶನ ನೀಡಿದರು.
ಜಿಲ್ಲೆಯಲ್ಲಿ ಶಿಕ್ಷಣ ಇಲಾಖೆ ಉತ್ತಮ ಕೆಲಸ ಮಾಡಿ ಮಕ್ಕಳ ಫಲಿತಾಂಶ ಹೆಚ್ಚಿಸಬೇಕು. ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಮರಳಿ ಶಾಲೆಗೆ ಸೇರಿಸುವ ಕೆಲಸ ಆಗಬೇಕು. ತಾಲೂಕು ಹಂತದಲ್ಲಿ ಆಗಾಗ ಬಿಒಗಳ ಸಭೆ ಕರೆದು ಜಿಲ್ಲೆಯಲ್ಲಿ ನಡೆಯುತ್ತಿರುವ ಶಿಕ್ಷಣ ಚಟುವಟಿಕೆಗಳ ಕುರಿತು ಅವರಿಗೆ ಮಾರ್ಗದರ್ಶನ ನೀಡಬೇಕು ಎಂದು ಡಿಡಿಪಿಗೆ ಸೂಚಿಸಿದ ಅವರು, ಕಳೆದ ವರ್ಷ ಸಮಾಜ ಕಲ್ಯಾಣ ಇಲಾಖೆಯಿಂದ ಕೆಲ ವಿದ್ಯಾರ್ಥಿಗಳಿಗೆ ಸ್ಕಾಲರ್ ಶಿಪ್ ಬಂದಿರುವುದಿಲ್ಲ ಎಂಬ ದೂರುಗಳಿದ್ದು, ಅದನ್ನು ಸರಿಪಡಿಸಲಾಗಿದೆ ಎಂದು ತಿಳಿಸಿದರು.
ಈ ವೇಳೆ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಿಂದ ಮಾಹಿತಿ ಪಡೆದರು ಜಿಲ್ಲೆಯಲ್ಲಿ ಒಟ್ಟು 135 ಕಾಮಗಾರಿಗಳಲ್ಲಿ 101 ಕಾಮಗಾರಿ ಪೂರ್ಣಗೊಳಿಸಲಾಗಿದ್ದು, 8 ಕಾಮಗಾರಿಗಳು ಚಾಲ್ತಿಯಲ್ಲಿವೆ. ಔರಾದ ತಾಲೂಕಿನಲ್ಲಿ ಈ ಕುರಿತು ಹೆಚ್ಚಾಗಿ ದೂರುಗಳು ಬರುತ್ತವೆ. ಮೊದಲನೇ ಹಂತದ ಕಾಮಗಾರಿ ಪೂರ್ಣಗೊಳಿಸಲಾಗುತ್ತಿದೆ. ಎರಡನೇ ಹಂತದ ಕಾಮಗಾರಿ ಪ್ರಾರಂಭಿಸಲಾಗಿದೆ. ಮೂರನೇ ಹಂತದ ಕಾಮಗಾರಿಗೆ ಡಿ.ಪಿ.ಆರ್ ತಯಾರಿಸಲಾಗುತ್ತಿದೆ ಎಂದು ಸಿಇಒ ಮಾಹಿತಿ ನೀಡಿದರು.
ಜಂಟಿ ಕೃಷಿ ನಿರ್ದೇಶಕಿ ತಾರಾಮಣಿ ಮಾತನಾಡಿ, ಜಿಲ್ಲೆಯಲ್ಲಿ ಜ.1ರಿಂದ ಜೂ.16ರ ವರೆಗೆ 105 ಮೀ.ಮೀ ಮಳೆಯಾಗಿದ್ದು, ಜೂ.20ರಿಂದ ಉತ್ತಮ ಮಳೆ ಆಗುವ ಸಾಧ್ಯತೆ ಇದೆ. ರೈತ ಸಂಪರ್ಕ ಕೇಂದ್ರಗಳಲ್ಲಿ ಬಿತ್ತನೆ ಬೀಜ, ರಸಗೊಬ್ಬರ ದಾಸ್ತಾನು ಮಾಡಲಾಗಿದ್ದು, ರೈತರು ಉತ್ತಮ ಮಳೆಯಾದ ನಂತರವೇ ಬಿತ್ತನೆ ಮಾಡಬೇಕು ಎಂದು ಜಾಗೃತಿ ಮೂಡಿಸಲಾಗಿದೆ. ರೈತರ ಮಕ್ಕಳಿಗೆ ರೈತ ವಿದ್ಯಾನಿಧಿ ಯೋಜನೆಯಡಿ ಶಿಕ್ಷಣಕ್ಕಾಗಿ ಸಹಾಯಧನ ನೀಡಲಾಗುತ್ತಿದೆ ಎಂದು ಹೇಳಿದರು.
ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಮಾತನಾಡಿ, ಆಯುಷ್ಮಾನ್ ಭಾರತ ಆರೋಗ್ಯ ಕರ್ನಾಟಕ ಆರೋಗ್ಯ ಕಾರ್ಡಗಳನ್ನು ಜಿಲ್ಲೆಯಲ್ಲಿ ಶೇ.40ರಷ್ಟು ವಿತರಿಸಲಾಗಿದೆ. ಇನ್ಮುಂದೆ ಜಿಲ್ಲೆಯ 301 ಗ್ರಾಮ ಒನ್ ಸೆಂಟರ್ ಕೇಂದ್ರಗಳಲ್ಲಿ ಆಧಾರ ಕಾರ್ಡ್ ಮತ್ತು ರೇಷನ್ ಕಾರ್ಡ್‌ಗಳನ್ನು ತೆಗೆದುಕೊಂಡು ಹೋಗಿ ಜನರು ಈ ಕಾರ್ಡ್‌ಗಳನ್ನು ಪಡೆಯಬಹುದಾಗಿದೆ. ಅಮೃತ ನಗರೋಸ್ಥಾನ ಯೋಜನೆಯಡಿ ಬಸವಕಲ್ಯಾಣ ಆಯ್ಕೆ ಮಾಡಿದ್ದು, ಇದರ ಸಿವಿಲ್ ಕಾಮಗಾರಿಗಳು ನಡೆಯುತ್ತಿವೆ ಎಂದು ತಿಳಿಸಿದರು.
ಸಭೆಯಲ್ಲಿ ಜಿಪಂ ಸಿಇಒ ಜಹೀರಾ ನಸೀಮ್, ಸಹಾಯಕ ಆಯುಕ್ತ ನಯೀಮ್ ಮೋಮಿನ್, ಡಿಎಚ್‌ಒ ಡಾ| ರತಿಕಾಂತ ಸ್ವಾಮಿ ಸೇರಿದಂತೆ ವಿವಿಧ ಇಲಾಖೆಯ ಜಿಲ್ಲಾಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.