ಕಾರವಾರ: ಟೆಂಡರ್ ಷರತ್ತಿಗೆ ಅನುಗುಣವಾಗಿಯೇ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ. ದೇಶಪಾಂಡೆ ತಿಳಿಸಿದರು.
ಶನಿವಾರ ಜಿಪಂ ಕಚೇರಿಯಲ್ಲಿ ನಡೆದ ಜಿಲ್ಲಾ ಖನಿಜ ಪ್ರತಿಷ್ಠಾನ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಒಮ್ಮೆ ಟೆಂಡರ್ ಆದ ಮೇಲೆ ಯಾವುದೇ ಕಾರಣಕ್ಕೂ ಅದರ ಷರತ್ತಿನಂತೆ ಕಾಮಗಾರಿ ನಡೆಯಬೇಕು ಮತ್ತು ನಿಗದಿತ ಅವಧಿಯಲ್ಲಿ ಪೂರ್ಣಗೊಳ್ಳಬೇಕು. ಅದೇ ರೀತಿ ಗಣಿ ಮತ್ತಿತರ ಸಂತ್ರಸ್ತ ಪ್ರದೇಶದ ಕಾಮಗಾರಿಗಳು ಯಾವುದೇ ಕಾರಣಕ್ಕೂ ವಿಳಂಬವಾಗಬಾರದು ಎಂದರು.
ಪ್ರತಿಷ್ಠಾನ ಸಭೆಯಲ್ಲಿ ಕೈಗೊಂಡ ನಿರ್ಣಯಗಳನ್ನು ಬದಲಿಸುವ ಅಥವಾ ಕೈಬಿಡುವ ಅಧಿಕಾರ ಜಿಲ್ಲಾಧಿಕಾರಿಗಳಿಗೂ ಇರುವುದಿಲ್ಲ ಎಂದ ಅವರು, ಷರತ್ತಿನಂತೆ ಕಾಮಗಾರಿ ಮುಗಿಸಬೇಕು. ಕಾಮಗಾರಿ ಮುಗಿಸಿದ ವಾರದೊಳಗೆ ಬಿಲ್ಲುಗಳು ಪೂರ್ಣಗೊಳ್ಳಬೇಕು. ಇದಕ್ಕೆ ಯಾವುದೇ ಹಣಕಾಸಿನ ತೊಂದರೆ ಇರುವುದಿಲ್ಲ ಎಂದು ಸಚಿವರು ತಿಳಿಸಿದರು.
ಗಣಿ ಸಂತ್ರಸ್ತ ಪ್ರದೇಶದಲ್ಲಿ ಕೈಗೊಂಡ ಕಾಮಗಾರಿಗಳ ಉಸ್ತುವಾರಿಯನ್ನು ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ವಹಿಸಬೇಕು ಮತ್ತು ಈ ಯೋಜನೆಯಡಿ ನೀಡಲಾಗುವ ಇತರ ಸೌಲಭ್ಯಗಳನ್ನು ಆಯಾ ವಿಧಾನಸಭಾ ಕ್ಷೇತ್ರದ ಜನಪ್ರತಿನಿಧಿಗಳ ಮೂಲಕ ವಿತರಿಸುವಂತೆ ಜಿಲ್ಲಾಧಿಕಾರಿಗೆ ಅವರು ಸೂಚಿಸಿದರು.
ಪ್ರತಿಷ್ಠಾನದ ಅಡಿಯಲ್ಲಿ ಕೈಗೊಂಡ ಕಾಮಗಾರಿಗಳ ಅಂದಾಜು ಪಟ್ಟಿಯನ್ನು ಶೀಘ್ರವೆ ಸಲ್ಲಿಸಿ ಅನುಮೋದನೆ ಪಡೆಯಬೇಕು ಎಂದು ಕೂಡಾ ಅವರು ತಿಳಿಸಿದರು.